ಉರುಳುತಿರುವ ಹೆಣಗಳು ನಮ್ಮದು ,
ಅಸಹಾಯಕತೆಯಿಂದ ಕಂಬನಿಯಿಡುವ ಕಣ್ಣುಗಳು ನಮ್ಮದು…
ಹೆಣದ ಮೇಲೆ ಏರುತಿರುವ ಮತಗಳೂ ನಮ್ಮದು,
ಆದರೆ ಸೀಟು ಮಾತ್ರ ಅವರದು.

ಹಟ್ಟಿಯಿಂದ ಕಾಣೆಯಾಗುತಿರುವ ಗೋವುಗಳು ನಮ್ಮದು,
ಗೋಮಾಂಸ ತಿಂದದ್ದಕೆ ಹೆಣವಾದ ಜೀವಗಳು ನಮ್ಮದು,
ಗೋವಿನ ಹೆಸರಲಿ ಗಳಿಸಿದ ಮತಗಳೂ ನಮ್ಮದು…
ಆದರೆ ಪಕ್ಷಗಳು ಮಾತ್ರ ಅವರದು.

ಜಾತಿ ಧರ್ಮದ ಹೆಸರಲಿ ನಾಶವಾದ ಬಾಳುಗಳು ನಮ್ಮದು,
ಯಾರೋ ಹಚ್ಚಿದ ಕಿಡಿಗೆ ಉರಿದ ನೆಮ್ಮದಿ ನಮ್ಮದು,
ಲವ್ ಜಿಹಾದ್ ನ ಹೆಸರಲಿ ಹೆಚ್ಚಿದ ಮತಗಳೂ ನಮ್ಮದು,
ಕೋಟಿ ಖರ್ಚಿನಲ್ಲಿ ನಡೆಯುತಿರಿವ ವಿವಾಹಗಳು ಮಾತ್ರ ಅವರದು….

ಕೋಮುವಾದದ ಕೆಂಡಕ್ಕೆ ಕರಟಿ ಹೋದ ಮನೆ ನಮ್ಮದು,
ಕಲಹಕ್ಕೆ ಸುಟ್ಟು ಹೋದ ವಾಹನ ನಮ್ಮದು,
ಗಲಭೆಯಿಂದ ಪಡೆದ ಮತವೂ ನಮ್ಮದು…
ಆದರೆ ಅದರಿಂದ ಕಟ್ಟಿದ ಪಟ್ಟಗಳು ಮಾತ್ರ ಅವರದು.

ನೋಟಿಗಾಗಿ ಪರದಾಡಿದ ಕಾಲುಗಳು ನಮ್ಮದು,
ರೈತರ ಸಾವಿಗೆ ಕಾರಣವಾದ ಸಾಲಗಳು ನಮ್ಮದು,
ಬಡತನದಿ ಬೇಯುತಿರುವ ಹೊಟ್ಟೆಗಳೂ ನಮ್ಮದು…
ಆದರೆ ಸ್ವಿಸ್ ಬ್ಯಾಂಕಿನಲ್ಲಿ ತೆರೆಯುತಿರುವ ಖಾತೆಗಳು ಅವರದು.

ಅರೇ …. ನಷ್ಟ ಸಂಕಟ ಕಣ್ಣೀರು ಇವೆಲ್ಲ ನಮ್ಮದು…
ಟೊಳ್ಳು ಭರವಸೆಯಿಂದ ಏರುತಿರುವ ಮತಗಳೂ ನಮ್ಮದು…
ಮುಖವಾಡದೊಂದಿಗೆ ಆಳುತಿರುವವರು ಅವರಾದರೇನು?
ನೆನಪಿರಲಿ… ಕಣ್ಣಿಗೆ ಕಣ್ಣು ಪಡೆಯುತ್ತಾ ಕುರುಡಾಗುತಿರುವ ಈ ದೇಶ ಮಾತ್ರ ನಮ್ಮದು…

ಲೇಖಕರು: ಸುಮಯ್ಯಾ ಮರ್ಯಮ್ ಮಂಗಳೂರು

Leave a Reply