ಶಾಲೆಗೆ ಹೋಗುವ ದಿನಗಳಲ್ಲಿ ಸಾಮಾನ್ಯವಾಗಿ ನಾವು ಯೋಚಿಸುತ್ತಿರುತ್ತೇವೆ, ಅಯ್ಯೋ ಈ ಶಾಲೆ ಯಾಕಪ್ಪ ಮತ್ತೆ ಶುರು ಆಯಿತು, ನಿನ್ನೆ ಭಾನುವಾರ, ಇವತ್ತು ಮತ್ತೆ ಸೋಮವಾರ ಬಂತು. ದಿನಾಲೂ ರಜೆ ಸಿಕ್ಕರೆ ಸಾಕಿತ್ತು ಎಂಜಾಯ್ ಮಾಡಬಹುದಿತ್ತು ಅಲ್ವೇ…? ವಾರಕ್ಕೊಂದೇ ಭಾನುವಾರ ಯಾಕೆ ಬರುತ್ತೆ.

ಈಗಲೂ ಅದೇ ರಾಗ ಅದೇ ಹಾಡು. ಅವತ್ತು ಶಾಲಾ-ಕಾಲೇಜು ಇವತ್ತು ಭಿನ್ನವಾಗಿದೆ! ಅದೇ ಕೆಲಸ ಮಾಡಿ ಸಾಕಾಗಿ ಹೋಯಿತು. ವಾರಕ್ಕೆ ಎರಡು ಮೂರು ರಜೆಯಾದರೂ ಬೇಕಿತ್ತು, ಈ ಒಂದು ರಜೆಯಲ್ಲಿ ಏನು ಸಿಗಬಹುದು ಈ ದುಡಿದು ದಣಿದ ದೇಹಕ್ಕೆ …?

ಹಾ..! ಸಾಕು ಸಾಕು ನಿಲ್ಲಿಸೋಣ.. ಇಲ್ಲಿಗೆ ನಮ್ಮ ಕಲ್ಪನೆಗಳನ್ನು ತುಂಬಾ ಇಮೋಷನಲ್ ಆಗಬಾರದು ನಾವು. ಹುಟ್ಟಿನಿಂದ ಸಾಯೊತನಕ ದುಡಿಯೋದೆ ಆಯಿತು. ಸರಿಯಾಗಿ ರಜೆ ಸಿಕ್ಕಿಲ್ಲ ಎಂದೆಲ್ಲಾ ಕಲ್ಪನೆ ಮಾಡಿ ಸುಮ್ಮನೆ ಒಂದಿಷ್ಟು ಕಣ್ಣೀರನ್ನು ಸುರಿಯುವುದು ಬೇಡ. ನಮಗಿಂತಲೂ ಕಠಿಣವಾದ ಪರಿಶ್ರಮ ಪಡುವ ಜನಗಳು ನಮ್ಮೊಡನೆ ಇದ್ದಾರೆ ಅದು ಗೊತ್ತಿಲ್ವ ನಿಮ್ಗೆ?

ನಮಗಿಂತ ವಿದ್ಯಾವಂತ, ಬುದ್ಧಿವಂತ, ಶ್ರೀಮಂತರು, ಶ್ರಮಜೀವಿಗಳು ನಮ್ಮಲ್ಲೂ ಇದ್ದಾರೆ. ದಿನದ ಇಪ್ಪತ್ತನಾಲ್ಕು ಗಂಟೆ ದುಡಿದು ಸಾಯುವವರೆಗೂ ಯಾವುದೇ ರಜೆಯಿಲ್ಲದೆ ದುಡಿಯುವವರು ಇದ್ದಾರೆ. ನಮಗೆ ರಜೆಯ ಮೇಲೆ ರಜೆ ಸಿಕ್ಕರೂ ಸಾಕಾಗುವುದೇ ಇಲ್ಲ ಬಿಡಿ. ಎಷ್ಟೇ ದುಡಿದರು ನಮ್ಮ ಕೈಯಲ್ಲಿ ದುಡ್ಡು ನಿಲ್ಲುವುದೇ ಇಲ್ಲ ಕಾರಣ ಏನು? ‘ನಾನು… ನಾನು… ನಾನು…’ ಅಷ್ಟೇ. ಈ ನಾನೇ ಅತಿಯಾಗಿ ದುಡಿಯುವವನು ನಾನೇ ತನ್ನೆಲ್ಲ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವವನು. ನನ್ನಷ್ಟು ಪರಿಶ್ರಮ ಪಡುವವನು ಯಾರೂ ಇಲ್ಲ ಎಂಬ ಸ್ವಾರ್ಥ ಮನೋಭಾವನೆಯೋ ಅಥವಾ ಅವಿವೇಕಿತನವೋ ಗೊತ್ತಿಲ್ಲ. ನಾವು ಯಾವತ್ತೂ ಇವರುಗಳ ಬಗ್ಗೆ ಯೋಚನೆ ಮಾಡೋದೆ ಇಲ್ಲ ಬಿಡಿ.

ನಾವು ದುಡಿದರೂ ದುಡಿಯದೇ ಇದ್ದರೂ ಅವರು ಯಾವತ್ತೂ ನಮ್ಮನ್ನು ಉಪವಾಸ ಇರೋಕೆ ಬಿಟ್ಟವರಲ್ಲ. ಅವರು ಮಧ್ಯರಾತ್ರಿಯವರೆಗೆ ದುಡಿದರೂ ಬೆಳಗ್ಗೆ ಐದು ಗಂಟೆಗೆ ಎದ್ದು ನಮ್ಮ ಚಾಕರಿ ಮಾಡುತ್ತಾರೆ. ಅವರು ದೇಶಿ ವಿದೇಶಿ ಆಹಾರ ತಯಾರಿಕೆಯ ಕೋರ್ಸ್ ಮಾಡದಿದ್ದರೂ ನಮಗೆ ಎಲ್ಲ ರೀತಿಯ ಆಹಾರವನ್ನು ತಯಾರಿ ಮಾಡಿ ಬಡಿಸುತ್ತಾರೆ. ಅವರು ಡಾಕ್ಟರ್ ಅಲ್ಲದಿದ್ದರೂ ಸಣ್ಣಪುಟ್ಟ ಖಾಯಿಲೆಗೆ ಔಷಧಿಗಳನ್ನು ನೀಡುವವರು. ಅವರು ಇಂಜಿನಿಯರ್ ಅಲ್ಲದಿದ್ದರೂ ಮನೆಯಲ್ಲಿರುವ ಸಣ್ಣಪುಟ್ಟ ಕಾರ್ಯಗಳನ್ನು ಸ್ವಯಂ ಬುದ್ಧಿಶಕ್ತಿಯಿಂದ ಮಾಡುತ್ತಾರೆ. ಅವರಿಗೆ ದುಡಿಮೆ ಇಲ್ಲವೆಂದರು ನಮಗೆ ಚಿಲ್ಲರೆ ಹಣ ಬೇಕೆಂದಾಗ ಯಾವುದೇ ಮುಲಾಜಿ ಇಲ್ಲದೆ ಕೊಡುವವರು.

ಬರೀ ಇಷ್ಟಕ್ಕೆ ನಿಲ್ಲುವುದಿಲ್ಲ. ನಮ್ಮ ಮೇಲೆ ಯಾರಾದರೂ ಆರೋಪವನ್ನು ಹಾಕಿದರೆ ಅದರ ವಿರುದ್ಧ ಧ್ವನಿ ಎತ್ತುವರು. ನಮಗೆ ನ್ಯಾಯ ಸಿಗುವವರೆಗೂ ವಕೀಲರನ್ನು ಮೀರಿಸಿ ವಾದಿಸುವರು. ನಮಗೆ ಏನಾದರೂ ಸಣ್ಣಪುಟ್ಟ ಖಾಯಿಲೆ ಬಂದರೆ ನಾವು ಬೇಗನೆ ಹೋಗಿ ವಿಶ್ರಾಂತಿ ಪಡೆಯುತ್ತೇವೆ. ಆದರೆ ಅವರು ಹಾಗಲ್ಲ ತಮಗೇನೆ ಭಾದಿಸಿದರು ಅದನ್ನು ಯಾರಲ್ಲೂ ಹೇಳಿಕೊಳ್ಳದೆ ತನ್ನಲ್ಲೇ ನುಂಗಿ ತನ್ನ ಎಂದಿನ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಮನೆಗೆ ನೆಂಟರೇನಾದರೂ ಬಂದರೆ, ಹಬ್ಬ ಹರಿದಿನಗಳಲ್ಲಿ ಅವರಿಗೆ ರಜೆಯಂತು ಇಲ್ಲವೇ ಇಲ್ಲ. ಒಟ್ಟಿನಲ್ಲಿ ಶ್ರಮಜೀವಿಗಳು. ನಿಸ್ವಾರ್ಥ ಸೇವೆಗೈಯುವವರು, ತನ್ನ ದುಡಿಮೆಗೆ ಯಾವುದೇ ಸಂಬಳ ಪಡೆಯದವರು, ತಾಳ್ಮೆಯ ಮನೋಭಾವ ಹೊಂದಿದವರು.

ಇವರೆಲ್ಲ ಯಾರೆಂದು ಇನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಅವರೆಲ್ಲ ನಮ್ಮ ಮನೆಯಲ್ಲಿರುವ ಮಹಿಳೆಯರು. ಅದರಲ್ಲೂ ಮೊದಲನೇಯದಾಗಿ ಈ ಶೃಮಜೀವಿಗಳ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿ ಅದು ನಮ್ಮ ‘ಅಮ್ಮ’ ಆ ಬಳಿಕ ಮಡದಿ, ಸಹೋದರಿಯರು. ನಾವು ಎಷ್ಟೇ ದುಡಿದರೂ ಒಂದಲ್ಲ ಒಂದು ದಿನ ರಜೆಯನ್ನು ಪಡೆದುಕೊಂಡು ನೆಮ್ಮದಿಯಿಂದ ಉಸಿರಾಡುತ್ತೇವೆ. ಆದರೆ ನಮ್ಮ ಮನೆಯ ಮಹಿಳೆಯರು ಯಾವತ್ತೂ ರಜೆಯನ್ನು ಬಯಸಿದವರಲ್ಲ. ಕೆಲವೊಮ್ಮೆ ನಾವು ಕೆಲಸವಿಲ್ಲದೆ ಊರಿಡೀ ಅಲೆದಾಡಿ ಮನೆಗೆ ಬಂದು ಊಟ ಮಾಡುವಾಗ ಅದಕ್ಕೆ ಅನುಗುಣವಾದ ಸಂಬಾರು ಪದಾರ್ಥಗಳಿಲ್ಲ ಅಂದರೆ ನಮ್ಮ ಮುಖ ಕೆಂಪಾಗುತ್ತದೆ. ಆದರೆ ನಾವು ಯಾವತ್ತೂ ಅವರನ್ನು ಪ್ರಶ್ನಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ. ನೀವೇನಾದರೂ ಹೊಟ್ಟೆಗೆ ತಿಂದಿದ್ದೀರಾ? ಎಂದು.

ಆದಾಗ್ಯೂ ಎಲ್ಲ ಗಂಡಸರು ತಮ್ಮ ಮನೆಯ ಮಹಿಳೆಯರ ಕಷ್ಟಗಳನ್ನು ಅರಿಯದವರು ಅಂತಲ್ಲ. ಅದರಲ್ಲೂ ಕೆಲವರು ಹೀಗೆ ಮಾಡುವವರು ಇರುತ್ತಾರೆ. ಸ್ವತಃ ಚಿಕ್ಕ ವಯಸ್ಸಿನಲ್ಲಿ ನಾವು ಮಾಡಿದ ಅನುಭವಗಳೆ ಸಾಕು ನಮಗೆ. ನಮ್ಮ ವರ್ತನೆ ನಮ್ಮ ಮನೆಯ ಮಹಿಳೆಯರ ಮೇಲೆ ಯಾವ ರೀತಿ ಇತ್ತೆಂದು. ಒಂದು ಬೆಳಗ್ಗೆ ಟಿಫನ್ ಮಾಡಿಲ್ಲ ಅಂದರೆ ನಮ್ಮ ಮುಖದಲ್ಲಿ ಕೋಪ ಎದ್ದು ಕಾಣಿಸುತ್ತಿತ್ತು. ಕೈಗೆ ಸಿಕ್ಕ ಲೋಟ, ತಟ್ಟಗೆಳನ್ನು ಎಸೆದು ನಮ್ಮ ಕೋಪಗಳನ್ನು ತೀರಿಸುತ್ತಿದ್ದೆವು. ನಾವು ಯಾವತ್ತೂ ಚಿಂತನೆ ಮಾಡಲ್ಲ ನಾವು ಇಷ್ಟು ದಿನ ನಮಗೆ ದುಡಿಮೆ ಇಲ್ಲದಿದ್ದರೂ ನಮಗೆ ಹೊಟ್ಟೆ ತುಂಬಾ ತಿನ್ನಲು ಎಲ್ಲಿಂದ ಮಾಡಿಕೊಟ್ಟರೆಂದು. ನಾವು ತಿಳಿಯದ ಸತ್ಯವೇನಂದರೆ ನಾವು ಕೊಡುವ ಚಿಲ್ಲರೆ ಕಾಸನ್ನು ಡಬ್ಬದಲ್ಲಿ ಕೂಡಿಟ್ಟು ನಮ್ಮ ಕಷ್ಟಕಾಲದಲ್ಲಿ ಅದನ್ನು ನಮಗೆ ಮರಳಿಸುವ ಅವರ ಮನಸ್ಸು. ಇಷ್ಟೆಲ್ಲ ತ್ಯಾಗಗಳನ್ನು ಸಹಿಸಿ ನಮ್ಮ ಬಗ್ಗೆ ಕಾಳಜಿವಹಿಸುವ ನಮ್ಮ ಮನೆಯವರ ಮನಸ್ಸು ನಿಜಕ್ಕೂ ಹಾಲಿಗಿಂತ ಶ್ರೇಷ್ಠವಾದದ್ದು ಅಲ್ಲವೆ….?

ಲೇಖಕರು: ಸಮ್ಮಿ

Leave a Reply