ಬದುಕು ಮನುಷ್ಯನಿಗೆ ಹಲವಾರು ಪಾಠಗಳನ್ನು ಕಲಿಸುತ್ತದೆ. ಕೆಲವೊಮ್ಮೆ ಬದುಕಿನಲ್ಲಿ ಸುನಾಮಿ ಬಂದ ಅನುಭವಾದರೆ ಇನ್ನು ಕೆಲವೊಮ್ಮೆ ನಾವು ಜೀವಂತವಿರುವಾಗಲೇ ಸ್ವರ್ಗಕ್ಕೆ ಹೋದ ಅನುಭವ… ಬದುಕೆಂದರೆ ಹಾಗೆ ಅಲ್ವ? ಅದು ಯಾವಾಗ, ಯಾವ ತಿರುವನ್ನು ಬೇಕಾದರೂ ಪಡೆಯಬಹುದು. ಹಾಗಾಗಿ ಬದುಕಿನ ಬದಲಾವಣೆಯ ಬಗ್ಗೆ ಯಾವ ಗ್ಯಾರಂಟಿಯೂ ಇಲ್ಲ. ಇಂದು ಸೂಪರ್ ಸ್ಟಾರ್ ಆದವರು ನಾಳೆ ಭಿಕ್ಷೆ ಬೇಡಬಹುದು. ನಿನ್ನೆ ಭಿಕ್ಷೆ ಬೇಡುತ್ತಿದ್ದವರು, ಸೂರಿಲ್ಲದೆ ಅಲೆದಾಡುತ್ತಿದ್ದವರು ಇಂದು ಬಂಗಲೆಯೊಳಗೆ ವಾಸ ಹೂಡುವಂತಾಗಬಹುದು. ಅಂದಹಾಗೆ ನಾನು ಹೇಳ ಹೊರಟಿರುವುದಾದರೂ ಏನು ಅಂತಿರಾ? ಹೌದು ಹೇಳ ಹೊರಟ್ಟಿದ್ದು ಮೂರು ವ್ಯಕ್ತಿಗಳ ಬದುಕಿನ ಬಗ್ಗೆ ಒಂದು ಸಣ್ಣ ಹಿನ್ನೋಟ…..

ನಿಮಗೆ ಗೊತ್ತಿರಬಹುದು ಅಲ್ಲೊಬ್ಬ ಯುವಕನಿದ್ದ. ಸುಂದರವಾದ ಕಾಡಿನಲ್ಲಿ ತನಗಿಷ್ಟ ಬಂದಂತೆ ಪ್ರಾಣಿ ಪಕ್ಷಿಗಳಂತೆ ಹಾರಾಡುತ್ತಾ ತನ್ನ ಪುಟ್ಟ ಸಂಸಾರದೊಂದಿಗೆ ಜೀವನವನ್ನು ಸಾಗಿಸುತ್ತಿದ್ದ. ಆತ ಬೇರೆ ಯಾರು ಅಲ್ಲ ‘ಹಳ್ಳಿ ಹೈದ’ ಖ್ಯಾತಿಯ ರಾಜೇಶ್. ರಾಜೇಶ್‌ಗೆ ಪಟ್ಟಣ ಗೊತ್ತಿತ್ತು ಆದರೆ ಪಟ್ಟಣದ ಜನರ ಬದುಕಿನ ಶೈಲಿಯ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಆದರೆ ಅದೃಷ್ಟವಶಾತ್ ಆತನ ಬದುಕಿನಲ್ಲಿ ಅನಿರೀಕ್ಷಿತ ತಿರುವೊಂದು ಪಡೆಯಿತು. ಖಾಸಗಿ ಕನ್ನಡ ಟಿವಿ ಚಾನೇಲ್‌ನಲ್ಲಿ ಆತನಿಗೊಂದು ವೇದಿಕೆ ನಿರ್ಮಾಣವಾಯಿತು. ಆತ ವೇದಿಕೆಯಕ್ಕೆನ್ನೇರಿ ಪ್ರತಿಭೆಯನ್ನು ಪ್ರದರ್ಶಿಸುವಂಥ ವ್ಯಕ್ತಿಯೇನು ಅಲ್ಲ. ಆದರೂ ಕನ್ನಡ ಚಾನೇಲ್‌ವೊಂದರ ರಿಯಾಲಿಟಿ ಶೋನಲ್ಲಿ ಆತ ‘ಕಾಡು ಜನ’ ಎಂಬ ಕಾರಣಕ್ಕೆ ಅವಕಾಶ ಹುಡುಕಿಕೊಂಡು ಬಂತು…

ರಿಯಾಲಿಟಿ ಶೋನಲ್ಲಿ ಎಲ್ಲರಿಗಿಂತ ಭಿನ್ನವಾಗಿ ಅಂದರೆ ರಿಯಾಲಿಟಿ ಶೋ ಎಂಬುದನ್ನೆ ಮರೆತು ಮುಗ್ಧ ಮಗುವಿನಂತೆ ಜನ, ವಾತಾವರಣ, ಕಸಿದ ಸ್ವಾತಂತ್ರ್ಯದ ವಿರುದ್ಧ ಹರಿದಾಯ್ದು ಜನಮನ ಗೆದ್ದು ಜನರ ಪಾಲಿನ ಇನೊಸೆಂಟ್ ಹೀರೋ ಆಗಿ ಬಿಡ್ತಾನೆ.. ರಾತೋರಾತ್ರಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸುತ್ತಾನೆ… ಆತನ ಜನಪ್ರಿಯತೆಯನ್ನು ಕಂಡು ಬೆರಗಾದ ಚಾನೇಲ್ ಆತನನ್ನು ಇನ್ನಷ್ಟು ಬಳಸಿಕೊಂಡು ಟೀರ್‌ಪಿ ಪಡೆಯಿತು.. ಕಟ್ಟಕಡೆಗೆ ಆತ ಅದೇನಾದನೋ ದೇವನೆ ಬಲ್ಲ… ಓದು ಬರಹ ಗೊತ್ತಿಲ್ಲದ ಯುವಕನಿಗೆ ಮದುವೆಯಾಗಿ ಮಡದಿ ಗರ್ಭಿಣಿಯಾಗಿದ್ದಾಗ ಜೊತೆಯಾಗಿ ರಿಯಾಲಿಟಿ ಶೋ ಹಾಗೂ ಸಿನಿಮಾದಲ್ಲಿ ನಟಿಸಿದ್ದ ಯುವತಿ ಜೊತೆ ಸಲುಗೆಯಾಗಿ ಕಡೆಗೆ ಆಕೆಯ ಧ್ಯಾನದಲ್ಲೇ ಏನೇನೋ ಆದ. ಕೊನೆಗೆ ಆತನನ್ನು ಸಾವು ಕೂಡ ಇಷ್ಟಪಟ್ಟು ಆತನನ್ನು ಕರೆದುಕೊಂಡೇ ಹೋಯಿತು…

ಇದು ರಾಜೇಶ್ ಕತೆಯಾದರೆ ಇತ್ತೀಚೆಗೆ ನಾವೆಲ್ಲಾ ಕಂಡಿರುವ ವೆಂಕಟ್ ಅಲಿಯಾಸ್ ಹುಚ್ಚಾ ವೆಂಕಟ್ ಕತೆ ಇನ್ನೊಂದು ರೀತಿಯಿದೆ. ವೆಂಕಟ್ ಬಗ್ಗೆ ಹೆಚ್ಚು ಹೇಳೋದಕ್ಕಿಂತ ಟಿವಿ ಚಾನೇಲ್‌ಗಳು, ಮಾಧ್ಯಮಗಳು, ಸಿನಿಮಾ ರಂಗವೂ ಆತನನ್ನು ಬಳಸಿಕೊಂಡು, ಜನರ ಬಾಯಿಂದ ಹುಚ್ಚಾ ಅಂತ ಕರೆಸಿಕೊಂಡನು. ಆ ಹುಚ್ಚಾ ಎಂಬ ಪದ ಆತನನ್ನು ಒಂದು ಮಟ್ಟಕ್ಕೆ ಕರೆದುಕೊಂಡು ಹೋಗಿ ಕೊನೆಗೆ ನಿಜ ಜೀವನದಲ್ಲೂ ಹುಚ್ಚಾನೇ ಆಗಿಬಿಟ್ಟ.

ಬೇಡ ಬೇಡ ಅಂದರು ಒಂದು ಕಡೆ ಜನ ಆತನನ್ನು ವ್ಯಂಗ್ಯ ಮಾಡತೊಡಗಿದರು. ಇನ್ನೊಂದು ಕಡೆ ಆತ‌ನಿಗಾಗಿ ಅಭಿಮಾನಿ ಬಳಗವನ್ನು ಕಟ್ಟಿಕೊಂಡರು. ಮತ್ತೊಂದೆಡೆ ರಾಜಕಾರಣಿಗಳು ಆತನನ್ನು ದುರ್ಬಳಕೆ ಮಾಡಿಕೊಂಡರು. ಕಳೆದ ಕೆಲ ದಿನಗಳ ಹಿಂದೆ ಆತ ಹುಚ್ಚನಂತೆ ತಮಿಳು ನಾಡಿನಲ್ಲಿ ತಿರುಗಾಡುತ್ತಿದ್ದ. ಬಳಿಕ ಮಡಿಕೇರಿಯಲ್ಲಿ ಕಾರೊಂದರ ಮೇಲೆ ದಾಳಿ ನಡೆಸಿ ಸಾರ್ವಜನಿಕರಿಂದ ಹಿಗ್ಗಾಮುಗ್ಗ ಹೊಡೆಸಿಕೊಂಡ… ಆತ ತಿಂದ ಪ್ರತಿಯೊಂದು ಏಟು ಕೂಡ ಆತನ ಹುಚ್ಚಾಭಿಮಾನಿಗಳು ಕೊಟ್ಟ ಕಾಣಿಕೆಯಾಗಿತ್ತು ಎಂಬ ಸತ್ಯವನ್ನು ಆತನೂ ಅರಿಯದಷ್ಟು ಮುಗ್ಧನಾಗಿದ್ದ…. ಕೊನೆಗೆ ಆತನನ್ನು ತಲೆಯಲ್ಲಿ ಹೊತ್ತುಕೊಂಡವರೇ ಕಾಲಡಿಯಲ್ಲಿ ಹಾಕಿ ತುಳಿದೇ ಬಿಟ್ಟರು…

ಕಟ್ಟಕಡೆಯದಾಗಿ ಸದ್ಯ ಟ್ರೆಂಡಲ್ಲಿರುವ ಮಹಿಳೆ ‘ರಾನು ಮೊಂಡಲ್’ ಎಂಬ ಭಿಕ್ಷಕಿ ಗಾಯಕಿಯಾದ ಕತೆ. ರಾನು ಮೊಂಡಲ್ ಕತೆ ಕೂಡ ಭಿನ್ನವಾಗಿಲ್ಲ. ಮೂಲೆಗುಂಪಾಗಿದ್ದ ಗಾಯಕ ಹಿಮೇಷ್ ರೆಶ್ಮಿಯಾ ಅವರನ್ನು ಮತ್ತೆ ಜನರ ಮುಂದೆ ಅನುಕೂಲ ಮಾಡಿಕೊಟ್ಟಿದ್ದು ರಾನು ಮೊಂಡಲ್ ಎಂಬ ಮಹಿಳೆ. ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಾ, ಭಿಕ್ಷೆ ಬೇಡುತ್ತಾ ಹೇಗೋ ಜೀವನ ಸಾಗಿಸುತ್ತಿದ್ದ ಮಹಿಳೆಯನ್ನು ಕರೆತಂದು ರಾತೋರಾತ್ರಿ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿಕೊಂಡರು. ದುರಂತ ನೋಡಿ, ಕೆಲ ದಿನಗಳ ಹಿಂದೆ ಆಕೆಯನ್ನು ಶಾಪಿಂಗ್ ಮಾಲ್‌ವೊಂದರಲ್ಲಿ ಮಹಿಳೆಯೊಬ್ಬಳು ಮೆಲ್ಲಗೆ ಕೈ ಮುಟ್ಟಿ ಕರೆದಿದ್ದಕ್ಕೆ ಆಕೆಗೆ ಕೋಪ ಬಂತು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಯ್ತು. ಆಕೆಯನ್ನು ತಲೆಯಲ್ಲಿ ಹೊತ್ತುಕೊಂಡವರೇ ಈಗ ಹಿಗ್ಗಾಮುಗ್ಗ ಟ್ರೊಲ್ ಮಾಡಿ ವಿಕೃತಾನಂದ ಪಡೆಯುತ್ತಿದ್ದಾರೆ…

ಮುಖ್ಯವಾಗಿ ಆಕೆಯನ್ನು ತಲೆಯಲ್ಲಿ ಹೊತ್ತು ಕೆಳಗೆ ಹಾಕಿದವರು ಒಂದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಆಕೆ ಒಬ್ಬಳು ಸಾಧಾರಣ ಮಹಿಳೆ. ಆಕೆಯ ಪಾಡಿಗಿದ್ದವಳು. ಆಕೆಯನ್ನು ಮೇಲಕ್ಕೆತ್ತಿದವರೇ ನೀವಲ್ಲವೆ ಈಗ ಆಕೆಯ ವರ್ತನೆ ಸರಿ ಇಲ್ಲ ಎಂದರೆ ಹೇಗೆ? ಆಕೆ ವಿದ್ಯಾವಂತಳೋ, ಬುದ್ಧಿವಂತಳೋ ಆಗಿದಿದ್ರೆ ಭಿಕ್ಷೆ ಬೇಡಿ ಬದುಕುವ ಅಗತ್ಯವಿರುತ್ತಿರಲಿಲ್ಲ. ಆಕೆಯಿಂದ ಹೆಚ್ಚಿನ್ನೇನು ನೀವು ನಿರೀಕ್ಷೆ ಮಾಡುತ್ತೀರಿ? ಅಷ್ಟೇ ಅಲ್ಲದೇ ಆಕೆಯ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ್ದಾರೆ. ಪೂರ್ವ ತಯಾರಿಯಾಗಿ ಆಕೆಯ ಮುಖಕ್ಕೆ ಒಂದಷ್ಟು ಮೇಕಪ್ ಮಾಡಿದ್ದಾರೆ. ಇದರಲ್ಲೂ ಆಕೆಯ ತಪ್ಪಿಲ್ಲ. ಈಗಲೂ ಆಕೆ ಮುಗ್ಧೆ.

ವಿಪರ್ಯಾಸವೆಂದರೆ ಮೇಲೆ ನಮೂದಿಸಿದ ಮೂರು ವ್ಯಕ್ತಿಗಳ ಬದುಕಿನ ಹಿನ್ನೆಲೆ ಭಿನ್ನವಾಗಿದೆ. ಒಬ್ಬ ಮರಣ ಹೊಂದುತ್ತಾನೆ.‌ ಇನ್ನೊಬ್ಬ ಹುಚ್ಚಾನಾದ, ಮತ್ತೋರ್ವಳನ್ನು ಕೊಲ್ಲಲು ಜನರು ಸ್ಕೇಚ್ ಹಾಕುತ್ತಿದ್ದಿದ್ದಾರೆ.. ವಿದ್ಯಾವಂತ, ಬುದ್ಧಿವಂತ ಜನರೇ ಇದೀಗ ಆಕೆಯ ವಿರೋಧಿ ಬಣದ ಅಧ್ಯಕ್ಷರು, ಉಪಾಧ್ಯಕ್ಷರುಗಳು…

ವ್ಯಕ್ತಿ ಆರಾಧನೆ ಎಷ್ಟು ಅಪಾಯಕಾರಿಯೋ, ವ್ಯಕ್ತಿಯನ್ನು ತೇಜೋವಧೆ, ಮಾನಹಾನಿ, ಟ್ರೊಲ್ ಮಾಡೋದು ಕೂಡ ಅಷ್ಟೇ ಅಪಾಯಕಾರಿ ತಿಳಿದಿರಿ. ನಾವು ಮಾಡುವ ಸಕಾರಾತ್ಮಕ, ನಕಾರಾತ್ಮಕ ಪ್ರತಿಕ್ರಿಯೆ, ವಿಮರ್ಶೆಗಳ ಪರಿಣಾಮಗಳು ಆಳವಾಗಿ ಬೀರುತ್ತದೆ.‌ ನಮಗೆ ಅದರ ಗೋಚರವಿರುವುದಿಲ್ಲ… ಅಂತೆಯೇ ಟಿವಿ, ಚಾನೇಲ್‌ಗಳು, ಮಾಧ್ಯಮಗಳು ಹೇಳಿದ್ದೇ ಸತ್ಯ, ನಡೆದಿದ್ದೇ ದಾರಿಯಲ್ಲ. ಪ್ರತಿಯೊಬ್ಬರಿಗೂ ತಲೆ ಎಂಬುದು ಯಾಕಿರೋದು. ಸ್ವಂತ ವಿವೇಚನೆಯಿಂದ ಮುಂದುವರೆಯಿರಿ. ಪ್ರತಿ ಸಲ ನಮಗೆ ಹೇಳಿಕೊಡುವವರು ಯಾರೂ ಇರೋದಿಲ್ಲ… ಒಬ್ಬರ ಬದುಕು, ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ಮಾಡುವ ಸಣ್ಣಪುಟ್ಟ ಎಡವಟ್ಟುಗಳು ಒಬ್ಬರ ಬದುಕನ್ನೇ ಬದಲಾಯಿಸಬಹುದು…. ಜನರನ್ನು ಅವರ ಪಾಡಿಗೆ ಬದುಕಲು ಬಿಟ್ಟರೆ ಇಂದಿನ ದಿನಗಳಲ್ಲಿ ನಾವು ಮಾಡುವ ಅತಿ ದೊಡ್ಡ ಉಪಕಾರ…

ಸಲಾಂ ಸಮ್ಮಿ

Leave a Reply