ಜಿದ್ದ : ಜಿದ್ದಕ್ಕೆ ವಿಮಾನದಲ್ಲಿ ಬಂದಿಳಿದ ಕೂಡಲೇ ಮಕ್ಕಕ್ಕೆ ತೆರಳಿದ ಕೇಂದ್ರ ಅಲ್ಪಸಂಖ್ಯಾತ ಮತ್ತು ಹಜ್ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಉಮ್ರಾ ನಿರ್ವಹಿಸಿದ್ದಾರೆ. ಈ ವರ್ಷದ ಹಜ್ ಯಾತ್ರೆಗೆ ಸಂಬಂಧಿಸಿ ಸೌದಿ ಅರೇಬಿಯದ ಹಜ್ ಸಚಿವಾಲಯದೊಂದಿಗೆ ಹಜ್ ಒಪ್ಪಂದದಲ್ಲಿ ಸಹಿ ಹಾಕಲು ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಜಿದ್ದಕ್ಕೆ ಬಂದಿದ್ದರು. ರವಿವಾರ ಮಧ್ಯಾಹ್ನ ಹಜ್ ಸಚಿವಾಲಯದ ಕಚೇರಿಯಲ್ಲಿ ಸಹಿ ಹಾಕುವ ಕಾರ್ಯಕ್ರಮವಿತ್ತು. ಅವರು ಶನಿವಾರ ಬೆಳಗ್ಗೆ ಜಿದ್ದಕ್ಕೆ ವಿಮಾನದಲ್ಲಿ ಬಂದಿಳಿದಿದ್ದರು ನಂತರ ತಮ್ಮ ಸಂಗಡಿಗರೊಡನೆ ನೇರವಾಗಿ ಮಕ್ಕಕ್ಕೆ ಹೋಗಿ ಉಮ್ರ ನಿರ್ವಹಿಸಿದ್ದಾರೆ. ಸೌದಿಯ ಭಾರತ ರಾಯಭಾರಿ ಅಹ್ಮದ್ ಜಾವೇದ್, ಜಿದ್ದದ ಕಾನ್ಸುಲ್ ಜನರಲ್ ಮುಹಮ್ಮದ್ ನೂರ್ ರಹ್ಮಾನ್ ಶೇಕ್ ಸಚಿವರ ಜೊತೆಗಿದ್ದರು.
ಕಳೆದ ವರ್ಷ 1,70,000 ಭಾರತೀಯರಿಗೆ ಹಜ್ ನಿರ್ವಹಿಸುವ ಅವಕಾಶ ಸಿಕ್ಕಿತ್ತು ಎಂದು ವರದಿಯಾಗಿದೆ. ಈ ಬಾರಿಯೂ ಇಷ್ಟೇ ಸಂಖ್ಯೆಯಲ್ಲಿ ಜನರಿಗೆ ಹಜ್ ತೀರ್ಥ ಯಾತ್ರೆಯನ್ನು ನಡೆಸುವ ಅವಕಾಶ ಸಿಗಲಿದೆ. ನಿಕಟ ಬಂಧುವಾದ ಪುರುಷನ(ಮೆಹ್ರಂ) ಸಹಾಯವಿಲ್ಲದೆ ಹಜ್ಗೆ ಹೋಗುವುದಕ್ಕೆ ಈ ಬಾರಿ ಸೌದಿ ಸರಕಾರ ಮಹಿಳೆಯರಿಗೆ ಅನುಮತಿ ನೀಡುತ್ತಿದೆ. ಸೌದಿಯೊಂದಿಗೆ ಹಜ್ ಒಪ್ಪಂದದಲ್ಲಿ ಸಹಿ ಹಾಕುವ ಎಲ್ಲ ದೇಶಗಳಿಗೂ ಈ ವಿನಾಯತಿ ಲಭಿಸಲಿದೆ. ಈ ವರ್ಷದ ಹಜ್ಗೆ ಇದೇ ರೀತಿಯಲ್ಲಿ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ಕ್ರಮ ಕೈಗೊಳ್ಳುತ್ತಿದೆ. ಒಟ್ಟು 1300 ಮಹಿಳೆಯರಿಗೆ ಮೆಹ್ರಂ ಇಲ್ಲದೆ ಹಜ್ ನಿರ್ವಹಿಸಲು ಅವಕಾಶ ಸಿಗಲಿದೆ ಎನ್ನುವ ನಿರೀಕ್ಷೆ ವ್ಯಕ್ತವಾಗುತ್ತಿದೆ.

Leave a Reply