ಚಾಮರಾಜನಗರ: ‘ಆರ್‌ಎಸ್‌ಎಸ್, ಬಜರಂಗ ದಳದವರೇ ಉಗ್ರಗಾಮಿಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ತಾಲ್ಲೂಕಿನ ನಾಗವಳ್ಳಿ ಗ್ರಾಮಕ್ಕೆ ಬುಧವಾರ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ಕಾರ್ಯಕರ್ತರು ಭಾಗಿಯಾಗಿರುವುದರಿಂದ ಸಂಘಟನೆಯನ್ನು ನಿಷೇಧಿಸುವಂತೆ ಬಿಜೆಪಿ ಒತ್ತಾಯಿಸುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ಸೂಕ್ತ ದಾಖಲೆಗಳು ದೊರಕಿಲ್ಲ ಎಂದರು.

ಪಿಎಫ್‌ಐ, ಎಸ್‌ಡಿಪಿಐ, ಆರ್‌ಎಸ್‌ಎಸ್, ಬಜರಂಗದಳ, ವಿಎಚ್‌ಪಿ ಯಾವುದೇ ಸಂಘಟನೆಯಾದರೂ ಸಾಮರಸ್ಯ ಕದಡುವುದನ್ನು, ಕೋಮುವಾದಕ್ಕೆ ಪ್ರಚೋದನೆ ನೀಡುವುದನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದರು.

ನಾಣಯ್ಯ ಭೇಟಿಯಲ್ಲಿ ವಿಶೇಷವಿಲ್ಲ: ಮಡಿಕೇರಿಯಲ್ಲಿ ಜೆಡಿಎಸ್ ಮುಖಂಡ ಎಂ.ಸಿ. ನಾಣಯ್ಯ ಅವರ ಭೇಟಿ ಮಾಡಿರುವುದರಲ್ಲಿ ವಿಶೇಷ ಅರ್ಥವೇನಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಾಣಯ್ಯ ಅವರು 1983ರಿಂದಲೂ ಆತ್ಮೀಯರು. ಅವರ ಆರೋಗ್ಯ ಸರಿಯಿಲ್ಲ. ಆಸ್ಪತ್ರೆಯಲ್ಲಿ ಇರುವುದರಿಂದ ಭೇಟಿ ಮಾಡಿ ಕ್ಷೇಮ ವಿಚಾರಿಸಿದ್ದೇನೆ ಅಷ್ಟೇ ಎಂದರು.

ಮುಖ್ಯಮಂತ್ರಿ ಆಗೋದೇ ಇಲ್ವಲ್ಲ: ಅಧಿಕಾರಕ್ಕೆ ಬಂದ ಬಳಿಕ ಸಿದ್ದರಾಮಯ್ಯ ವಿರುದ್ಧದ ಎಲ್ಲ ಎಫ್‌ಐಆರ್‌ಗಳ ದಾಖಲೆಯನ್ನು ಮನೆಮನೆಗೆ ಹಂಚುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕೇಸುಗಳೇ ಇಲ್ಲವಲ್ಲ. ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಲಿ. ಅಷ್ಟಕ್ಕೂ ಅವರು ಮುಖ್ಯಮಂತ್ರಿ ಆಗಬೇಕಲ್ಲ. ಎಲ್ಲಿಂದ ಆಗ್ತಾರೆ’ ಎಂದು ಲೇವಡಿ ಮಾಡಿದರು.

ಪ್ರಜಾಸೇವಕರಾಗಲಿ
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ‌ ಕುಮಾರಸ್ವಾಮಿ ಕಿಂಗ್ ಆಗುವುದು ಬೇಡ ಎಂದವರು ಯಾರು? ಈಗ ಕಿಂಗ್ ಇಲ್ಲ. ಅವರು ಪ್ರಜಾಸೇವಕರಾಗಲಿ ಎಂದು ಸಿದ್ದರಾಮಯ್ಯ ಹೇಳಿದರು.

ಕೃಪೆ : ಪ್ರಜಾವಾಣಿ

Leave a Reply