ಇಂದು “ವಿಶ್ವ ಕ್ಯಾನ್ಸರ್ ದಿನ” ಕಳೆದ ಹನ್ನೊಂದು ವರ್ಷ ಕ್ಯಾನ್ಸರ್ ನೊಂದಿಗೆ ಹೋರಾಡಿ, ಎಲ್ಲರಿಗೂ ಸ್ಪೂರ್ತಿಯಾಗಿರುವ ಎಲ್ಲರ ಕಣ್ಮಣಿ, ಚಾಕ್ಲೆಟ್ ಹೀರೋ ಜಬ್ಬಾರ್ ಪೊನ್ನುಡಿಯವರೊಂದಿಗೆ “ಇದು ನಮ್ಮ ಊರು.ಇನ್” ನಡೆಸಿದ ಸಂದರ್ಶನ…ಎಲ್ಲರಿಗೂ ಸ್ಪೂರ್ತಿ ಆಗಲಿ..

ನಿಮಗೆ ಕ್ಯಾನ್ಸರ್ ಹೇಗೆ ಬಂತು?
ಕ್ಯಾನ್ಸರ್ ಬಂದಾಗ ಮುಂದಿನ ಜೀವನದ ಬಗ್ಗೆ ಹೇಗೆನಿಸಿತು?

ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರ ಹಲವರಲ್ಲಿ ಪಡೆಯಲ್ಲಿ ಪ್ರಯತ್ನಿಸಿ ಸೋತಿರುವೆ.
ಮುಂದಿನ ಜೀವನದ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಂಡಿದ್ದರೆ ಹನ್ನೊಂದು ವರ್ಷ ಕ್ಯಾನ್ಸರ್ ಇದ್ದು ನೆಮ್ಮದಿಯ ಬದುಕು ಬದುಕಲು ಕಷ್ಟವಾಗುತಿತ್ತು.
ಮೊದಲ ಎರಡು ವರ್ಷ ರೋಗದ ಬಗ್ಗೆ ತಿಳಿಯದೆ ಚಿಕಿತ್ಸೆ ಮಾಡಲು ಕಷ್ಟವಾಯಿತು. ನಂತರ ರೊಗ ಗೊತ್ತಾದ ನಂತರ ಅದಕ್ಕೆ ಬೇಕಾದ ಕೀಮೊ ರೇಡಿಯೇಷನ್ ಮಾಡಿಸಿದೆ. ಏಳು ವರ್ಷ ಸಣ್ಣ ಮಟ್ಟಿನ ಚಿಕಿತ್ಸೆ ನಡೆಯುತ್ತಿತ್ತು. ಕಳೆದ ಮೂರು ವರ್ಷಗಳಿಂದ ನಾಲ್ಕು ಬಾರಿ ಕ್ಯಾನ್ಸರ್ ಗಡ್ಡೆ ಬೆಳೆದು ಅದಕ್ಕೆ ಸೂಕ್ತ ಚಿಕಿತ್ಸೆ ಮಾಡಿಸುತ್ತಿದ್ದೇನೆ.
ಕುಟುಂಬದ ಪ್ರೀತಿ ಕಾಳಜಿಯೇ ನನ್ನ ಇದುವರೆಗಿನ ಯಶಸ್ಸು. ವಿಶೇಷವಾಗಿ ದೇವರ ಮೇಲಿನ ಭರವಸೆ ಮತ್ತು ನನ್ನ ತಂದೆ ನನ್ನ ಶಕ್ತಿಯಾಗಿದ್ದಾರೆ.

ಇತ್ತೀಚೆಗೆ ಒಂದು ಕ್ಯಾನ್ಸರ್ ಆಧಾರಿತ ಚಲನಚಿತ್ರದಲ್ಲಿ ನಟಿಸಿದ್ದೀರಿ?

ಹೌದು, ಅದೋಂದು ಜಾಗೃತಿ ಮೂವಿ ಹಾಗೆ ನಟಿಸುತ್ತಿರುವೆ. ಮೊದಲು ಈ ರೋಗದ ಬಗ್ಗೆ ಹೇಳಿಕೊಳ್ಳಲು ಮುಜುಗರ ಆಗುತ್ತಿತ್ತು. ನನ್ನದು ಬಹಳ ಸ್ವಾಭಿಮಾನಿ ಸ್ವಭಾವ. ಅನುಕಂಪದಿಂದ ನೋಡುವುದು ನನಗೆ ಇಷ್ಟವಿಲ್ಲ. ಯೋಗಿಶ್ ಮಾಸ್ಟರ್ ಕೇಳಿದಾಗ ನಿರಾಕರಿಸಲು ಆಗಲಿಲ್ಲ. ಹೌದು, ನಾಲ್ಕು ಮಂದಿಗೆ ಉಪಕಾರ ಆಗುವುದಾದರೆ ನಾನು ಯಾವುದಕ್ಕೂ ರಡಿ. ಶೂಟಿಂಗ್ ಅದೊಂದು ಅದ್ಭುತ ಅನುಭವ. ವಿಶ್ವಕ್ಕೆ ಕ್ಯಾನ್ಸರ್ ರೋಗಿಗಳ ನೋವು ತಿಳಿಸುವ ಉದ್ದೇಶ ಈ ಸಿನೆಮಾದ್ದು.

ಕನ್ನಡ ಗ್ಯಾಜೆಟ್ಸ್ ಎಂಬ ಹೊಸ ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದೀರಿ? ನಿಮ್ಮ ವೃತ್ತಿ ಏನು?

ಅದು ನನ್ನ ಬಹಳ ದಿನಗಳ ಕನಸಾಗಿತ್ತು. ನಮ್ಮ ಮಿತ್ರರದ್ದು ಫೈಟ್ ಕ್ಲಬ್ ಎಂಬ ವಾಟ್ಸಪ್ ಗ್ರೂಪ್ ಇದೆ. ಅದರಲ್ಲಿ ಒಬ್ಬರು ಒಬ್ಬರನ್ನು ಮೀರಿಸುವಂತಹ ಚರ್ಚೆ ಕುಚೇಷ್ಟೆ , ರಾಜಕೀಯ ಸೀರಿಯಸ್ ವಿಷಯ ಎಲ್ಲವನ್ನೂ ಹರಟೆ ಮಾಡ್ತೇನೆ. ನನಗೆ ಆ ಗ್ರೂಪ್ ನಿಂದ ತುಂಬಾ ಮಾನಸಿಕ ನೆಮ್ಮದಿ ಸಿಕ್ಕಿದೆ. ಅಂತಹ ಪ್ರೀತಿಯ ವಾಟ್ಸಪ್ ಗ್ರೂಪ್ ಕೆಲವೇ ಕೆಲವು ಇರಬಹುದು. ಹೀಗೆ ನಾವು ಮಿತ್ರರು ಚರ್ಚೆ ಮಾಡುವಾಗ ಈ ಕನಸು ಹಂಚಿಕೊಂಡೆ. ಮಿತ್ರರು ಅದಕ್ಕೆ ಸಾಥ್ ಕೊಟ್ಟರು. ಇತ್ತೀಚಿಗೆ ಯೂಟೂಬ್ ಚಾನೆಲ್ ಮಾಡಿ ಜನರಿಗೆ ಸಾಫ್ಟ್‌ವೇರ್ ಹಾಗೂ ಆಪ್‌ಗಳ ಬಳಕೆಯನ್ನು ನನ್ನಿಂದ ಆದಷ್ಟು ತಿಳಿಸುವ ಉದ್ದೇಶ ಹೊಂದಿದ್ದೇನೆ. ಉತ್ತಮ ಪ್ರತಿಕ್ರಿಯೆ ದೊರೆತಿದೆ. ಒಂದು ವಾರದಲ್ಲಿ 18000 ಮಂದಿ ಯೂಟ್ಯೂಬ್ ನಲ್ಲಿ ನನ್ನ ವಿಡಿಯೋ ನೋಡಿದ್ದಾರೆ. 500 ಕ್ಕೂ ಹೆಚ್ಚು ಮಂದಿ ಸಬ್ಸ್ಕೈಬರ್ ಆಗಿದ್ದಾರೆ. ಲಕ್ಷಾಂತರ ಮಂದಿ ವಾಟ್ಸಪ್ ಮುಖಾಂತರ ನೋಡಿದ್ದಾರೆ. ಎಲ್ಲರಿಗೂ ಋಣಿ.

ಕ್ಯಾನ್ಸರ್ ಪೀಡಿತರಿಗಿದ್ದೂ ನಿಮ್ಮನ್ನು ನೋಡಲು ಬಂದವರು ನಿಮ್ಮಿಂದ ಸ್ಪೂರ್ತಿ ಪಡೆದು ಹೋಗುತ್ತಾರೆ ಎಂದು ಕೇಳಿದ್ದೇನೆ? ನಿಮಗೆ ಏನನ್ನಿಸುತ್ತದೆ?

ಪೋಸಿಟಿವ್ ಆದ ಮಾತುಗಳು ಆಗಿರಬಹುದು. ಜೀವನದ ಉತ್ಸಾಹಗಳನ್ನು ನಾವು ಬಯಸಿದರೆ ಯಾರಿಗೂ ಏನೂ ಮಾಡಲು ಆಗಲ್ಲ. ಮನಸ್ಸಿಗೆ ರೋಗ ಬಂದರೆ ಹೋಯಿತು. ಕ್ಯಾನ್ಸರ್ ಅಂದರೆ ಸಾವಲ್ಲ. ಬರೀ ದೇಹಕ್ಕೆ ಬರುವ ರೋಗ ಎಂಬುವುದನ್ನು ಅವರಿಗೆ ಸ್ಪಷ್ಟವಾಗಿ ತಿಳಿಸುತ್ತೆನೆ.

ಕ್ಯಾನ್ಸರ್ ಪೀಡಿತರಿಗೆ ಏನು ಸಂದೇಶ ಕೊಡುತ್ತೀರಿ?

ಬದುಕಬಹುದು. ನಿಶ್ಚಿಂತೆಯಿಂದ ಬದುಕಬೇಕು. ಮನಸ್ಸಿಗೆ ಯಾವತ್ತೂ ಕ್ಯಾನ್ಸರ್ ಬರಲ್ಲ. ಜನರ ಪ್ರೀತಿಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು. ಮನಸ್ಸಿದ್ದರೆ ನಮ್ಮ ಯಶಸ್ವಿಗೆ ರೋಗ ಅಡ್ಡಿಯಾಗಲ್ಲ.

ಸಮಾಜಕ್ಕೆ ಯಾವ ಸಂದೇಶ ಕೊಡುತ್ತೀರಿ?

ಇಂದು ವಿಶ್ವ ಕ್ಯಾನ್ಸರ್‌ದಿನ
ಕ್ಯಾನ್ಸರ್ ರೋಗಿಗಳಿಗೆ ಶುಭಾಶಯ ಹೇಳುವ ದಿನವಂತು ಅಲ್ಲ. ವಿಶ್ವ ಕ್ಯಾನ್ಸರ್ ದಿನ ಲೋಕದಲ್ಲಿ ಚರ್ಚೆಯಾಗಬೇಕು. ಅದಕ್ಕೆ ಲಸಿಕೆ ಹುಡುಕಬೇಕು. ರೋಗ ಇರುವವರ ರೋಗ ಸಂಪೂರ್ಣ ಗುಣವಾಗುವ ಔಷಧದ ಜೊತೆ ಅದು ಪುನರಾವರ್ತಣೆಯಾಗುವುದನ್ನು
ನಿಲ್ಲಿಸುವ ಔಷಧ ಬರಬೇಕು. ಜೊತೆಗೆ ರೋಗಿಗಳನ್ನು ಅನುಕಂಪದ ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಿ ಸಾಧ್ಯವಾದಷ್ಟು ಅವರ ಚಿಕಿತ್ಸೆಗೆ ಸಹಕರಿಸಿ. ಅವರನ್ನು ಸ್ವಚ್ಛಂದವಾಗಿ ವಿಹರಿಸಲು ಬಿಡಬೇಕು. ಕ್ಯಾನ್ಸರನ್ನು ಕೊಲ್ಲಲು ಪ್ರೀತಿಯಿಂದ ಮಾತ್ರ ಸಾಧ್ಯ ಎಂಬುವುದನ್ನು ಅರಿತು ರೋಗಿಗಳನ್ನು ಪ್ರೀತಿಸಬೇಕು.

Leave a Reply