Image: GettyImages

ಮಕ್ಕಳಿಗೆ ಅವರ ಎಲ್ಲ ವಿಷಯಗಳನ್ನು ಮನಬಿಚ್ಚಿ ಹೇಳಲು ಮನೆಯಲ್ಲಿ ಉತ್ತಮ ಅವಕಾಶಗಳಿರಬೇಕು. ಮಕ್ಕಳೊಂದಿಗೆ ಅತ್ಯುತ್ತಮ ಸಂಬಂಧ ಇಟ್ಟುಕೊಂಡರೆ ಮಕ್ಕಳೆಂದೂ ದಾರಿ ತಪ್ಪುವುದಿಲ್ಲ ಎಂಬುದು ನನ್ನ ಅನುಭವ. ಅವರ ಸಣ್ಣ ಕೆಲಸಗಳಿಗೂ ನಾವು ಕಾಳಜಿ ವಹಿಸಬೇಕು.

ಅವರ ಮಾತುಗಳನ್ನು ಆಲಿಸಲು ಸಿದ್ಧರಾಗಬೇಕು. ದೊಡ್ಡ ಮಗ ಹತ್ತನೇ ತರಗತಿ ಮುಗಿಸಿದ್ದಾನೆ. ಎರಡನೆಯ ಮಗ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಏನಾದರೂ ಸಮಸ್ಯೆಗಳುಂಟಾದರೆ “ಇದು ಈ ರೀತಿ ವಿಷಯ. ಹೀಗೆ ಮುಂದುವರಿದರೆ ಮುಂದೆ ಏನೆಲ್ಲ ಅನಾಹುತ ಆಗುತ್ತದೆ” ವರ್ಗದ ಕುಟುಂಬ.

ನಮ್ಮ ಬಳಿಯಲ್ಲಿಲ್ಲದ್ದನ್ನು ಗೆಳೆಯನ ಕೈಯಲ್ಲಿ ನೋಡಿದಾಗ ಅವರು ಮನೆಗೆ ಬಂದು ನನ್ನ ಬಳಿ ಹೇಳುತ್ತಾರೆ. ಅತ್ಯಗತ್ಯವಾದುದನ್ನು ಕೊಡಿಸುತ್ತೇನೆ. ಹೆಚ್ಚಿನ ಬೇಡಿಕೆ ಬಂದರೆ ಮನೆಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳುವೆ. ನಿನ್ನ ಅಪ್ಪನಿಗೆ ಅಂತಹದ್ದನ್ನೆಲ್ಲ ಖರೀದಿಸಿ ಕೊಡಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಸಿ ಹೇಳುವೆ. ಅವನು ಕಲಿಯುವ ಹಾಗೇ ನೀನು ಕಲಿಯಬೇಕೆಂದು ಇನ್ನೊಬ್ಬರನ್ನು ತೋರಿಸಿ ಮಕ್ಕಳಲ್ಲಿ ಎಂದೂ ಮಾನಸಿಕ ಒತ್ತಡವನ್ನುಂಟು ಮಾಡಬಾರದು.

ಕೆಲವು ಅಧ್ಯಾಪಕರು ಚೆನ್ನಾಗಿ ಕಲಿಯುವ ಮಕ್ಕಳನ್ನು ಮಾತ್ರ ಪರಿಗಣಿಸಿ ತಾರತಮ್ಯ ಮಾಡುತ್ತಾರೆ. ನನ್ನ ದೊಡ್ಡ ಮಗ ಕಲಿಕೆಯಲ್ಲಿ ಬಹಳ ಚುರುಕು. ತಮ್ಮ ಸಾಧಾರಣ ವಿದ್ಯಾರ್ಥಿ. ಅಣ್ಣನಿಗೆ ಕಲಿಕೆಯಲ್ಲಿ ಪ್ರಶಸ್ತಿ ಪುರಸ್ಕಾರಗಳು ಲಭ್ಯವಾಗುವಾಗ ಸಣ್ಣವನಿಗೆ ಮನಸ್ಸಿನಲ್ಲಿ ಒತ್ತಡ ಉಂಟಾಗಬಾರದೆಂದು ನಾವು ಮನೆಯಲ್ಲಿ ಆತನ ಬಗ್ಗೆ ಬಹಳ ಕಾಳಜಿ ವಹಿಸುತ್ತೇವೆ.

ಮಕ್ಕಳ ಹಾಜರಿಯ ಬಗ್ಗೆ, ಶಾಲೆಯ ಚಟುವಟಿಕೆಯ ಬಗ್ಗೆ ನಿರಂತರ ಮೆಸೇಜುಗಳು ಹೆತ್ತವರಿಗೆ ಸಿಗುವ ವ್ಯವಸ್ಥೆ ಶಾಲೆಗಳಲ್ಲಿ ಇರಬೇಕು. ಅದೇ ರೀತಿ ಶಾಲೆಯ ಪಿಟಿಎ ಸದಸ್ಯರ ವಾಟ್ಸಾಪ್ ಗ್ರೂಪ್‍ಗಳೂ ಮಕ್ಕಳ ಶಾಲೆಯ ಬಗ್ಗೆ ಅರಿಯಲು ಉಪಕಾರಿಯಾಗಬಲ್ಲದು. ಮಕ್ಕಳು ಶಾಲೆ ಬಂಕ್ ಮಾಡಿ ಗೆಳೆಯರೊಂದಿಗೆ ಮಾಲ್‍ಗಳಲ್ಲಿ ತಿರುಗಾಡುತ್ತಾರೆ. ನಾವು ಹೆತ್ತವರು ಸಮಯ ಮಾಡಿಕೊಂಡು ಮಕ್ಕಳನ್ನು ಇಂತಹ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರೆ, ಈ ಸಮಸ್ಯೆ ಉಂಟಾಗುವುದಿಲ್ಲ.

ಶಾಲೆಗಳಲ್ಲಿ ಕೌನ್ಸೆಲಿಂಗ್‍ಗೆ ವ್ಯವಸ್ಥೆಯಿದ್ದರೆ ಉತ್ತಮ.ಶಾಲಾ-ಕಾಲೇಜುಗಳ ಸಮೀಪದ ಗೂಡಂಗಡಿಗಳಲ್ಲಿ ಮಾದಕ ವಸ್ತುಗಳು ಮಾರಲ್ಪಡುವುದನ್ನು ಕಠಿಣವಾಗಿ ನಿಷೇಧಿಸಬೇಕು. ಯಾರಾದರೂ ಮಾದಕವ್ಯಸನಕ್ಕೆ ಬಲಿಯಾದ ವಿದ್ಯಾರ್ಥಿಗಳಿದ್ದರೆ ಅವನನ್ನು ನಿರ್ಲಕ್ಷಿಸಿ ಬಿಡಬಾರದು.ಅವನನ್ನು ಪುನರ್ವಸತಿ ಕೇಂದ್ರಗಳಿಗೆ ಸೇರಿಸಿ ಗುಣಪಡಿಸಲು ಪ್ರಯತ್ನಿಸಬೇಕು. ಅಂತರ್ಜಾಲಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ಸಾಧ್ಯವಿಲ್ಲ. ಪಠ್ಯದ ಅಗತ್ಯಕ್ಕೆ ಇಂಟರ್‍ನೆಟ್ ಬಳಸಬೇಕಾಗಿ ಬರಬಹುದು. ಅವರು ಯಾವ ರೀತಿ ಉಪಯೋಗಿಸುತ್ತಾರೆ ಎಂಬುದನ್ನು ಸರಿಯಾಗಿ ಗಮನಿಸುತ್ತಿರಬೇಕು.

Leave a Reply