ಇದು ನಮ್ಮ ಊರು ವಿಶೇಷ ವರದಿ.
ಇತ್ತೀಚೆಗೆ ವಾಟ್ಸಾಪ್, ಫೇಸ್‌ಬುಕ್‌‌ಗಲ್ಲಿ ಬರೀ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿರುವ ಸಂದೇಶಗಳೇ ಹರಿದಾಡುತ್ತಿದೆ. ಅದಕ್ಕೆ ಹೆಚ್ಚು ದೂರ‌ ಹೋಗುವ ಅವಶ್ಯಕತೆ ಇಲ್ಲ ಇತ್ತೀಚೆಗೆ ಕರಾವಳಿಯ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕೆಲವೊಂದು‌ ಪ್ರಸಂಗಗಳೇ ಸಾಕ್ಷಿ.

ನಿನ್ನೆ ಮಂಗಳೂರಿನಲ್ಲಿ‌ ಯುವತಿಯರ ಮೇಲೆ‌ ಪೋಲಿಸರ ಸಮ್ಮುಖದಲ್ಲೇ ನಡೆದ ಹಲ್ಲೆಗೆ ಬೆಂಬಲ ಸೂಚಿಸಿ, ಹೆಚ್ಚಿನ ನೈತಿಕ ಪೋಲಿಸ್ ಗಿರಿಯಲ್ಲಿ ಯುವಕರು ತೊಡಗಿಸಿಕೊಳ್ಳಲು ಕೆಲ ಕಿಡಿಗೇಡಿಗಳು ಫೇಸ್‌ಬುಕ್‌ ಪುಟಗಳ‌ ಮೂಲಕ ಪ್ರಚೋದನೆಯನ್ನು ನೀಡಿದ್ದಾರೆ. ಇನ್ನು ಕೆಲವರು ವಾಟ್ಸಾಪ್ ಮತ್ತು ಫೇಸ್‌ಬುಕ್‌‌ಗಳಲ್ಲಿ ಕಿಡಿ ಹತ್ತಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೂಲವಿಲ್ಲದ ಸುದ್ದಿಗಳಿಗೆ As Received ಎಂಬ ತಲೆ ಬರಹ ಕೊಟ್ಟು ರವಾನಿಸುವ ಮೂಲಕ ನಾಗರಿಕ ಸಮಾಜದ ನಿದ್ದೆಗೆಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಇಂದು ಮಂಗಳೂರಿನಲ್ಲಿ ಮತ್ತೊರ್ವ ಯುವಕನ ಕೊಲೆಯಾಗಿದೆ. ಹಿಂದು ಸಂಘಟನೆಯ ಕಾರ್ಯಕರ್ತ ಎನ್ನಲಾದ ದೀಪಕ್ ಎಂಬ ಯುವಕನನ್ನು ದುಷ್ಕರ್ಮಿಗಳು ತಲಾವಾರಿನಿಂದ ಕಡಿದು ಕೊಲೆ‌ ನಡೆಸಿದ್ದಾರೆ. ‌ಆರೋಪಿಗಳ‌ ಬಗ್ಗೆ ಪ್ರಾಥಮಿಕ ಮಾಹಿತಿ ಸಿಗುವ ಮುನ್ನವೇ ಪರಸ್ಪರ ಆರೋಪ ಪ್ರತ್ಯಾರೋಪಗಳು ಬರತೊಡಗಿದವೆ.‌ ಒಂದು ಸಂದೇಶದಲ್ಲಿ ಮೃತ ವ್ಯಕ್ತಿಗೆ ಅನೈತಿಕ ಸಂಬಂಧ ಕಲ್ಪಿಸಿದರೆ ಮತ್ತೊಂದು ಸಂದೇಶದಲ್ಲಿ ಸ್ವಯಂ ಕೋಮಿನ ಜನರಿಂದಲೇ ಹತ್ಯೆ ನಡೆಸಲಾಗಿದೆ ಎಂದಿದೆ.

ಒಂದೈದು ನಿಮಿಷ ಕಳೆದ ಬಳಿಕ ಮತ್ತೆ ಸಂದೇಶಗಳ ಮಹಾಪೋರ ಹರಿಯತೊಡಗುತ್ತದೆ. ಆರೋಪಗಳು ಹೆಸರು ಹೊರಬರುತ್ತಿದ್ದಂತೆ ಕೆಲವು ಕಿಡಿಗೆಡಿಗಳು ಅವರ ಹೆಸರು, ಧರ್ಮವನ್ನೇ ತಿರುಗಿಸಿ ಜನರ ದಿಕ್ಕು ತಪ್ಪಿಸುವ ಹುನ್ನಾರವನ್ನು ನಡೆಸಿದ್ದಾರೆ. ಒಟ್ಟಿನಲ್ಲಿ ನಕಲಿ ಸಂದೇಶಗಳು ಹಾಗು ಕಿಡಿ ಹೊತ್ತಿಸುವ ಬ್ರೇಕಿಂಗ್ ಸುದ್ದಿಗಳು ಜನಸಾಮಾನ್ಯರ ನೆಮ್ಮದಿಯನ್ನು ಕೆಡಿಸಿದೆ. ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು, ಗರ್ಭಿಣಿಯರು ಇದೀಗ ಗಲಭೆಯ ಭೀತಿಯಿಂದ ಮನೆಯಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.‌ ಒಟ್ಟಿನಲ್ಲಿ ಸಮಾಜದಲ್ಲಿ ಅಶಾಂತಿಯನ್ನು ಹುಟ್ಟು ಹಾಕಲು ಯುವಕರು ನಾಮುಂದು ತಾಮುಂದು ಎಂದು ಪೈಪೋಟಿ ನಡೆಸುತ್ತಿರುವುದು ಈ ದೇಶದ ದುರಂತ ಎನ್ನಬೇಕಾಷ್ಟೆ.

Leave a Reply