ಖಾಸಗಿ ಶಾಲೆಗಳ ನಿಯಂತ್ರಣ ಕುರಿತು ರಾಜ್ಯ ಸರ್ಕಾರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಖಾಸಗಿ ಶಾಲೆಗಳ ದುಬಾರಿ ಶುಲ್ಕ ಮತ್ತಿತರ ವಿಷಯದಲ್ಲಿ ನಿಯಂತ್ರಣ ಬರಲಿದೆ.

ಖಾಸಗಿ ಶಾಲೆಗಳ ಶುಲ್ಕ ನಿಗದಿ ಮುಂದಿನ ವರ್ಷದಿಂದ ಜಾರಿ ಮಾಡಲಾಗುತ್ತದೆ. ಖಾಸಗಿ ಶಾಲೆಗಳ ಶುಲ್ಕ ನಿಗದಿ ಸಂಬಂಧ ಈಗಾಗಲೇ ಕರಡು ಮಸೂದೆ ಸಿದ್ಧವಾಗಿದೆ. ಅಧಿವೇಶನದಲ್ಲಿ ಮಂಡಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಶುಲ್ಕ ನೀತಿ ಜಾರಿಗೆ ತರುತ್ತೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಅವರು ಪಿಯುಸಿ ಬೋರ್ಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಾ, ಒಂದು ವೇಳೆ ಶುಲ್ಕ ನಿಗದಿ ಮಾಡಿದ ಮೇಲೆ ಹೆಚ್ಚುವರಿ ಶುಲ್ಕ ಪಡೆದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾತ್ರವಲ್ಲ ಹೆಚ್ಚುವರಿ ಶುಲ್ಕ ಮರು ಪಾವತಿ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಕಾಯ್ದೆ ಹಿನ್ನೆಲೆ:
1998-99 ಶುಲ್ಕ ನಿಗಧಿ ಮಾಡಲಾಗಿತ್ತು. ಇದರ ಅನ್ವಯ ಖಾಸಗಿ ಶಾಲೆಯೊಂದರ ಒಟ್ಟಾರೆ ಸಿಬ್ಬಂದಿಯ ಸಂಬಳ ಹಾಗೂ 30% ಹೆಚ್ಚುವರಿಯನ್ನು ಒಟ್ಟು ಮಾಡಿ ವಿದ್ಯಾರ್ಥಿಗಳ ಅನುಗುಣಕ್ಕೆ ಭಾಗಿಸಿದ ಮೊತ್ತವನ್ನು ಶುಲ್ಕವಾಗಿ ಪಡೆಯುವ ನಿಯಮ ರೂಪಿಸಲಾಗಿತ್ತು. ಇದರ ಅನ್ವಯ ಹೆಚ್ಚುವರಿ ಪಡೆದ 30% ಶುಲ್ಕದಲ್ಲಿ ಶಾಲೆಯ ಇನ್ನಿತರ ಖರ್ಚುಗಳು ಕರೆಂಟ್ ಬಿಲ್, ಬಾಡಿಗೆ ಇತ್ಯಾದಿಗಳನ್ನು ಮಾಡಬೇಕಿತ್ತು.

ಖಾಸಗಿ ಶಾಲೆಗಳ ವಿರೋಧ:
ಕಾಯ್ದೆಗೆ ಕೆಲವು ಮಧ್ಯಮ ವರ್ಗದ ಶಾಲೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಶಿಕ್ಷಣ ಇಲಾಖೆ 2015ರಲ್ಲಿ ಶುಲ್ಕ ಪರಿಷ್ಕರಣೆ ಸಂಬಂಧ ಕರಡು ರಚಿಸಿತ್ತು. ಇದರಲ್ಲಿ ಶಿಕ್ಷಕರ ಸಂಬಳ ಒಟ್ಟು ಮೊತ್ತ ಮತ್ತು ಗ್ರಾಮೀಣ ಪ್ರದೇಶಗಳಿಗೆ 50%, ಅರೆ ನಗರ ಪ್ರದೇಶಗಳಿಗೆ 60%, ನಗರ ಪಾಲಿಕೆಗಳಿಗೆ 75% ಹಾಗೂ ಬಿಬಿಎಂಪಿ ವಲಯಗಳಿಗೆ 100% ಶುಲ್ಕ ಹೆಚ್ಚಳ ಪಡೆಯುವ ಪ್ರಸ್ತಾಪ ಮಾಡಲಾಗಿತ್ತು. ಅಲ್ಲದೆ ಪ್ರತೀ ವರ್ಷ 10% ರಿಂದ 15% ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿತ್ತು. ಇದಕ್ಕೆ ಅನೇಕ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಖಾಸಗಿ ಶಾಲೆಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಖಾಸಗಿ ಶಾಲೆಗಳು ಶುಲ್ಕ ವರ್ಗೀಕರಣ ಸರಿ ಇಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ಕರಡು ಮಸೂದೆ ಮಂಡನೆಯಾಗಿರಲಿಲ್ಲ.

ಏನು ಲಾಭ?
ಕಾಯ್ದೆ ಜಾರಿಯಾದರೆ ಖಾಸಗಿ ಶಾಲೆಗಳ ಧನದಾಹಿ ತನಕ್ಕೆ ಬ್ರೇಕ್ ಬೀಳಲಿದೆ. ಶಾಲೆಗಳು ಮನಸ್ಸಿಗೆ ಬಂದಂತೆ ಶುಲ್ಕ ಪಡೆಯಲು ಸಾಧ್ಯವಾಗುವುದಿಲ್ಲ. ಲಕ್ಷ ಲಕ್ಷ ರೂ. ಹಣ ಶುಲ್ಕ ಪಡಿಯುವ ಶಾಲೆಗಳಿಗೆ ಬ್ರೇಕ್ ಬೀಳುತ್ತದೆ. ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ತಕ್ಕಂತೆ ಶುಲ್ಕ ಪರಿಷ್ಕರಣೆ ಮಾಡಲಾಗುತ್ತೆ. ಏಕರೂಪ ಶುಲ್ಕ ಮಾಡಲು ಸಾಧ್ಯವಾಗದೇ ಇದ್ದರೂ ಮನ ಬಂದಂತೆ ಶುಲ್ಕ ಪಡಿಯುವ ಶಾಲೆಗಳಿಗೆ ಬ್ರೇಕ್ ಬೀಳುತ್ತದೆ.

ಕೃಪೆ: ಪಬ್ಲಿಕ್ ಟಿವಿ

Leave a Reply