ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅತ್ಯಂತ ಪ್ರಚಂಡ ಬಹುಮತದಿಂದ ಆರಿಸಿ ಬಂದಿರುವ ಹಿನ್ನೆಲೆಯಲ್ಲಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪದಗ್ರಹಣಕ್ಕೂ ಮುನ್ನ ಗುರುವಾರ ಮುಂಜಾನೆ ದೆಹಲಿಯಲ್ಲಿ ರಾಷ್ಟ್ರಪಿತ ಗಾಂಧೀಜಿ ಸೇರಿದಂತೆ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.
ಮೋದಿ ಅವರು ರಾಜ್‌ಘಾಟ್ ನಲ್ಲಿನ ಮಹಾತ್ತಾ ಗಾಂಧಿ ಅವರ ಸಮಾಧಿ ಸ್ಥಳಕ್ಕೆ ಪುಷ್ಪಾರ್ಚನೆ ಮಾಡಿ ಕೆಲಹೊತ್ತು ಕುಳಿತು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ಬಳಿ ತೆರಳಿ ಗೌರವ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರು ಮತ್ತು ಕೆಲವು ಸಂಸದರು ಹಾಜರಿದ್ದರು. ಆ ಬಳಿಕ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ನಂತರ ಹುತಾತ್ಮರಾದ ಯೋಧರಿಗೆ ನರೇಂದ್ರ ಮೋದಿ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ಈ ಸಂದರ್ಭ ಮೋದಿ ಅವರ ಜತೆ ನಿರ್ಗಮಿತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಆರ್.ಕೆ.ಎಸ್.ಬದೌರಿಯ ಹಾಜರಿದ್ದರು.

Leave a Reply