ಹೂವಿನಹಡಗಲಿ : ದಿನ ಬೆಳಿಗ್ಗೆ ಐದು ಗಂಟೆಗೆ ಎದ್ದು ಪಟ್ಟಣದೆಲ್ಲೆಡೆ ಮನೆ ಮನೆಗೆ ಪತ್ರಿಕೆಗಳನ್ನು ಹಂಚುವ ಬಾಲಕ ಹರೀಶ ವಾಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇಲ್ಲಿನ ಮ.ಮ.ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿರುವ ಹರೀಶ್ 537 (ಶೇ 89.5) ಅಂಕ ಗಳಿಸುವ ಮೂಲಕ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. – ಎಸ್ಸೆಸ್ಸೆಲ್ಸಿಯಲ್ಲಿಯೂ ಇದೇ ರೀತಿಯ ಶೈಕ್ಷಣಿಕ ಸಾಧನೆ ಮಾಡಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದ ಹರೀಶ್ ಈಗ ದ್ವಿತೀಯ ಪಿಯುಸಿಯಲ್ಲಿಯೂ ಉತ್ತಮ ಸಾಧನೆ ಮಾಡುವ ಮೂಲಕ ತನ್ನ ಶೈಕ್ಷಣಿಕ ಸಾಧನೆ ಮೆರೆದಿದ್ದಾನೆ. ಪ್ರತಿದಿನವೂ ಪತ್ರಿಕೆಗಳನ್ನು ಹಂಚುವ ಮೂಲಕ ತನ್ನ ಶೈಕ್ಷಣಿಕ ಖರ್ಚುಗಳನ್ನು ತಾನೇ ನಿಭಾಯಿಸಿಕೊಂಡು ಹಲವು ಕೊರೆತಯ ನಡುವೆಯೂ ಉತ್ತಮ ಸಾಧನೆ ಮಾಡಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.

ಜ್ಞಾನದ ಹಸಿವು ಹೊಂದಿರುವ ಹರೀಶ್ ಮುಂದೆ ಏರೋನಾಟಿಕಲ್ ಇಂಜಿನಿಯರ್ ಆಗುವ ಕನಸು ಇದೆ. ಅದು ಸಾಧ್ಯವಾಗದಿದ್ದರೆ ಬಿಎಸ್ಸಿ (ಕೃಷಿ) ಪದವಿ ಪೂರ್ಣಗೊಳಿಸಿ ಐಎಎಸ್ ಸರ್ಧಾತ್ಮಕ ಪರೀಕ್ಷೆಗೆ ಅಣಿಯಾಗಬೇಕು ಎಂದುಕೊಂಡಿರುವೆ ಎಂದು ತಿಳಿಸಿದರು. ಈ ಎಲ್ಲ ಅನುಕೂಲಗಳು ಇದ್ದರೂ ಸಹ ಶೈಕ್ಷಣಿಕ ಸಾಧನೆ ಮಾಡುವಲ್ಲಿ ಹಿಂದೆ ಬೀಳುವ ವಿದ್ಯಾರ್ಥಿಗಳ ನಡುವೆ ತನ್ನ ಓದಿನ ಖರ್ಚನ್ನು ತಾನೇ ನಿಭಾಯಿಕೊಳ್ಳುವ ಪೇಪರ್ ಬಾಯ್ ಹರೀಶ್ ಮಾದರಿಯಾಗಿದ್ದಾರೆ. (ವರದಿ: ಸಂಯುಕ್ತ ಕರ್ನಾಟಕ)

Leave a Reply