ಈ ಸುದ್ದಿ ನಂಬಲು ಸ್ವಲ್ಪ ಕಷ್ಟವೇ ಆದರೂ ಇದು ನಿಜ. ಪಾಕಿಸ್ತಾನದ ಲಾಹೋರ್ ನಲ್ಲಿ ಒಬ್ಬರು ತಾಯಿ ತನ್ನ ಮಗುವನ್ನು ಬೆಳೆಸಲು ಕಳೆದ ಹಲವಾರು ವರ್ಷಗಳಿಂದ ಗಂಡಸರ ಹಾಗೆ ವೇಷ ಭೂಷಣಗಳನ್ನು ತೊಟ್ಟು ಸಾರ್ವಜನಿಕವಾಗಿ ಬದುಕುತ್ತಿದ್ದಾರೆ. ಫೇಸ್ಬುಕ್ ಪೇಜ್ ಒಂದು ಈ ಬಗ್ಗೆ ವರದಿ ಮಾಡುವ ವರೆಗೆ ಅವರ ಅಕ್ಕ ಪಕ್ಕದ ಯಾರಿಗೂ ಈ ಬಗ್ಗೆ ತಿಳಿದಿರಲಿಲ್ಲ. ಫರ್ಹೀನ್ ತಮ್ಮ ಮಗಳಿಗೆ ಸಿಂಗಲ್ ಪೇರೆಂಟ್ ಆಗಿದ್ದಾರೆ. ಅವರು ಲಾಹೋರ್ನ ಅನಾರ್ಕಲಿ ಬಜಾರ್ನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಬಹಳ ಪಿತೃಪ್ರಧಾನ ಸಮಾಜವಿದೆ. ಇಂತಹ ಸಮಾಜದಲ್ಲಿ ಸಿಂಗಲ್ ಪೇರೆಂಟ್ ಆಗಿ ತಮ್ಮ ಮಕ್ಕಳನ್ನು ಸಾಕುವುದು ಮಹಿಳೆಯರಿಗೆ ಸವಾಲಾಗಿದೆ.
ಆದರೆ ಫರ್ಹೀನ್ ಗೆ ತಮ್ಮ 9 ವರ್ಷದ ಮಗಳನ್ನು ಸಾಕಲು ಬೇರೆ ದಾರಿಯೇ ಇರಲಿಲ್ಲ. ಇದಕ್ಕಾಗಿ ಫರ್ಹೀನ್ ಪುರುಷನಂತೆ ತನ್ನ ವೇಷವನ್ನು ಬದಲಾಯಿಸಬೇಕಾಯಿತು ಏಕೆಂದರೆ ಆ ಸಮಾಜದಲ್ಲಿ ಜನರು ಅಂಗಡಿಯೊಂದನ್ನು ನಡೆಸುತ್ತಿರುವ ಮಹಿಳೆಯನ್ನು ಸಹಿಸುವುದಿಲ್ಲ ಎಂಬ ಭಯ ಫರ್ಹೀನ್ ರನ್ನು ಕಾಡಿತ್ತು. ಪಾಕಿಸ್ತಾನ ಮೂಲದ ವೆಬ್ಸೈಟ್ ‘ಮಾಂಗೋಬಾಜ್’ ಹಾಗೂ ಫೇಸ್ಬುಕ್ ಪೇಜ್ ‘ಹ್ಯೂಮನ್ಸ್ ಆಫ್ ಲಾಹೋರ್’ ಫರ್ಹೀನ್ ತನ್ನ ಮಗಳೊಂದಿಗೆ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಮಾಡಿದೆ. ಈ ಪೇಜ್ ಮೂಲಕ ಫರ್ಹೀನ್ ಅವರ ಕಥೆ ಬೆಳಕಿಗೆ ಬಂದ ಕೂಡಲೇ ಅನೇಕ ಜನರು ಅವರ ಸಹಾಯಕ್ಕೆ ಬಂದಿದ್ದಾರೆ. ಮತ್ತು ಇಲ್ಲಿಯವರೆಗೆ ಸುಮಾರು 2 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ.