ಕೋಝಿಕ್ಕೋಡ್: ಸಾಮ್ರಾಜ್ಯಶಾಹಿಗಳು ವೈರಿ ದೇಶಗಳಲ್ಲಿ ಜನಾಂಗೀಯತೆ, ಕೋಮುವಾದ, ವಿಭಜನಾವಾದವನ್ನು ಬೆಳೆಸಿ ದಾಳಿ ನಡೆಸುತ್ತಾರೆ. ಇಸ್ಲಾಮೊಫೋಬಿಯವನ್ನು ಇರಾಕ್ ಅಫ್ಘಾನಿಸ್ತಾನದಲ್ಲಿ ಯಶಸ್ವಿಯಾಗಿ ಪ್ರಯೋಗಿಸಿ ಈಗ ಲಿಬಿಯ, ಸಿರಿಯದಲ್ಲಿ ಅದನ್ನು ಹರಡುತ್ತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿವಿಜಯನ್ ಹೇಳಿದ್ದಾರೆ.

ಅವರು ಕಾರಂದೂರ್ ಮರ್ಕಝ್‍ನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು.

ಧರ್ಮಗಳ ಮರೆಯಲ್ಲಿ ತೀವ್ರವಾದ, ಭಯೋತ್ಪಾದಕ ಶಕ್ತಿಗಳನ್ನು ಅವರು ಬೆಳೆಯುವಂತೆ ನೋಡಿಕೊಳ್ಳುತ್ತಿದ್ದು, ಇದಕ್ಕಾಗಿ ಧಾರಾಳ ಹಣ, ಅಸ್ತ್ರಗಳನ್ನು ಕೊಟ್ಟು ತರಬೇತಿನೀಡುತ್ತಿದ್ದಾರೆ. ಆದ್ದರಿಂದ ವಿಶ್ವಾಸಿಗಳು ಇಂತಹ ಸಾಮ್ರಾಜ್ಯ ಶಾಹಿಗಳ ಕೈಗೊಂಬೆಯಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಅವರಿಗೆ ಈ ಕುರಿತು ಸರಿಯಾದ ಶಿಕ್ಷಣವನ್ನು ಧಾರ್ಮಿಕ ವಿದ್ವಾಂಸರು ನೀಡಬೇಕಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಪಿಣರಾಯಿ ವಿಜಯನ್ ಮುಂದುವರಿದು ಮಾತಾಡುತ್ತಾ ಕೆಲವು ಕೋಮುವಾದಿ ಸಂಘಟನೆಗಳು ಸಾಮ್ರಾಜ್ಯ ಶಾಹಿಗಳ ಉಪಕರಣವಾಗುವುದನ್ನು ನಾವು ಕಾಣುತ್ತಿದ್ದೇವೆ. ಮನುಷ್ಯರನ್ನು ಸ್ವಲ್ಪವೂ ಕರುಣೆಯಿಲ್ಲದೆ ಕೊಲ್ಲಲಾಗುತ್ತಿದೆ. ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬರನ್ನು ಜೀವಂತವಾಗಿ ಸುಟ್ಟು ಕೊಂದಿರುವುದನ್ನು ನಾವು ಕಂಡೆವು. ಇದನ್ನು ಬೆಂಬಲಿಸುವವರು ಇದ್ದಾರಲ್ಲ ಎಂದು ಅವರು ವಿಷಾದ ಸೂಚಿಸಿದರು. ಕೋಮು ಘರ್ಷಣೆಗೂ ಸಾಮ್ರಾಜ್ಯ ಶಾಹಿಗಳೇ ಕಾರಣವಾಗುತ್ತಿದ್ದಾರೆ. ಅವರ ಬೆಂಬಲ ಪಡೆದವರು ನಿರ್ದಯಿಗಳಾಗುತ್ತಿದ್ದಾರೆ. ಸಾಮ್ರಾಜ್ಯಶಾಹಿ ಶಕ್ತಿ ಮನುಷ್ಯರನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ ಎನ್ನುವುದಕ್ಕೆ ಅಮೆರಿಕದ ಅಧ್ಯಕ್ಷ ಟ್ರಂಪ್, ಜೆರುಸಲೇಮನ್ನು ಇಸ್ರೇಲಿನ ರಾಜಧಾನಿಯೆಂದು ಏಕ ಪಕ್ಷವಾಗಿ ಘೋಷಿಸಿದ್ದು ಇತ್ತೀಚೆಗಿನ ತಾಜಾ ಉದಾಹರಣೆಯೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ವಹಿಸಿದ್ದರು.

Leave a Reply