ಚಿಕ್ಕಮಗಳೂರು: ತನ್ನ ಹಿರಿಯ ಸಹೋದರಿ ಪ್ರೀತಿಸಿದವನ ಜೊತೆ ಹೊರಟುನಿಂತ ಪರಿಣಾಮ ಒಬ್ಬಂಟಿಯಾದ ಮತ್ತೋರ್ವ ಯುವತಿಗೆ ಅಣ್ಣನ ಸ್ಥಾನದಲ್ಲಿ ನಿಂತು ಅಭಯ ನೀಡುವ ಮೂಲಕ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಆದರ್ಶ ಮೆರೆದಿದ್ದಾರೆ.

ಪ್ರೇಮ ವಿವಾಹ ಪ್ರಕರಣವೊಂದು ಯುವತಿ ಮನೆಯವರ ವಿರೋಧದ ಕಾರಣಕ್ಕೆ ಎಸ್ಪಿ ಕಚೇರಿ ಮೆಟ್ಟಿಲೇರಿತ್ತು. ಒಂದೆಡೆ ಪ್ರಿಯಕರನೊಂದಿಗೆ ವಿವಾಹವಾಗಲು ಹೊರಟುನಿಂತ ಯುವತಿ, ಇತ್ತ ನನ್ನನ್ನು ತೊರೆದು ಹೋಗಬೇಡ ಎಂದು ಅಂಗಲಾಚುತ್ತಿರುವ ಆಕೆಯ ಸಹೊದರಿ. ಮತ್ತೊಂದೆಡೆ ಕಾನೂನು ಮೀರಿ ಯಾರ ಪರವಾಗಿಯೂ ತೀರ್ಮಾನ ತೆಗೆದುಕೊಳ್ಳಲಾಗದ ಪರಿಸ್ಥಿತಿ. ಇಂತಹ ಸಂದಿಗ್ಧತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎದುರಿಸಿದರು.

ಹೌದು, ಪ್ರೇಮ ವಿವಾಹಕ್ಕೆ ಮುಂದಾದ ಇಬ್ಬರೂ ಪ್ರಾಪ್ತ ವಯಸ್ಕರು. ಈ ಮದುವೆಯನ್ನು ಬಲವಂತವಾಗಿ ಮುರಿಯಲು ಕಾನೂನಿನಲ್ಲಿ ಅವಕಾಶವಿಲ್ಲ. ಇತ್ತ ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡು ಅಕ್ಕನ ಆಸರೆಯಲ್ಲೇ ಬೆಳೆದ ಸಹೋದರಿ ಅಕ್ಕ ನನ್ನಿಂದ ದೂರಾಗಬೇಡ. ನಾನು ಧರಿಸಿರುವ ಪಾದರಕ್ಷೆಯಿಂದ ಹಿಡಿದು ಹಣೆ ಬೊಟ್ಟಿನವರೆಗೆ ಎಲ್ಲವೂ ನೀನು ಕೊಡಿಸಿರುವೆ. ಈಗ ನೀ ದೂರಾದರೆ ನನ್ನ ವಿದ್ಯಾಭ್ಯಾಸದ ಗತಿಯೇನು ಎಂದು ಗೋಗರೆದರೂ ಅಕ್ಕ ಓಗೊಡಲಿಲ್ಲ. ಇಂತಹ ಕರುಳು ಕಿವುಚುವ ಪರಿಸ್ಥಿತಿಯನ್ನು ಕಂಡು ಮರುಗಿದ ಎಸ್ಪಿ ಅಣ್ಣಾಮಲೈ, ಅಂತಿಮವಾಗಿ ಸಹೋದರಿಯ ನೆರವಿಗೆ ನಿಂತರು.

ನಿನ್ನ ಅಕ್ಕ ಪ್ರೀತಿಸಿ ಮದುವೆಯಾದರೆಂಬ ಕಾರಣಕ್ಕೆ ನೀನು ಒಂಟಿಯಾದೆನೆಂದು ಹೆದರಬೇಡ. ನಿನ್ನ ವಿದ್ಯಾಭ್ಯಾಸ ಮುಗಿಯುವವರೆಗೆ ಸಂಪೂರ್ಣ ವೆಚ್ಚವನ್ನು ನಾನು ಭರಿಸುತ್ತೇನೆ. ನಂತರ ಕೆಲಸಕ್ಕೆ ಸೇರಿಸುವ ಜವಾಬ್ದಾರಿ ನನ್ನದು. ಆಮೇಲೆ ನಿನ್ನ ದಾರಿ ನೋಡಿಕೋ ಎಂದು ಹೇಳುತ್ತಿದ್ದಂತೆ ಅಲ್ಲಿ ಸೇರಿದ್ದ ಪೊಲೀಸ್ ಸಿಬ್ಬಂದಿ, ಹುಡುಗಿ ಕಡೆಯವರು ಹಾಗೂ ಪತ್ರಕರ್ತಕರ ಕಣ್ಣಲ್ಲೂ ನೀರಾಡಿತು. ಒಟ್ಟಾರೆಯಾಗಿ ಮಾನವೀಯತೆಯಿಂದ ತೆಗೆದುಕೊಂಡ ನಿರ್ಧಾರದಲ್ಲಿ ಕಾನೂನಿಗೂ ಮೀರಿದ ಸಾಂತ್ವನ ಸಿಗುತ್ತದೆ ಎನ್ನುವುದನ್ನು ಎಸ್ಪಿ ನಿರೂಪಿಸಿದರು. ಈ ಮೂಲಕ ಆದರ್ಶ ಅಧಿಕಾರಿ ಎನಿಸಿಕೊಂಡರು.

Leave a Reply