ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಮುಸ್ಲಿಮ್ ಲೇಖಕರ ಸಂಘವು ಪ್ರತಿವರ್ಷ ಕೊಡಮಾಡುವ ರಾಜ್ಯ ಮಟ್ಟದ 2017ನೇ ಸಾಲಿನ ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಮತ್ತು ಬಹುಭಾಷಾ ಕವಿಗೋಷ್ಠಿ (ಕನ್ನಡ, ತುಳು, ಬ್ಯಾರಿ ಮತ್ತು ಉರ್ದು) ದಿನಾಂಕ 22-11-2019 ಶುಕ್ರವಾರ ಸಾಯಂಕಾಲ 6.30ಕ್ಕೆ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಸ್ಜಿದುನ್ನೂರ್ ಬಳಿಯ ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಶನ್) ಸಭಾಂಗಣದಲ್ಲಿ ನಡೆಯಲಿದೆ.

ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸನ್ಮಾರ್ಗ ವಾರಪತ್ರಿಕೆ ಸಂಪಾದಕ ಏ.ಕೆ. ಕುಕ್ಕಿಲ (ಕೃತಿ: ಎಣ್ಣೆ ಬತ್ತಿದ ಲಾಟೀನು) ಪ್ರಶಸ್ತಿ ಸ್ವೀಕರಿಸಲಿದ್ದಾರೆ. ‘ಜಾತ್ಯಾತೀತ ಭಾರತದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮುಖ್ಯ ಭಾಷಣ ಮಾಡಲಿದ್ದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ.

ಬಹುಭಾಷಾ ಕವಿ, ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು, ಪ್ರಾಧ್ಯಾಪಕ ರಾಜಾರಾಂ ವರ್ಮ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ಮಲ್ಲಿಕಾ ಅಜಿತ್ ಶೆಟ್ಟಿ ಸಿದ್ದಕಟ್ಟೆ, ಕವಿಗಳಾದ ಜಲೀಲ್ ಮುಕ್ರಿ, ಮುಹಮ್ಮದ್ ಶರೀಫ್ ನಿರ್ಮುಂಜೆ, ಆಯಿಶಾ ಉಳ್ಳಾಲ್, ಮಿಸ್ರಿಯಾ ಇಸ್ಮತ್ ಪಜೀರ್ ಹಾಗೂ ಮೌ. ಇಮ್ರಾನುಲ್ಲಾಹ್ ಖಾನ್ ಮನ್ಸೂರಿ ಬಹುಭಾಷಾ ಕವಿಗೋಷ್ಟಿಯಲ್ಲಿ ಭಾಗವಹಿಸಲಿದ್ದು, ಮುಸ್ಲಿಮ್ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಈ ನಿಟ್ಟಿನಲ್ಲಿ ಲೇಖಕ ಏ.ಕೆ ಕುಕ್ಕಿಲರವರ ಸಂದರ್ಶನ

ಪ್ರಶ್ನೆ: . ನಿಮ್ಮ ಎಣ್ಣೆ ಬತ್ತಿದ ಲಾಟೀನು ಕೃತಿಯು ರಾಜ್ಯ ಮುಸ್ಲಿಂ ಸಾಹಿತ್ಯ ಪ್ರಶಸಿಗೆ ಆಯ್ಕೆಯಾಗಿದೆ ಮತ್ತು ಇದೇ ನವಂಬರ್ 22ರಂದು ಪ್ರಶಸ್ತಿ ಪ್ರಧಾನ ಸಮಾರಂಭವೂ ಇದೆ. ನೀವು ಈ ಕೃತಿ ಬರೆಯಲು ಕಾರಣವೇನು?

ಉತ್ತರ: ಉಮ್ರಾ ಯಾತ್ರೆಗೆ ಹೊರಡುವಾಗ ಎಣ್ಣೆ ಬತ್ತಿದ ಲಾಟೀನು ಕೃತಿ ಬರೆಯುವ ಉದ್ದೇಶವನ್ನು ನಾನು ಇಟ್ಟುಕೊಂಡಿರಲಿಲ್ಲ. ಉಮ್ರಾ ಯಾತ್ರೆಯಿಂದ ತಿರುಗಿ ಬಂದ ಬಳಿಕವೂ ಫಕ್ಕನೆ ಈ ಕೃತಿ ಬರೆದೂ ಇಲ್ಲ. ಯಾತ್ರೆಗೆ ಹೋಗುವಾಗ ಒಂದು ಡೈರಿ ಮತ್ತು ಪೆನ್ ಅನ್ನು ಜೊತೆಯಿರಿಸಿಕೊಂಡಿದ್ದೆ. ಪ್ರತಿದಿನ ರಾತ್ರಿ ಮಲಗುವ ಕೋಣೆಗೆ ಮರಳಿ ಬಂದ ಬಳಿಕ ಆ ದಿನ ನಡೆದುದೆಲ್ಲವನ್ನು ಬರೆದಿಡತೊಡಗಿದೆ. ಏನನ್ನು ನೋಡಿದೆ, ಏನನ್ನು ಅನುಭವಿಸಿದೆ, ಹೇಗೆ ಅನುಭವಿಸಿದೆ, ಯಾರೊಂದಿಗೆಲ್ಲ ಮಾತಾಡಿದೆ, ಎಲ್ಲೆಲ್ಲ ಸುತ್ತಾಡಿದೆ ಇತ್ಯಾದಿ ಇತ್ಯಾದಿಗಳನ್ನೆಲ್ಲ ದಾಖಲಿಸತೊಡಗಿದೆ. ಹೀಗೆ ಬರೆದಿಡುವಾಗಲೂ ಇದನ್ನು ಪುಸ್ತಕ ರೂಪದಲ್ಲಿ ತರಬೇಕೆಂದು ಅಂದುಕೊಂಡಿರಲಿಲ್ಲ. ಉಮ್ರಾ ಯಾತ್ರೆಯಿಂದ ಹಿಂತಿರುಗಿ ಬಂದು ಕೆಲವು ದಿನಗಳಾದ ಬಳಿಕ ನನ್ನ ಆ ಡೈರಿಯನ್ನು ತೆರೆದು ಓದಿದೆ. ನನ್ನೊಳಗೆ ಯುದ್ಧವೊಂದು ಪ್ರಾರಂಭವಾದ ಅನುಭವ. ನಾನು ಓದುತ್ತಾ ಹೋದಂತೆ ಮತ್ತೊಂದು ಉಮ್ರಾ ಮಾಡಿದ ಅನುಭವ ಆಗತೊಡಗಿತು. ಇವೆಲ್ಲವನ್ನೂ ದಾಖಲಿಸಬೇಕು ಎಂದೂ ಅನಿಸಿತು. ನಿಜ ಏನೆಂದರೆ, ನಾನು ಅಲ್ಲಿ ನೋಡಿದ ಮತ್ತು ದಾಖಲಿಸಲು ಬಿಟ್ಟುಹೋದ ಇನ್ನೂ ಕೆಲವು ಸಂಗತಿಗಳಿವೆ. ಖರ್ಜೂರದ ತೋಟಕ್ಕೆ ಹೋಗಿದ್ದೇನೆ. ಅದರ ಸಾಲುಗಳು ಹೇಗಿವೆಯೆಂದರೆ ನಮ್ಮ ಅಡಿಕೆ ತೋಟದಂತೆ. ಈ ಸಾಲುಗಳ ನಡುವೆ ನೀರು ಹರಿದು ಹೋಗಲು ಕಾಲುವೆ ರೀತಿಯ ವ್ಯವಸ್ಥೆಯೂ ಇದೆ. ಓಹ್, ಡೈರಿಯಲ್ಲಿ ದಾಖಲಿಸಲು ಬಿಟ್ಟುಹೋದ ಸಂಗತಿಗಳೇ ಒಂದು ಪುಸ್ತಕ ವಾಗಬಹುದೇನೋ. ಈ ಪುಸ್ತಕ ಬರೆಯುವುದಕ್ಕೆ ಇನ್ನೊಂದು ಕಾರಣ- ಮಕ್ಕಾ ಮತ್ತು ಮದೀನಾದ ಬಗ್ಗೆ ನನ್ನೊಳಗೆ ಇಳಿಸಿಕೊಂಡಿದ್ದ ಕುತೂಹಲ. ನನಗೆ ಅದು ಬರೀ ಯಾತ್ರಾಸ್ಥಳ ಒಂದೇ ಆಗಿರಲಿಲ್ಲ. ನನ್ನೊಳಗಿನ ಕೌತುಕ, ಅಚ್ಚರಿ, ನಿರೀಕ್ಷೆಗಳ ತಾಣವೂ ಆಗಿತ್ತು.

ನಾನು ಉಮ್ರಾ ಯಾತ್ರೆಗೆಂದು ಮನೆಯಿಂದ ಹೊರಡುವಲ್ಲಿಂದ ಹಿಡಿದು ಮರಳಿ ಮನೆ ತಲುಪುವವರೆಗೆ ಒಟ್ಟು ಪ್ರಯಾಣವನ್ನು ಭಿನ್ನ ಬಗೆಯಲ್ಲಿ ಅನುಭವಿಸಿದೆ. ಹೊಸರೂಪದಲ್ಲಿ ಪ್ರತಿಯೊಂದನ್ನೂ ನೋಡತೊಡಗಿದೆ. ಮಸ್ಜಿದುಲ್ ಹರಾಮ್ ನಲ್ಲಿ ಒಂದು ನಮಾಜಿಗೆ ನಿಂತ ಸ್ಥಳದಲ್ಲಿ ಮತ್ತೊಂದು ನಮಾಜಿನ ವೇಳೆ ನಿಲ್ಲುತ್ತಿರಲಿಲ್ಲ. ಹರಮ್ ನ ಬೇರೆ ಬೇರೆ ಕಡೆ ಹೋಗಿ ನಮಾಜ್ ನಿರ್ವಹಿಸುತ್ತಿದ್ದೆ. ಇದರಿಂದ ಜಗತ್ತಿನ ಬೇರೆಬೇರೆ ದೇಶಗಳ ಭಿನ್ನ ಭಿನ್ನ ನಿಲುವುಗಳುಳ್ಳ ಜನರ ಬಳಿ ನಮಾಜ್ ನಿರ್ವಹಿಸುವುದಕ್ಕೆ ಅವಕಾಶ ಲಭ್ಯವಾಯಿತು. ಅವರ ನಮಾಜ್ ನ ಕ್ರಮವನ್ನು ನೇರವಾಗಿ ನೋಡುವಂತಾಯಿತು. ನಾನೋರ್ವ ಪ್ರವಾಸಿಯಂತೆ ಹೋಗಿರುವುದರಿಂದಲೋ ಏನೋ ನಾನು ಪ್ರತಿಯೊಂದನ್ನೂ ಹೊಸ ದೃಷ್ಟಿಕೋನದಿಂದ ನೋಡಿದೆ. ನಾನು ಉಮ್ರಾ ಯಾತ್ರೆ ಮುಗಿಸಿ ಮನೆಗೆ ಬಂದಾಗ ನನ್ನನ್ನು ನನ್ನಮ್ಮ ನೋಡಿದ್ದೂ ಹಾಗೆಯೇ- ಅಪಾರ ಕುತೂಹಲ ತುಂಬಿದ ಭಾವುಕತೆಯಿಂದ. ಅವರಿಗೆ ನಾನೊಂದು ಸೋಜಿಗ. ನನ್ನ ಪ್ರಯಾಣವೇ ಅನಿರೀಕ್ಷಿತವಾಗಿತ್ತು. ನಮ್ಮ ನಡುವೆ ಇದ್ದವ ದಿಡೀರ್ ಅಂತ ಎದ್ದುಹೋಗಿ ಉಮ್ರಾ ಮಾಡಿ ಬಂದ ಎಂಬ ಭಾವ ಅಮ್ಮನ ಮುಖಭಾವದಲ್ಲಿ ಇತ್ತು.

ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಮತ್ತು ಈಗಾಗಲೇ ಉಮ್ರಾ ಮಾಡಿರುವ ಹಲವು ಮಂದಿ ಈ ಕೃತಿಯನ್ನು ಓದಿದ ಬಳಿಕ ಇದರಿಂದ ಪ್ರೇರಣೆಗೊಂಡು ಮತ್ತೊಮ್ಮೆ ಉಮ್ರಾ ಮಾಡಿದ್ದಾರೆ. ಕೃತಿಯಲ್ಲಿರುವ ಅನುಭೂತಿ ತಮಗೂ ಸಿಗಬೇಕೆಂಬ ಬಯಕೆ ಇದಕ್ಕೆ ಕಾರಣ. ನಿಮ್ಮಂತೆ ಉಮ್ರಾವನ್ನು ಅನುಭವಿಸಲು ತಮ್ಮಿಂದ ಆಗಿಲ್ಲ ಎಂದು ಹೇಳಿದವರಿದ್ದಾರೆ. ವಿಶೇಷ ಏನೆಂದರೆ, ಉಮ್ರಾ ಯಾತ್ರೆಯ ಅನುಭವ ಕನ್ನಡದಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವುದು ಇದುವೇ ಮೊದಲು. ಒಂದು ರೀತಿಯಲ್ಲಿ, ಕನ್ನಡದಲ್ಲಿ ಮುಸ್ಲಿಮರು ಬರೆದಿರುವ ಪ್ರವಾಸ ಕಥನವೇ ಕಡಿಮೆ. ಅದರಲ್ಲೂ ಉಮ್ರಾಪ್ರವಾಸ ಕಥನವಂತೂ ಇಲ್ಲವೇ ಇಲ್ಲ. ಹೀಗಿದ್ದೂ ಈ ಪ್ರವಾಸ ಕಥನವನ್ನು ನಾನೇ ಪ್ರಕಟಿಸಬೇಕಾಯಿತು ಅನ್ನುವ ನೋವು ನನ್ನಲ್ಲಿ ಈಗಲೂ ಇದೆ.

ಪ್ರಶ್ನೆ: ಉಮ್ರಾದಲ್ಲಿ ಏನಿದೆ ಅಂತ ವಿಶೇಷತೆ?

ಉತ್ತರ: ಓರ್ವ ಭಾವುಕ ಯಾತ್ರಾರ್ಥಿ ಎಂಬ ನೆಲೆಯಲ್ಲಿ ನೋಡುವುದಾದರೆ ಉಮ್ರಾ ಯಾತ್ರೆಯಲ್ಲಿ ವಿಶೇಷತೆ ಏನೂ ಇಲ್ಲ. ವಿಮಾನದಲ್ಲಿ ಪ್ರಯಾಣ. ಮಕ್ಕಾ ಮತ್ತು ಮದೀನಾದಲ್ಲಿ ತಂಗಲು ಕೊಠಡಿ. ಪ್ರತಿದಿನ ಹೆಚ್ಚಿನ ಸಮಯವನ್ನು ಮಸ್ಜಿದುಲ್ ಹರಾಮ್ ಮತ್ತು ಮಸ್ಜಿದುನ್ನಭವಿಯಲ್ಲಿ ಕಳೆಯುವುದು, ಭಾವುಕವಾಗಿ ಪ್ರಾರ್ಥಿಸುವುದು, ತವಾಫ್, ಕೆಲವು ಐತಿಹಾಸಿಕ ಸ್ಥಳಗಳ ಸಂದರ್ಶನ, ಪ್ರವಾದಿಯವರಿಗೆ ಸಲಾಮ್ ಹೇಳುವುದು ಮತ್ತು ಧನ್ಯತಾಭಾವದೊಂದಿಗೆ ಮರಳುವುದು… ಇತ್ಯಾದಿಗಳಷ್ಟೇ. ಓರ್ವ ಭಾವುಕ ಯಾತ್ರಾರ್ಥಿಯ ಮಟ್ಟಿಗೆ ಉಮ್ರಾ ಯಾತ್ರೆ ಎಂಬುದು ಪ್ರವಾದಿ ಮೆಟ್ಟಿದ ಮಣ್ಣಿಗೆ ಕಾಲಿಡುವುದು ಮತ್ತು ತನ್ನ ವಿಶ್ವಾಸವನ್ನು ಬಲಪಡಿಸಿಕೊಳ್ಳುವುದು ಎಂಬುದೇ ಮುಖ್ಯವಾಗಿರುತ್ತದೆ. ಆದರೆ ಭಾವುಕತೆಯ ಜೊತೆಗೇ ಒಂದಷ್ಟು ಕುತೂಹಲವನ್ನು ಇಟ್ಟುಕೊಂಡರೆ ಉಮ್ರಾ ಯಾತ್ರೆ ನಿಮಗೆ ಇತಿಹಾಸದ ಸಂಗತಿಗಳನ್ನಷ್ಟೇ ಅಲ್ಲ ವರ್ತಮಾನದ ಪಾಠಗಳನ್ನೂ ಹೇಳಿಕೊಡುತ್ತದೆ. ಇತಿಹಾಸವನ್ನು ವರ್ತಮಾನದಲ್ಲಿ ನಿಂತು ನೋಡುವುದಕ್ಕೆ ಮತ್ತು ಇಸ್ಲಾಮನ್ನು ಜಗತ್ತಿನ ಮುಂದೆ ಅತ್ಯಂತ ಸಮರ್ಥವಾಗಿ ಮಂಡಿಸುವುದಕ್ಕೆ ಪ್ರಬಲ ಪುರಾವೆಗಳನ್ನು ಅದು ಒದಗಿಸುತ್ತದೆ. ಮಕ್ಕಾ ಮತ್ತು ಮದೀನಾವು ಚರಿತ್ರೆಯಲ್ಲಿ ಕಳೆದುಹೋದ ಮತ್ತು ಈಗ ಬರೇ ಭಾವುಕವಾಗಿ ಸ್ಮರಿಸಿಕೊಳ್ಳುವುದಕ್ಕೆ ಇರುವ ಒಂದಲ್ಲ. ವರ್ತಮಾನದ ಬೆಳಕಿನಲ್ಲಿ ಇತಿಹಾಸವನ್ನು ಮತ್ತೆ-ಮತ್ತೆ ಶೋಧಿಸಿ, ಹೊಸತನ್ನು ಹುಡುಕಲು ಪ್ರಚೋದಿಸುವ ಒಂದು ಅದ್ಭುತವೂ ಹೌದು. ಇವತ್ತಿನ ಜಗತ್ತಿಗೆ ಮಕ್ಕಾ ಮತ್ತು ಮದೀನಾದಲ್ಲಿ ಅನೇಕರು ಪಾಠಗಳಿವೆ. ಮುಸ್ಲಿಮರನ್ನು ತಿವಿಯುವ, ಇರಿಯುವ, ಉತ್ತರಕ್ಕೆ ತಡಕಾಡುವಂತೆ ಮಾಡುವ ವರ್ತಮಾನದ ಪ್ರಶ್ನೆಗಳ ಗೋಣಿಚೀಲಕ್ಕೆ ಪರಿಣಾಮಕಾರಿ ಉತ್ತರ ಇದೆ. ಆದರೆ ಅದನ್ನು ಕಂಡುಕೊಳ್ಳುವುದಕ್ಕೆ ಬರೇ ಭಾವುಕ ಯಾತ್ರಾರ್ಥಿಯಿಂದ ಸಾಧ್ಯವಾಗದು.

ಪ್ರಶ್ನೆ: ನಿಮಗೆ ಎರಡನೇ ಬಾರಿ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಎರಡನೇ ಬಾರಿ ಪ್ರಶಸ್ತಿಗೆ ಆಯ್ಕೆಯಾದುದಕ್ಕೆ ನಿಮ್ಮ ಅಭಿಪ್ರಾಯ ಏನು?

ಉತ್ತರ: ಮೊದಲ ಬಾರಿ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಲಭಿಸಿದ್ದು- ನನ್ನ ದಾಯಿರ ಕಥಾಸಂಕಲನಕ್ಕೆ. ಅದು 2003ರಲ್ಲಿ. ಅದು ನನ್ನ ಚೊಚ್ಚಲ ಕೃತಿ. ಆಗ ನಾನಿನ್ನೂ ಎಳಸು. ಕೇವಲ ಕಥೆ ಮಾತ್ರ ಬರೆಯುತ್ತಿದ್ದೆ. ಅಂದಹಾಗೆ, ನಾನು ಬೆಳೆದದ್ದೇ ಕಥೆಗಾರನಾಗಿ. ಲೇಖನ ಬರೆಯಲು ಪ್ರಾರಂಭಿಸಿದ್ದು ಸನ್ಮಾರ್ಗ ಪತ್ರಿಕೆಗೆ ಸೇರ್ಪಡೆಗೊಂಡ ಬಳಿಕ. ಆಗ ನನಗೆ ಕಥೆ ಬರೆಯುದು ಮಾತ್ರ ಗೊತ್ತಿತ್ತು. ಈ ಕಥೆಗಳನ್ನೆಲ್ಲ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತರುವುದು ನನಗೆ ಆಗ ಹೊಸ ಸಂಗತಿಯಾಗಿತ್ತು. ಆಗ ನನ್ನಲ್ಲಿ ಇಂಥದ್ದೊಂದು ಆಸೆಯನ್ನು ಹುಟ್ಟಿಸಿದ್ದು ಗೆಳೆಯ ಅಸ್ಲಂ ಹಸನ್. ಅವರು ನನ್ನ ಆ ಕಥಾಸಂಕಲನದ ಪ್ರಕಟಣೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ಈ ಸಂದರ್ಭದಲ್ಲಿ ಅವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಎರಡನೇ ಬಾರಿ ಪ್ರಶಸ್ತಿಗೆ ಆಯ್ಕೆಗೊಂಡಿರುವದಕ್ಕೆ ಖುಷಿಯಿದೆ. ಮುಸ್ಲಿಮ್ ಸಾಹಿತ್ಯ ಪ್ರಶಸ್ತಿಗೆ ರಾಜ್ಯದಲ್ಲಿ ದೊಡ್ಡ ಗೌರವವಿದೆ. ಮೂರು ದಶಕಗಳ ದೀರ್ಘ ಇತಿಹಾಸವೂ ಇದಕ್ಕಿದೆ. ಅಲ್ಲದೆ, ಈ ರಾಜ್ಯದ ಪ್ರಮುಖ ಮುಸ್ಲಿಂ ಸಾಹಿತಿಗಳು ಈ ಪ್ರಶಸ್ತಿಗೆ ಬಂದ ಕೃತಿಗಳನ್ನು ಓದಿ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ರಾಜ್ಯದಾದ್ಯಂತದಿಂದ ಮುಸ್ಲಿಂ ಬರಹಗಾರರು ಈ ಪ್ರಶಸ್ತಿಗಾಗಿ ಕೃತಿಗಳನ್ನು ಕಳುಹಿಸುತ್ತಾರೆ. ಇಂತಹ ಸ್ಪರ್ಧೆಯಲ್ಲಿ ನನ್ನ, ಎಣ್ಣೆ ಬತ್ತಿದ್ದ ಲಾಟೀನು ಕೃತಿಆಯ್ಕೆಯಾಗಿದೆ ಅನ್ನೋದಕ್ಕೆ ಹೆಮ್ಮೆಯಿದೆ.
ಅಲ್ಲದೆ, ದೀರ್ಘ ಹದಿನೈದು ವರ್ಷಗಳ ಬಳಿಕ ಎರಡನೇ ಬಾರಿ ನಾನು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆ ಎಂಬುದು ನನ್ನ ಈ ಖುಷಿಯನ್ನು ಇಮ್ಮಡಿಗೊಳಿಸಿದೆ. ದಾಯಿರ ನನ್ನ ಮೊದಲ ಕೃತಿಯಾದರೆ ಎಣ್ಣೆ ಬತ್ತಿದ ಲಾಟೀನು ನನ್ನ ಆರನೇಯ ಕೃತಿ.

ಪ್ರಶ್ನೆ: ಮುಂದೆ ಯಾವ ಕೃತಿ ಬರೆಯುವ ಯೋಜನೆ ಇದೆ?

ಉತ್ತರ: ಕುಂತಿ ಎಂಬ ಹೆಸರಿನ ಕಾದಂಬರಿಯೊಂದನ್ನು ಬರೆಯುತ್ತಿದ್ದೇನೆ. ನನ್ನ ಬಹುನಿರೀಕ್ಷೆಯ ಕಾದಂಬರಿಯಿದು. ಬರೆಯಲು ಪ್ರಾರಂಭಿಸಿ ತಿಂಗಳುಗಳೇ ಕಳೆದಿವೆಯಾದರೂ ಬರೆದಿರುವುದು ಬಹಳ ಕಡಿಮೆ. ಪತ್ರಿಕಾ ಕೆಲಸದ ಒತ್ತಡದ ಮಧ್ಯೆ ಬಿಡುವು ಸಿಗುತ್ತಿಲ್ಲ. ಈ ನಡುವೆ ನನ್ನ ಸಣ್ಣ ಕಥೆಗಳ ಸಂಗ್ರಹವನ್ನು ಹೊರತರಬೇಕೆಂಬ ಯೋಜನೆಯಿದೆ. ಈಗಾಗಲೇ 75 ಶೇಕಡಾ ಕೆಲಸಗಳು ಪೂರ್ತಿಯಾಗಿವೆ. ಅತಿಶೀಘ್ರ ಈ ಸಂಕಲನವನ್ನು ಹೊರತರುವ ಉದ್ದೇಶವಿದೆ.
ಪ್ರಶ್ನೆ: ಪುಸ್ತಕ ಓದಿದವರಿಂದ ನಿಮಗೆ ಸಿಕ್ಕಿದ ಅತ್ಯುತ್ತಮ ಅಭಿಪ್ರಾಯವೊಂದು ಯಾವುದು?
ಉತ್ತರ: ಈ ಕೃತಿಯನ್ನು ಓದಿದ ಬಳಿಕ ಅನೇಕರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪ್ರಜಾವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕ ಬಿ ಎಂ ಹನೀಫ್ ಅವರ ಒಂದು ಸಾಲು ನನ್ನನ್ನು ಬಹಳವಾಗಿ ಕಾಡಿದೆ. ಅದು ಹೀಗಿದೆ:
“ಒಂದು ಅಪರಿಚಿತ ಸ್ಥಳವನ್ನು ನೋಡುತ್ತಾ ಅಕ್ಷರಗಳಲ್ಲಿ ಅದು ಜೀವಂತವಾಗುವಂತೆ ವಿವರಿಸುವುದು ಬೇರೆ; ಸಮಕಾಲೀನ ಸಂದರ್ಭದ ಎಚ್ಚರವನ್ನು ಇಟ್ಟುಕೊಂಡು, ಇತಿಹಾಸದ ಪಳಿಯುಳಿಕೆಗಳನ್ನು ಸ್ಪರ್ಶಿಸಿ ಓದುಗರ ದರ್ಶನಕ್ಕೆ ದಕ್ಕಿಸುವುದೇ ಬೇರೆ. ನಿಮ್ಮದು ಎರಡನೇ ಕ್ರಮದ ಬರವಣಿಗೆ. ಅದು ಪುಸ್ತಕದ ಉದ್ದಕ್ಕೂ ಕಣ್ಣಿಗೆ ಕಟ್ಟುವಂತಿದೆ. ನಿಜಕ್ಕೂ, ಅಂತಃಕರಣವುಳ್ಳ, ಕವಿ ಹೃದಯದ ಲೇಖಕನೊಬ್ಬ ಮಾತ್ರ ಹೀಗೆ ಇತಿಹಾಸ ಮತ್ತು ವರ್ತಮಾನದ ಮಧ್ಯೆಯ ಬಿಂದುವಿನಲ್ಲಿ ನಿಂತುಕೊಂಡು ಖಚಿತವಾಗಿ ಯೋಚಿಸಬಲ್ಲ..”
“ಹತ್ತು ಬಾರಿ ಉಮ್ರಾ ಮಾಡುವಷ್ಟು ಹಣವನ್ನು ನಾನು ಪ್ರತಿವರ್ಷ ದುಡಿಯುತ್ತಿದ್ದರೂ ನನಗೆ ಉಮ್ರಾ ಮಾಡುವ ಭಾಗ್ಯ ದೊರಕಿಲ್ಲ. ಈ ಪುಸ್ತಕ ಓದಿದ ಬಳಿಕ ಉಮ್ರಾ ಮಾಡುವ ಮನದಿಚ್ಛೆ ದ್ವಿಗುಣಗೊಂಡಿದೆ…” ಎಂದವರು ಹೇಳಿರುವುದು ಈ ಕೃತಿಗೆ ಸಿಕ್ಕ ಪಾರಿತೋಷಕ ಎಂದುಕೊಳ್ಳುವೆ. ಖ್ಯಾತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ, ಫಕೀರ್ ಮುಹಮ್ಮದ್ ಕಟಪಾಡಿಯವರೂ ಈ ಕೃತಿಯನ್ನು ಮೆಚ್ಚಿಕೊಂಡಿದ್ದಾರೆ. ರಾಜ್ಯದ ಅನೇಕ ಸಾಹಿತಿಗಳು ಈ ಕೃತಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸಿಂಧನೂರು, ಕೊಡಗು, ಉಡುಪಿ ಸಹಿತ ರಾಜ್ಯದ ಅನೇಕ ಕಡೆಯ ಗೆಳೆಯರು ಸ್ವಪ್ರೇರಣೆಯಿಂದ ಈ ಪುಸ್ತಕವನ್ನು ಪಡೆದು ಮಾರಾಟ ಮಾಡಿದ್ದೂ ಇದೆ. ಸಾಕಷ್ಟು ಮಂದಿ ಈ ಪುಸ್ತಕವನ್ನು ಅಂಚೆಯ ಮೂಲಕ ಪಡೆದುಕೊಂಡಿದ್ದಾರೆ. ವಿಶೇಷವಾಗಿ, ಈ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ತೊಕ್ಕೊಟ್ಟಿನ ಹಿರಾ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ಅವರ ವಿಮರ್ಶೆಯನ್ನು ನಾನಿಲ್ಲಿ ಸ್ಮರಿಸಿಕೊಳ್ಳಲೇ ಬೇಕು. ಅಪಾರ ಒಳನೋಟಗಳುಳ್ಳ ಕೃತಿ ವಿಮರ್ಶೆಯನ್ನು ಅವರು ಆ ಸಂದರ್ಭದಲ್ಲಿ ಮಾಡಿದ್ದರು. ಉಪನ್ಯಾಸಕಿ ಆಯಿಷಾ ಯು ಕೆ ಅವರು ಅಚ್ಚುಕಟ್ಟಾದ ಬಿಡುಗಡೆ ಸಮಾರಂಭವನ್ನು ಕಾಲೇಜಿನಲ್ಲಿ ಏರ್ಪಡಿಸಿದ್ದರು. ಬಹುಶಃ ಪುಸ್ತಕವೊಂದು ಕಾಲೇಜಿನಲ್ಲಿ ಅದೂ ಬರೇ ವಿದ್ಯಾರ್ಥಿಗಳೇ ಸಭಿಕರಾಗಿರುವ ಸ್ಥಿತಿಯಲ್ಲಿ ಬಿಡುಗಡೆಗೊಂಡಿರುವುದು ಇದುವೇ ಮೊದಲು ಇರಬೇಕು.

ಅಂದಹಾಗೆ ನನ್ನ ಉಮ್ರಾ ಯಾತ್ರೆಯನ್ನು ಸಾಧ್ಯವಾಗಿಸಿದ ಗೆಳೆಯನನ್ನು ನಾನಿಲ್ಲಿ ಸ್ಮರಿಸಿಕೊಳ್ಳಲೇ ಬೇಕು. ಅವರನ್ನು ದೇವನು ಅನುಗ್ರಹಿಸಲಿ.

Leave a Reply