ಸರಿಸುಮಾರು ನಾಲ್ಕು ಗಂಟೆಯ ಆಸುಪಾಸು. ಬಿಳಿ ಪಂಚೆ, ಅಂಗಿ ತೊಟ್ಟ ಮಧ್ಯಮ‌ ವರ್ಗದಿಂದ ಬಂದತೆ ಕಾಣುತ್ತಿರುವ ವಯಸ್ಕ ವ್ಯಕ್ತಿಯೊಬ್ಬರು ಬಸ್ ನಿಲ್ದಾಣದ ಒಳಗೆ ಕೂತು ಚಿಲ್ಲರೆ ಹಣವನ್ನು ಪದೇಪದೇ ಎಣಿಸುತ್ತಿದ್ದರು. ಅಲ್ಲೇ ಪಕ್ಕದಲ್ಲಿ ಕೂತಿದ್ದ ಯುವಕನೊಬ್ಬ ಅವರನ್ನೇ ನೋಡುತ್ತಿದ್ದ.‌ ಆ ವಯಸ್ಕ ವ್ಯಕ್ತಿ ಇಡೀ ಜೇಬಲ್ಲೆಲ್ಲ ಕೈ ಅಲ್ಲಾಡಿಸ ತೊಡಗಿದರು. ಪಕ್ಕ ಕೂತ ಯುವಕ ಆ ವಯಸ್ಕ ವ್ಯಕ್ತಿಯನ್ನು ಕಂಡು “ತಾತ ನೀವು ಎಲ್ಲಿಗೆ ಹೋಗಬೇಕು? ಹಣದ ಕೊರತೆ ಏನಾದರು ಇದೀಯಾ? ನಿಮ್ಮನ್ನು ಆಗಲಿಂದ ಗಮನಿಸುತ್ತಿದ್ದೆ” ಎಂದಾಗ ಆ ವಯಸ್ಕ ವ್ಯಕ್ತಿ “ನಾನು ಇಲ್ಲೇ ಹತ್ತಿರ ಮಗಳ ಮನೆಗೆ ಹೋಗಬೇಕಾಗಿದೆ. ಬಸ್ಸಿಗೆ ಸ್ವಲ್ಪ ಚಿಲ್ಲರೆ ಕಡಿಮೆ ಆಗಿದೆ, ಅದಕ್ಕೆ ಬೇರೆ ಹಣ ಇದೀಯಾ ಅಂತ ಪರಿಶೀಲನೆ ನಡೆಸಿದೆ” ಎಂದರು.

ಪಕ್ಕದಲ್ಲಿದ್ದ ಯುವಕ ನೂರು ರುಪಾಯಿಯ ನೋಟೊಂದನ್ನು ಅವರ ಕೈಗಿಟ್ಟು ಅವರ ಕೈಯನ್ನು ಮಡಚಿ “ತಾತ ಈ ಹಣ ಇರಲಿ! ನೀವು ಹೋಗಬೇಕಾದ ಸ್ಥಳಕ್ಕೆ ಕ್ಷೇಮವಾಗಿ ಹೋಗಿ ಬನ್ನಿ” ಎಂದಾಗ ತಾತ ಎರಡು ಎತ್ತಿ “ನಿನಗೆ ಆ ಸೃಷ್ಟಿಕರ್ತ ನೂರು ಆರೋಗ್ಯ, ವಯಸ್ಸನ್ನು ನೀಡಿ ಕರುಣಿಸಲಿ” ಎಂದು ಬೇಡಿದಾಗ “ಅಲ್ಲ ತಾತ ಅದಿರಲಿ ನಿಮಗೆ ಗಂಡು ಮಕ್ಕಳು ಯಾರು ಇಲ್ವ” ಎಂದು ಕೇಳಿದನು. ಆ ವಯಸ್ಕ ವ್ಯಕ್ತಿಯ ಮುಖದಲ್ಲಿ ತುಸು ಬದಲಾವಣೆ ಕಾಣಿಸಿತು. ಮನಸ್ಸು ಬೇಡವೆಂದರು ನೋವನ್ನು ಒಂದು ಬಾರಿ ಹೊರಗೆ ಹಾಕಿ ಬಿಡುವ ಎಂಬ ಆಲೋಚನೆಯಲ್ಲಿ ಆ ವಯಸ್ಕ ವ್ಯಕ್ತಿ ಯುವಕನೊಡನೆ‌ ಹಂಚಿಕೊಳ್ಳಲು ಶುರುವಿಟ್ಟರು.

ನನಗೆ ಏಳು ಜನ ಮಕ್ಕಳು. ಅದರಲ್ಲಿ ಆರು ಗಂಡುಮಕ್ಕಳು ಹಾಗೂ ಒಬ್ಬಳೇ ಹೆಣ್ಣು ಮಗಳು. ನಾನೇನು ಬಡವನಲ್ಲ.‌ ನನ್ನಲ್ಲಿ ಸಾಕಷ್ಟು ಹಣ-ಆಸ್ತಿ ಇತ್ತು. ನನ್ನೆಲ್ಲಾ ಮಕ್ಕಳಿಗೂ ಬಹಳ ಅದ್ಧೂರಿಯಾಗಿ ಅವರಿಚ್ಛೆಯಂತೆ ಮದುವೆ ಕಾರ್ಯ ಮಾಡಿ ಮುಗಿಸಿದೆ. ಎಲ್ಲರಿಗೂ ಮದುವೆಯಾದ ಬಳಿಕ ನನ್ನ ಮಡದಿ ತೀರಿಕೊಂಡಳು. ಸಾಯುವ ಮುನ್ನ ನಮ್ಮೆಲ್ಲ‌ ಆಸ್ತಿಯನ್ನು ಮಕ್ಕಳಿಗೆ ಸಮಪಾಲು ಮಾಡಿಕೊಡುವಂತೆ ನನಗೆ ಹೇಳಿದ್ದಳು. ಅವಳ ಆಸೆಯಂತೆ ಯಾರಿಗೂ ಕುಂದುಕೊರತೆ ಮಾಡದಂತೆ ಸಮಾನವಾಗಿ ಆಸ್ತಿಯನ್ನು ಹಂಚಿಕೊಟ್ಟೆ. ಆಸ್ತಿ ಹಂಚಿದ ಒಂದೆರಡು ವರ್ಷದಲ್ಲಿ ಮಕ್ಕಳ ಮಧ್ಯೆಯೇ ಭಿನ್ನಾಭಿಪ್ರಾಯ ಬಂತು. ನನ್ನ ಆರು ಜನ ಸೊಸೆಯಂದಿರಿಗೆ ನಾನು ಮಾಡಿದ ಪಾಲು ತೃಪ್ತಿ ನೀಡಿಲ್ಲ. ಅವರ ಅತೃಪ್ತಿ ನಾನು ಪ್ರತಿದಿನವೂ ಒಂದೊಂದು ಮಕ್ಕಳ ಮನೆಯಲ್ಲಿ ಕಂಡೆ.

ನನಗೆ ಯಾವ ಮಕ್ಕಳ ಮನೆಯಲ್ಲೂ ನೆಮ್ಮದಿಯಿಂದ ಬದುಕಲು ಅವಕಾಶ ಇಲ್ಲದಂತಾಯಿತು. ನನ್ನ ಮಡದಿ ಬದುಕಿರುವಾಗ ನನ್ನನ್ನು ಒಂದು ದಿನವು ಸೋಲಲು ಬಿಟ್ಟಿಲ್ಲ. ನಾನು ಹೀಗೆಯೇ ಜೀವನದ ಕೊನೆಯ ದಿನದವರೆಗೂ ಬಿಳಿ ಪಂಚೆ-ಅಂಗಿ ಹೆಗಲ ಮೇಲೆ ಬಿಳಿ ಟವೆಲ್ ಇರಬೇಕೆಂಬುದು ಕೂಡ ಅವಳ ಅಭಿಲಾಷೆಯಾಗಿತ್ತು. ಇವತ್ತು ನನ್ನ ಬಳಿ ಇರೋದು ಈ ಬಿಳಿ ಬಟ್ಟೆಗಳು ಮಾತ್ರ. ಅವಳು ಮಣ್ಣಾದ ಬಳಿಕ ಸೋತು ಬಿಟ್ಟೆ ಮಗ! ಜನ್ಮಕೊಟ್ಟ ಮಕ್ಕಳಿಗೆ ನಾನು ಬೇಡ. ನಾನು ಅವಳ ಜೊತೆಯೇ ಹೋಗಬೇಕಿತ್ತು ಎಂದು ಬಿಕ್ಕಳಿಸಿ ಅತ್ತಾಗ ಯುವಕನ ಕಣ್ಣಲ್ಲಿ ಕಂಬನಿಗಳು ಉದುರತೊಡಗಿದವು.

ಯುವಕ ತಾತನನ್ನು ಸಮಾಧಾನಿಸ ತೊಡಗಿದ್ದಾದರೂ ಅದು ನಿಷ್ಪ್ರಯೋಜಕ. ಯುವಕ ಅಸಹಾಯಕನಂತೆ ಅಲ್ಲೇ ಕುಳಿತು ಬಿಟ್ಟ. ತಾತನ ಹೋಗಬೇಕಾದ ಬಸ್ ಬಂತು. ಹೆಗಲ‌ ಮೇಲಿದ್ದ ಟವೆಲಿನಿಂದ ಕಣ್ಣೊರಿಸಿಕೊಂಡು ಬಸ್ಸನ್ನೇರಿ‌ ಕುಳಿತುಕೊಂಡು ಬಿಟ್ಟರು.

ಆ ಯುವಕ ತನ್ನ ಮನದಲ್ಲಿ ಈ ರೀತಿಯಲ್ಲಿ ಯೋಚಿಸತೊಡಗಿದ;‌ ಹೆತ್ತವರು ಮಕ್ಕಳಿಗಾಗಿ ಆಸ್ತಿ ಅಂತಸ್ತು ಮಾಡಿಡಬಾರದು. ಇವತ್ತು ಅದೆಷ್ಟೋ ಕೆಲ ಹೆತ್ತವರು ಬೀದಿಗೆ ಬರಲು ಇದೇ ಹಣ-ಆಸ್ತಿ ಕಾರಣ. ಜಾಗದ ತಕಾರರಿನಿಂದ ಅಣ್ಣ ತಮ್ಮಂದಿರ ನಡುವೆ ಕಂದಕ ನಿರ್ಮಾಣ ಮಾಡುವುದರಲ್ಲಿ ಸಂಪತ್ತು ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಅಣ್ಣ-ತಮ್ಮಂದಿರಿಗೆ ತೃಪ್ತಿಕರವಾದರೂ ಮನೆ ಬೆಳಗುತ್ತೇವೆ ಎಂದು ಬರುವ ಕೆಲ ಸೊಸೆಯಂದಿರಿಗೆ ತೃಪ್ತಿ ಉಂಟಾಗುವುದಿಲ್ಲ. ಕೆಲವೊಮ್ಮೆ ಹಲ್ಲೆ, ಕೊಲೆಯಂತ ಪ್ರಕರಣಗಳು ಕೂಡ ನಡೆಯುತ್ತವೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದಕ್ಕಿಂತ ದೊಡ್ಡದಾದ ಸಂಪತ್ತು ಇನ್ನೊಂದಿಲ್ಲ. ಎಲ್ಲ ಕಡೆ ಇಂತಹ ಜನ‌ ಇರಲಾರರು ಆದರೆ ಕೆಲವು ಮನೆಯಲ್ಲಿ ಇದಕ್ಕಿಂತಲೂ ಕ್ರೂರವಾದ ಪ್ರಸಂಗಗಳು ನಡೆಯುತ್ತಿರುತ್ತವೆ ಅನ್ನೋದು ಅಷ್ಟೇ ಸತ್ಯ!!

ಲೇಖಕರು: ಸಲಾಂ ಸಮ್ಮಿ

Leave a Reply