photo courtesy - great father movie

ಹೆರಿಗೆಗೆಂದು ಆಪರೇಷನ್ ರೂಮಿನೊಳಗೆ ಕೊಂಡೊಯ್ಯುತ್ತಿರುವ ತನ್ನ ಪತ್ನಿಯನ್ನು ಕೊನೆಯದಾಗಿ “ನಿನಗೇನೂ ಆಗಲ್ಲ ಚಿನ್ನೂ, ಏನೂ ಹೆದರಬೇಡ ” ಅಂತ ಒಳಗೊಳಗೆ ಅಳುತ್ತಿದ್ದರೂ, ತೋರ್ಪಡಿಸದೆ ಆಕೆಯ ಕೂದಲ ಮೇಲೆ ಪ್ರೀತಿಯಿಂದ ಸವರುತ್ತಾ, ಆಕೆಯ ಹಣೆಗೆ ಮುತ್ತಿಕ್ಕಿ ಸಾಂತ್ವನ ಹೇಳುತ್ತಾ ಕಳುಹಿಸಿಕೊಡುವಾಗ – ” ಓ ದೇವರೇ ತಾಯಿ ಮಗುವನ್ನು ನೀನೇ ಕಾಪಾಡು ” ಎಂಬ ಪ್ರಾರ್ಥನೆಯಾಗಿರುತ್ತದೆ ಗಂಡನಾದವನ ಮನಸಲ್ಲಿ….

ನಿಮ್ಮ ಪತ್ನಿ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದ್ದಾಳೆ ತಾಯಿ ಮಗು ಚೆನ್ನಾಗಿದ್ದಾರೆ… ಅಂತ ಡೋರ್ ತೆರೆದು ಬಂದ ನರ್ಸ್ ಹೇಳುವಾಗ ಆತನ ಕಣ್ಣುಗಳಲ್ಲಿ ಆತಂಕ ಮತ್ತು ಮನದೊಳಗೆ ಸಂತೋಷವೂ ಕಾಣಿಸುತ್ತದೆ ಆ ತಂದೆಯಲ್ಲಿ….

ನಂತರದ ದಿನಗಳಲ್ಲಿ ಆ ಮುದ್ದು ಮಗಳ ಉತ್ತಮ ಭವಿಷ್ಯವನ್ನು ರೂಪಿಸುವ ತಯಾರಿಯಲ್ಲಿ ಮಾತ್ರ ಬ್ಯುಸಿಯಾಗಿರುತ್ತಾರೆ ಆ ತಂದೆ…..

ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲುಹಿ, ಸಂತೋಷದ ದಿನಗಳುರುಳುತ್ತಿದ್ದಂತೆ ಒಂದು ದಿನ ಆಕೆ ಋತುಮತಿಯಾದಾಗ , ಮೊದಲು ಆ ತಂದೆಯ ಮನಸೊಮ್ಮೆ ಮರುಗಿತಾದರೂ , ಈ ಕ್ರಿಯೆಯು ಯಾವತ್ತಾದರೂ ಹೆಣ್ಣೊಬ್ಬಳಿಗೆ ಆಗಲೇ ಬೇಕಲ್ಲವೇ ಅಂತ ತನ್ನನ್ನು ತಾನೇ ಸಂತೈಸುವ ಮನಸಾಗಿರುತ್ತದೆ ಆ ತಂದೆಯದ್ದು….

ವಯಸಿಗೆ ಬಂದ ಮಗಳ ಶರೀರ ಭಾಗಗಳಲ್ಲಿ ಬೆಳವಣಿಗೆಯ ಬದಲಾವಣೆಯಾದಾಗ ಆ ತಂದೆಯ ಮನಸಲ್ಲಿ ಭಯವೆಂಬ ಕಪ್ಪುಛಾಯೆ ನೆಲೆಯೂರುತ್ತದೆ….

ನಂತರದ ದಿನಗಳಲ್ಲಿ ಮಗಳ ಪ್ರಯಾಣ ಮತ್ತು ವಸ್ತ್ರಧಾರಣೆಯು ತಂದೆ ಹೇಳುವ ಪ್ರಕಾರವೇ ಆಗಿರುತ್ತದೆ….

ದಿನನಿತ್ಯ ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸುವಾಗ ಖರ್ಚುಗಳನ್ನು ಕಡಿಮೆ ಮಾಡಿಯೂ , ಸಾಮಾನುಗಳ ಬೆಲೆಯನ್ನು ಚರ್ಚೆ ಮಾಡಿಯೂ ಮಗಳ ಮದುವೆ ಖರ್ಚಿಗಾಗಿ ಒಂದೊಂದು ರುಪಾಯಿಗಳನ್ನು ಒಟ್ಟುಗೂಡಿಸುತ್ತಿರುತ್ತಾರೆ ಆ ತಂದೆ….

ತಡ ರಾತ್ರಿಯವರೆಗೂ ಮಗಳ ಕೋಣೆಯಲ್ಲಿ ಲೈಟ್ ಆನ್ ಮತ್ತು ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಕುಳಿತಿರುವ ಮಗಳನ್ನು ನೋಡುವಾಗ ಆ ತಂದೆಯ ಮನಸಿನಲ್ಲಿ ಒಂದೇ ಪ್ರಾರ್ಥನೆಯಾಗಿರುತ್ತದೆ – “ದೇವರೇ ಮಗಳು ದಾರಿತಪ್ಪದಿರಲಿ… ಮಗಳ ನಡೆ ಒಂದು ಅವಗಡಕ್ಕೆ ಕಾರಣವಾಗದಿರಲಿ…..”

ಮಗಳನ್ನು ಕಾಣಲು ಬಂದ ವರನ ಮುಂದೆ ಮಗಳನ್ನು ಕರೆತಂದು ನಿಲ್ಲಿಸುವಾಗ ಆ ತಂದೆಯ ಮುಖದಲ್ಲಿ ಮುಗುಳ್ನಗುವಿದ್ದರೂ, ಆ ಮನಸಲ್ಲಿ ಒಂದು ನಡುಕ ಉಂಟಾಗುವುದು….. ತನ್ನ ಮುದ್ದು ಮಗಳನ್ನು ಅಪರಿಚಿತನೊಬ್ಬನ ಮನೆಗೆ ಕಳುಹಿಸಿಕೊಡುವುದನ್ನು ನೆನೆದು ಉಂಟಾದ ನಡುಕ….

ಮದುವೆ ನಿಶ್ಚಯವಾದರೆ ದಿನಗಳು ಬೇಗಬೇಗ ಉರುಳುತ್ತಿರುವಂತೆ ಅನಿಸುತ್ತದೆ ಆ ತಂದೆಗೆ…. ಮನೆಯಲ್ಲಿ ಒಂದು ಕಪ್ ಟೀಯನ್ನು ಕೂಡಾ ನೆಮ್ಮದಿಯಿಂದ ಕುಡಿಯಲು ಸಾಧ್ಯವಾಗದಷ್ಟು ಅಲ್ಲೋಲಕಲ್ಲೋಲವಾಗಿರುತ್ತದೆ ಆ ತಂದೆಯ ಮನಸು…..

ಮದುವೆ ದಿನದಂದು ಆ ಅಪರಿಚಿತನ ಕೈಗೆ ತನ್ನ ಮಗಳ ಕೈಯನ್ನು ಜೋಡಿಸಿ ಹಿಡಿಯುವಾಗ ಆ ತಂದೆಯ ತುಂಬಿದ ಕಣ್ಣುಗಳು ಮತ್ತು ದುಃಖ ತಡೆಯಲಾಗದೆ ನಡುಗುತ್ತಿರುವ ತುಟಿಗಳು ಕಾಣುವುದು…

ಮನೆಯ ಮೆಟ್ಟಿಲುಗಳನ್ನು ಇಳಿದು ಹೋಗುವಾಗ ತನ್ನ ಎದೆಯ ಮೇಲೆ ಮಲಗಿದ ಮುದ್ದು ಮಗಳ ಬಾಲ್ಯದ ನೆನಪುಗಳಾಗಿರುತ್ತದೆ ಆ ತಂದೆಯ ಮನಸಲ್ಲಿ…..

ಮದುವೆಯ ಕಾರ್ಯಕ್ರಮವೆಲ್ಲಾ ಮುಗಿದ ನಂತರದ ದಿನಗಳಲ್ಲಿ ಮದುವೆಯ ಖರ್ಚು ವೆಚ್ಚಗಳ ಲೆಕ್ಕಾಚಾರ ಮತ್ತು ಮದುವೆಗಾಗಿ ಮಾಡಿದ ಸಾಲವನ್ನು ತೀರಿಸಲು ಆ ತಂದೆಯು ಕಷ್ಟಪಡುವ ದಿನರಾತ್ರಿಗಳಾಗಿರುತ್ತದೆ….

ತಂದೆಯ ತ್ಯಾಗಮಯವಾದ ಜವಾಬ್ದಾರಿಕೆಗೆ ಬೆಲೆಕಟ್ಟಲಾಗದು…..

Leave a Reply