ವಾಯವ್ಯ ಇಂಗ್ಲೆಂಡ್‌ನಲ್ಲಿರುವ ಕುಂಬ್ರಿಯಾದ ನೋಹ ವಾಲ್ ಹುಟ್ಟುವ ಮೊದಲು, ಅವನ ಬೆಳವಣಿಗೆ ಚೆನ್ನಾಗಿ ಕಾಣಲಿಲ್ಲ. ತಾಯಿ ಮಿಚೆಲ್ ರವರ ಗರ್ಭದಲ್ಲಿದ್ದಾಗಲೇ ಆತನ ಕುರಿತು ಸ್ಪೈನಾ ಬೈಫಿಡಾ ಮತ್ತು ಹೈಡ್ರೋಸೆಫಾಲಸ್ ಜೊತೆಗೆ ಮಗುವಿನ ಮೆದುಳು ಕೂಡ ನಾಶ ಹೊಂದುತ್ತಾ ಇದೆ ಎಂದು ಸ್ಕ್ಯಾನ್ ಮಾಡಿದ ಡಾಕ್ಟರ್ ಹೇಳಿಕೆ ನೀಡಿದ್ದರು. ಮಗು ಹುಟ್ಟಿದರೆ ಎಂದಿಗೂ ಮಾತನಾಡುವುದಿಲ್ಲ, ನಡೆಯುವುದಿಲ್ಲ ಅಥವಾ ಸ್ವಂತವಾಗಿ ತಿನ್ನುವುದಿಲ್ಲ ಎಂದು ವೈದ್ಯರು ಭವಿಷ್ಯ ನುಡಿದಿದ್ದರು .
ಬದುಕಲು ಅಸಾಧ್ಯವಾದ ಈ ಮಗುವನ್ನು ಗರ್ಭಪಾತ ಮಾಡುವಂತೆ ಐದು ಬಾರಿ ಹೆತ್ತವರಾದ ಮಿಚೆಲ್ (ಶೆಲ್ಲಿ) ಮತ್ತು ರಾಬ್ ಅವರನ್ನು ಒತ್ತಾಯಿಸಲಾಯಿತು. ಆದರೆ ಯಾರ ಮಾತನ್ನು ಕೇಳದ ತಾಯಿ ಮಿಚೆಲ್ (ಶೆಲ್ಲಿ) ಮಗುವಿಗೆ ಜನ್ಮ ನೀಡಲು ನಿರ್ಧರಿಸಿದಳು. “ನಾನು ಕೇಳಿದೆ , ‘ಮಗುವಿಗೆ ಹೃದಯ ಬಡಿತವಿದೆಯೇ?’ ಆಗ ಡಾಕ್ಟರ್ ಹೇಳಿದರು, ‘ಹೌದು’. ನಾನು ಹೇಳಿದೆ, ‘ಸರಿ, ನಮಗೆ ಅದು ಮಾತ್ರ ಮುಖ್ಯವಾಗಿದೆ.” ಎನ್ನುವ ತನ್ನ ಹೇಳಿಕೆಯನ್ನು ಮಿಚೆಲ್ ವಿಡಿಯೋ ಒಂದರಲ್ಲಿ ನೆನಪಿಸಿದ್ದಾರೆ.
ಮಗು ಬದುಕುಳಿಯುತ್ತದೆ ಎಂದು ವೈದ್ಯರು ನಿರೀಕ್ಷಿಸಿರಲಿಲ್ಲ. ಗರ್ಭಪಾತವನ್ನು ಪರಿಗಣಿಸಲು ದಂಪತಿಗೆ ಹಲವು ಬಾರಿ ಸಲಹೆ ನೀಡಿದ್ದರು. ಶೆಲ್ಲಿ “ನಾವು ಆಸ್ಪತ್ರೆಗೆ ಬಂದಾಗಲೆಲ್ಲಾ ನೀವು ಗರ್ಭಪಾತದ ಸಲಹೆ ನೀಡುವುದನ್ನು ನಾನು ಬಯಸುವುದಿಲ್ಲ.” ಎಂದು ವೈದ್ಯರಿಗೆ ಹೇಳಿದ್ದರು.
ನೋಹನ ಜನನದ ವೇಳೆಗೆ ಅವನ ಮಿದುಳಿನ ಕೇವಲ 2% ಮಾತ್ರ ಬಾಕಿ ಉಳಿದಿತ್ತು ಆಸ್ಪತ್ರೆಯು ಅವನನ್ನು ಬದುಕಿಸುವ ಪ್ರಯತ್ನ ಮಾಡಬೇಡಿ ಎಂಬ ಆದೇಶವನ್ನು ನೀಡಿತು. ಮತ್ತು ಅವನ ಹೆತ್ತವರು ಅವನಿಗಾಗಿ ಶವಪೆಟ್ಟಿಗೆಯನ್ನು ಖರೀದಿಸಿದ್ದರು. ಆದರೆ ನೋಹ ಮಾರ್ಚ್ 6, 2012 ರಂದು 9 ಪೌಂಡ್ 7oz ತೂಕದಲ್ಲಿ ಜನಿಸಿದನು. ತನ್ನ ಮೊದಲ ಉಸಿರನ್ನು ತಾನೇ ತೆಗೆದುಕೊಂಡಾಗ ಅಮ್ಮ ಮಿಚೆಲ್ ಅಳುತ್ತಾ “ಅವನು ಬದುಕುಳಿಯುವ ಅವಕಾಶವನ್ನು ಹೊಂದಿದ್ದಾನೆ” ಎಂದು ಹೇಳಿದ್ದರು.
ವೈದ್ಯ ಶಾಸ್ತ್ರಕ್ಕೆ ಸಡ್ಡು ಹೊಡೆದು ಬೆಳೆಯುತ್ತಿರುವ ನೋಹಾ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ತನ್ನ ಹತ್ತನೇ ಹುಟ್ಟುಹಬ್ಬವನ್ನು ಆಚರಿಸಿದ. ಗಾಲಿ ಕುರ್ಚಿಯಲ್ಲಿದ್ದರೂ ಸಹ ಒಂದು ದಿನ ನನಗೂ ಫುಟ್ಬಾಲ್ ಆಡಲು ಸಾಧ್ಯವಾಗುತ್ತದೆ ಎಂದು ಅಮ್ಮ ಮಿಚೆಲ್ಗೆ ಹೇಳಿದನು.
2% ಮೆದುಳಿನೊಂದಿಗೆ ಹುಟ್ಟಿದ ನೋಹಾ ನ ಮೆದುಳು 80% ನಷ್ಟು ಬೆಳವಣಿಗೆ ಹೊಂದಿದೆ ಎಂದು ಅಂದಾಜಿಸಲಾಗಿದೆ. ಹಲವಾರು ಶಸ್ತ್ರಚಿಕಿತ್ಸೆಗಳನ್ನು ಎದುರಿಸುತ್ತಿದ್ದರೂ ಸಹ ಮಗುವಿಗೆ ಅನೇಕ ಆಸಕ್ತಿಗಳು ಮತ್ತು ಮಹತ್ವಾಕಾಂಕ್ಷೆಗಳಿವೆ ಎಂದು ತಾಯಿ ಮಾಧ್ಯಮಗಳಿಗೆ ತಿಳಿಸಿದರು.
“ಅವನು ಸಮಯವನ್ನು ಹೇಳಬಲ್ಲನು, ಅವನು ಓದುತ್ತಾನೆ, ಅವನು ಗಣಿತವನ್ನು ಮಾಡುತ್ತಾನೆ, ಅವನು ವಿಜ್ಞಾನವನ್ನು ಪ್ರೀತಿಸುತ್ತಾನೆ. ಅವನು ಸೌರವ್ಯೂಹದ ಬಗ್ಗೆ ಮಾತನಾಡುತ್ತಾನೆ. ಅವನು ನಂಬಲಾಗದ ಕನಸುಗಳನ್ನು ಹೊಂದಿದ್ದಾನೆ ಮತ್ತು ಇನ್ನೂ ಹೆಚ್ಚು ನಂಬಲಾಗದ ಜ್ಞಾನವನ್ನು ಹೊಂದಿದ್ದಾನೆ.” ಎಂದು ತಾಯಿ ತಿಳಿಸಿದರು.