Representational image

ಹೊನ್ನಾಳಿ: ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ದೇವರಾಜ್ ಎಂಬ ಯುವಕ ತಾನು ಪ್ರೀತಿಸುತ್ತಿರುವ ಯುವತಿಯ ತಂದೆ ಪ್ರಕಾಶ್ ಎಂಬುವವರ ಮೇಲೆ ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದ ಘಟನೆ ತಾಲೂಕಿನ ಬಿದರಗಡ್ಡೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಜರುಗಿದೆ. ಬಿದರಗಡ್ಡೆ ಗ್ರಾಮದ ಚಂದ್ರಪ್ಪ ಎಂಬುವವರ ಮಗ ದೇವರಾಜ್‌ ಕಳೆದ ಏಳೆಂಟು ವರ್ಷಗಳಿಂದ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದು ಇದೇ ಗ್ರಾಮದ ಪ್ರಕಾಶ್ ಎಂಬುವವರ ಮಗಳನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡು ತೊಂದರೆ ಕೊಡುತ್ತಿದ್ದು ಈ ಕುರಿತು ಈ ಹಿಂದೆ ಅನೇಕ ಬಾರಿ ಗ್ರಾಮಸ್ಥರೊಂದಿಗೆ ನ್ಯಾಯ ಪಂಚಾಯಿತಿ ಕೂಡ ಮಾಡಲಾಗಿತ್ತು.
ಯೋಧ ದೇವರಾಜ್ ತನ್ನ ಚಿಕ್ಕಪ್ಪನ ಮಗಳ ಮದುವೆಗೆಂದು ಬಿದರಗಡ್ಡೆಗೆ ಬಂದಿದ್ದು ಶುಕ್ರವಾರ ತಡರಾತ್ರಿ ಏಕಾಏಕಿಯಾಗಿ ಯುವತಿಯ ಮನೆಗೆ ತೆರಳಿ ಹೆಂಚುಗಳಿಗೆ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಕೇಳಿ ಪ್ರಕಾಶ್ ಎದ್ದು ಬಂದು ಬಾಗಿಲು ತೆರೆಯುತ್ತಿದ್ದಂತೆ ಅವರ ಮೇಲೆ ಕೂಡ ಗುಂಡು ಹಾರಿಸಿದ್ದಾನೆ.

ದೇವರಾಜ್ ಹಾರಿಸಿದ ಗುಂಡು ಪ್ರಕಾಶ್ ಅವರ ಪಕ್ಕೆಲೆಬು ಹಾಗೂ ಇನ್ನೊಂದು ಗುಂಡು ಹೊಟ್ಟೆಗೆ ತಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಗಾಯಗೊಂಡಿದ್ದ ಪ್ರಕಾಶ್ ಅವರನ್ನು ಹೊನ್ನಾಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆ ಮೂಲಕ ಒಂದು ಗುಂಡನ್ನು ಹೊರತೆಗೆದಿದ್ದು ಇನ್ನೊಂದು ಗುಂಡು ಪತ್ತೆಯಾಗಿಲ್ಲ. ಆದರೂ ಪ್ರಕಾಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಪ್ರಕಾಶ್ ಮೇಲೆ ಮೇಲೆ ಗುಂಡು ಹಾರಿಸಿದ ಯೋಧ ದೇವರಾಜ್, ನಂತರ ಹೊನ್ನಾಳಿ ಪೊಲೀಸ್ ಠಾಣೆಗೆ ತಡ ರಾತ್ರಿಯೇ ಬಂದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡು ಕೂಗಾಡುತ್ತಿದ್ದು ಪೊಲೀಸರು ಆತನನ್ನು ನಿಧಾನವಾಗಿ ಸಮಾಧಾನಪಡಿಸಿ ನಂತರ ಬಂಧಿಸಿ ಆತನಿಂದ 3 ನಾಡ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಟಿ.ಜೆ. ಉದೇಶ್ ತಿಳಿಸಿದ್ದಾರೆ.

Leave a Reply