ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಫನಿ ಚಂಡಮಾರುತ ತಮಿಳುನಾಡಿನ ಭಾಗದಲ್ಲಿ ತೀವ್ರಗೊಂಡರೂ ಕರ್ನಾಟಕದ ಮೇಲೆ ಅದರ ಪರಿಣಾಮ ಬೀರುವುದಿಲ್ಲ, ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ಚಂಡಮಾರುತದಿಂದಾಗಿ ರಾಜ್ಯದ ಕೆಲವು ಭಾಗಗಳಲ್ಲಿ ಮೋಡದ ವಾತಾವರಣ ಕಂಡುಬರಲಿದ್ದು ಚಿಕ್ಕಮಗಳೂರು, ಕೊಡಗು, ಹಾಸನ, ಮಂಡ್ಯ, ಕೋಲಾರ, ಬೆಂಗಳೂರು, ರಾಮನಗರ ಭಾಗದಲ್ಲಿ ಹಾಗೂ ಕರಾವಳಿಯಲ್ಲೂ ರಭಸದ ಗಾಳಿಯೊಂದಿಗೆ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ. ಚಂಡಮಾರುತದ ದಿಕ್ಕು ಬದಲಿಸಿರುವುದರಿಂದ ಅದರ ಪರಿಣಾಮ ಕರ್ನಾಟಕದ ಮೇಲೆ ಆಗುವುದು ತೀರಾ ಕಡಿಮೆ. ಈಗ ಚಂಡಮಾರುತ ಒರಿಸ್ಸಾದತ್ತ ಸಾಗುತ್ತಿದೆ. ತಮಿಳುನಾಡು, ಆಂಧ್ರ ಕರಾವಳಿ ಭಾಗದಲ್ಲಿ ಗಾಳಿ ಸಮೇತ ಭಾರೀ ಮಳೆಯಾಗಬಹುದು ಎಂದು ವಿವರಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಮಂದಗತಿಯಲ್ಲಿ ಸಾಗುತ್ತಿದ್ದು, ಮೇ 3ರ ವೇಳೆಗೆ ಭೂ ಪ್ರವೇಶ ಮಾಡುವ ಸಾಧ್ಯತೆಗಳಿವೆ. ಅಲ್ಲಿಯವರೆಗೂ ಸಮುದ್ರದಲ್ಲೇ ಇರುವುದರಿಂದ ದಿನದಿಂದ ದಿನಕ್ಕೆ ಚಂಡಮಾರುತ ಬಲಗೊಳ್ಳುತ್ತ ಹೋಗುತ್ತದೆ. ಇದರಿಂದಾಗಿ ಫನಿ ಚಂಡಮಾರುತದ ಮಾರಕ ಪರಿಣಾಮ ರಾಜ್ಯದ ಮೇಲಾಗುವುದಿಲ್ಲ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಹಾಗೂ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ