ಒಡಿಶಾದ ಬಿನೋದಿನಿ ಸಮಲ್ಗೆ ಎಂಬ ಶಿಕ್ಷಕಿ ಮಕ್ಕಳಿಗೆ ಕಲಿಸುವ ಸಲುವಾಗಿ ದಿನಾಲೂ ನದಿ ದಾಟಿ ಶಾಲೆಗೆ ತಲುಪುತ್ತಾರೆ. 49 ವರ್ಷದ ಸಮಲ್ 2008 ರಿಂದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಒಡಿಶಾ ಶಿಕ್ಷಣ ಇಲಾಖೆಯಿಂದ 2000 ರ ಆರಂಭದಲ್ಲಿ ನೇಮಕಗೊಂಡ ಸಾವಿರಾರು ಗುತ್ತಿಗೆ ಶಿಕ್ಷಕರಲ್ಲಿ ಇವರೂ ಒಬ್ಬರು. ಮಳೆಗಾಲದಲ್ಲಿ ಪ್ರತಿದಿನ ತನ್ನ ಶಾಲೆಗೆ ಹೋಗಲು ಸಪುವಾ ನದಿಯನ್ನು ದಾಟಬೇಕಾಗುತ್ತದೆ.  “ಕೆಲಸ ನನಗ ಎಲ್ಲಕ್ಕಿಂತ ಮುಖ್ಯವಾಗಿದೆ. ನಾನು ಮನೆಯಲ್ಲಿ ಕುಳಿತು ಏನು ಮಾಡಲಿಕ್ಕಿದೆ” ಎಂದು ಸಮಲ್ ಹೇಳಿದರು. ಕೇವಲ 1,700 ರೂ ಸಂಬಳದಿಂದ ಪ್ರಾರಂಭವಾದ ಈ ಶಿಕ್ಷಕಿ ಕೆಲಸಕ್ಕೆ ಈಗ ತಿಂಗಳಿಗೆ 7,000 ರೂ ಸಂಬಳ ಸಿಗುತ್ತಿದೆ.

ಸಮಲ್ ಕಲಿಸುವ ರಥಿಯಾಪಾಲ್ ಪ್ರಾಥಮಿಕ ಶಾಲೆಯಲ್ಲಿ 53 ವಿದ್ಯಾರ್ಥಿಗಳಿದ್ದು, ಹಿಂದೂಲ್ ಬ್ಲಾಕ್‌ನ ಜರಿಪಾಲ್ ಗ್ರಾಮದಲ್ಲಿರುವ ಅವರ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿ ಸಪುವಾ ನದಿ ಆಚೆಗೆ ಈ ಶಾಲೆ ಇದೆ. ಕೆಲವು ವರ್ಷಗಳ ಹಿಂದೆ ನದಿಯ 40 ಮೀಟರ್ ಅಗಲಕ್ಕೆ ಸೇತುವೆಯನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿತ್ತು, ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಬೇಸಿಗೆಯಲ್ಲಿ ನದಿ ಒಣಗಿರುತ್ತದೆ. ಆದರೆ ಮಳೆಗಾಲದಲ್ಲಿ ನೀರು ತುಂಬಿಕೊಂಡಿರುತ್ತದೆ. ಎರಡು ದಿನಗಳ ಹಿಂದೆ ಶಿಕ್ಷಕಿ ಸಮಲ್, ನದಿ ದಾಟುವ ಫೋಟೋಗಳು ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದವು. ಆಗ ನೀರು ಅವರ ಕುತ್ತಿಗೆಯವರೆಗೆ ತುಂಬಿತ್ತು. ಅವರು ಕೈಚೀಲವನ್ನು ಒಂದು ಕೈಯಲ್ಲಿ ಎತ್ತಿ ಹಿಡಿದಿದ್ದರು.

“ನಾನು ಯಾವಾಗಲೂ ಸೀರೆ, ಪೆಟಿಕೋಟ್ ಮತ್ತು ಕುಪ್ಪಸವನ್ನು ಶಾಲೆಯ ಅಲ್ಮಿರಾದಲ್ಲಿ ಇಡುತ್ತೇನೆ. ನದಿಯನ್ನು ದಾಟುವಾಗ, ನನ್ನ ಮೊಬೈಲ್ ಫೋನ್ ಮತ್ತು ಇತರ ಅಗತ್ಯ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ಈಜುತ್ತೇನೆ . ಶಾಲೆಗೆ ತಲುಪಿದ ನಂತರ ಬಟ್ಟೆ ಬದಲಿಸಿ ಸಮವಸ್ತ್ರ ಧರಿಸುತ್ತೇನೆ . ನೀರಿನಲ್ಲಿ ಒದ್ದೆಯಾಗುವ ಕಾರಣ, ಕೆಲವೊಮ್ಮೆ ಅನಾರೋಗ್ಯಕ್ಕೆ ಒಳಗಾಗಿದ್ದರೂ, ನಾನು ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ”ಎಂದು 1 ರಿಂದ 3 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಸುವ ಸಮಲ್ ಹೇಳುತ್ತಾರೆ.

ಉತ್ತಮ ಈಜುಗಾರರಾಗಿದ್ದರೂ ಮಳೆಗಾಲದಲ್ಲಿ ನೀರಿನ ರಭಸಕ್ಕೆ ಅವರು ಕೆಲದೂರ ಕೊಚ್ಚಿ ಹೋದದ್ದೂ ಇದೆ. ಬಳಿಕ ಅವರು ದಡವನ್ನು ಹೇಗಾದರೂ ಮಾಡಿ ದಾಟುತ್ತಿದ್ದರು. ಹಲವು ವರ್ಷಗಳ ಕಠಿಣ ಪರಿಶ್ರಮದ ಹೊರತಾಗಿಯೂ, ಸಮಲ್ ಅವರ ಸೇವೆ ಇನ್ನೂ ಪೆರ್ಮಂನೆಂಟ್ ಎಂದು ಪರಿಗಣಿಸಲ್ಪಟ್ಟಿಲ್ಲ. ನಿಜವಾಗಿ ಕಳೆದ 3 ವರ್ಷಗಳಿಂದ ಮಾಸಿಕ 27,000 ರೂ. ವೇತನ ನನಗೆ ಸಿಗಬೇಕಾಗಿತ್ತು. ಆದರೆ ಇದುವರೆಗೆ ಅದು ಸಾಧ್ಯವಾಗಿಲ್ಲ ” ಎಂದು ಸಮಲ್ ಹೇಳಿದರು.

Leave a Reply