ಧ್ವನಿ:- ನಾನು ಮೂವತ್ತೈದರ ಯುವಕ. ವಿವಾಹ ಆಗಿ ಒಂದು ಮಗುವಿದೆ. ಶಿಪ್‍ನಲ್ಲಿ (ಹಡಗು) ನೌಕರಿ ನನಗೆ. ಹಡಗಿನಲ್ಲಿ ಪ್ರಪಂಚ ಸುತ್ತುತ್ತಾ ಇರುವವನು ನಾನು. ಎಂಟು ತಿಂಗಳು ಸಮುದ್ರಯಾನದಲ್ಲಿದ್ದರೆ ನಂತರ ಎರಡು ಮೂರು ತಿಂಗಳಿಗೆ ಊರಿಗೆ ಮರಳಿ ಕುಟುಂಬದ ಒಟ್ಟಿಗೆ ಕಾಲ ಕಳೆಯುತ್ತೇನೆ. ನನ್ನ ಬ್ಯಾಂಕ್ ಬ್ಯಾಲೆನ್ಸ್‍ನ ಎಲ್ಲಾ ವ್ಯವಹಾರವೂ ಪತ್ನಿಗೇ ಬಿಟ್ಟಿದ್ದೇನೆ. ಕೈ ತುಂಬಾ ದುಡಿದ ಹಣವನ್ನು ಜೋಪಾನ ಮಾಡುವ ಪತ್ನಿ ಇದ್ದಾಳೆಂಬ ವಿಶ್ವಾಸ ನನ್ನಲ್ಲಿ ಇತ್ತು. ಶಿಪ್‍ನಲ್ಲಿ ದುಡಿಯುವ ನಮ್ಮ ಬದುಕು ತುಂಬಾ ಕಠಿಣವಾದದ್ದು. ಬಿಸಿಲು, ಮಳೆ, ಬಿರುಗಾಳಿಯಲ್ಲಿ ಶ್ರಮಪಡುವುದು, ಯಾವುದೇ ಖುಶಿಯ ವಾತಾವರಣವೂ ಇಲ್ಲ. ಕೆಳಗೆ ಸಮುದ್ರದ ನೀಲಿ ಬಣ್ಣ ಮೇಲೆ ನೋಡಿದರೆ ಆಕಾಶ, ಇಷ್ಟು ಬಿಟ್ಟರೆ ನಮ್ಮ ಪಾಲಿಗೆ ಯಾವ ಸಂತೋಷವೂ ಇಲ್ಲ. ನನ್ನ ಪತ್ನಿ, ಮಕ್ಕಳು ನೆಮ್ಮದಿಯಲ್ಲಿ ಇರಬೇಕೆಂದು ಬಯಸುತ್ತಿದ್ದೆ. ನನಗೆ ಒಮ್ಮೆ ಅನಾರೋಗ್ಯ ಕಾಣಿಸಿತ್ತು. ವಾಂತಿ, ಜ್ವರ, ವೀಕ್ನೆಸ್‍ನಲ್ಲಿ ನಾನು ಬಳಲಿದೆ. ಪರೀಕ್ಷೆ ಮಾಡಿದಾಗ ನನ್ನ ಶ್ವಾಸಕೋಶದಲ್ಲಿ ನೀರು ತುಂಬಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಬೇಕೆಂದು ವೈದ್ಯರು ತಿಳಿಸಿದರು. ಆಗ ನನ್ನ ಶಿಪ್ ಯುರೋಪ್‍ಗೆ ಹತ್ತಿರ ಇದ್ದರಿಂದ ನನ್ನನ್ನು ಯುರೋಪ್‍ನ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಂದ ನನ್ನ ಕುಟುಂಬದವರಿಗೆ ನನ್ನ ಪರಿಸ್ಥಿತಿ ತಿಳಿಸಿದೆ. ಕೆಲವು ದಿವಸ ಚಿಕಿತ್ಸೆ ಪಡೆದು ಗುಣಮುಖವಾಗಿ ಊರಿಗೆ ಮರಳಿದೆ. ಬಹಳ ನಿತ್ರಾಣದಿಂದ ನಾನು ಸೊರಗಿ ಹೋಗಿದ್ದೆ. ದಪ್ಪಗಿದ್ದ ನಾನು ದೇಹ ತೂಕ ಇಳಿದು ಸಪೂರವಾಗಿದ್ದೆ. ಮೂರು ನಾಲ್ಕು ತಿಂಗಳ ವಿಶ್ರಾಂತಿ ಪಡೆದು ಹಿಂದಿರುಗುವಂತೆ ನನಗೆ ಕಂಪೆನಿ ತಿಳಿಸಿತ್ತು. ನಾನು ಊರಿಗೆ ಬಂದ ನಂತರ ನನ್ನ ದಾಂಪತ್ಯ ಜೀವನ ಮೊದಲಿನಂತೆ ಖುಶಿಯಾಗಿ ಮುಂದುವರಿಯಲಿಲ್ಲ. ನಾನು ಪೂರ್ತಿ ಗುಣಮುಖನಾಗದೇ ಮರಳಿದ್ದರಿಂದ ಮದ್ದು, ವಿಶ್ರಾಂತಿಯು ಅಗತ್ಯವಾಗಿತ್ತು. ಗಂಡನಾದವನನ್ನು ಈ ಸಮಯದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕಾದ ಬಾಳಸಂಗಾತಿ ನನ್ನನ್ನು ತಾಯಿಯೊಂದಿಗೆ ಬಿಟ್ಟು ಆಕೆಯ ತವರಿಗೆ ಹೋಗಿಬಿಟ್ಟಳು. ಕಾರಣ ನನ್ನ ದುಡಿಮೆಯ ಉಳಿತಾಯವನ್ನು ನಾನು ಊರಿಗೆ ಬಂದು ವಿಚಾರಿಸಿದಾಗ ಬ್ಯಾಲೆನ್ಸ್ ಶೂನ್ಯದಲ್ಲಿತ್ತು. ಲಕ್ಷಗಟ್ಟಲೇ ಇದ್ದ ದುಡ್ಡು ಏನಾಯಿತು? ಎಂಬ ಒಂದು ಪ್ರಶ್ನೆಗೆ ಆಕೆ ಕೋಪಗೊಂಡಿದ್ದಳು. ಅವಳಲ್ಲಿ ಉತ್ತರವೇ ಇಲ್ಲ. ನನ್ನ ಅನಾರೋಗ್ಯವನ್ನೂ ಗಂಭೀರವಾಗಿ ತಗೊಳ್ಳದೇ ಅವಳು ಪಲಾಯನ ಮಾಡಿದಳು. ನಾನು ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತೇನೆ. ಅದರಿಂದ ಹಣದ ವಿಷಯ ಹೋಗಲಿ, ಅದರ ಕುರಿತು ಪ್ರಶ್ನಿಸುವುದಿಲ್ಲ, ನೀನು ನನ್ನ ಬಳಿ ಮರಳಿ ಬಂದು ಬಿಡು, ನನಗೆ ನೀನೂ, ಮಗೂ ಬೇಕು, ನೀನಿಲ್ಲದೇ ನಾನು ಬದುಕಲಾರೆ ಎಂದು ಗೋಗರೆದರೂ ಕಲ್ಲು ಮನಸ್ಸಿನ ಆ ಹೆಣ್ಣು ನನಗೆ ನಿಮ್ಮಿಂದ ಬಿಡುಗಡೆ ಬೇಕೆಂದು ಸುದ್ದಿ ಕಳಿಸಿದ್ದಾಳೆ. ಈಗ ಹೇಳಿ ನಮ್ಮ ಮಹಿಳೆಯರಿಗೆ ಪತಿಯು ಗಟ್ಟಿಮುಟ್ಟಾಗಿ ದುಡಿಯುತ್ತಾ ಇದ್ದಾಗ ಗಂಡನ ಜೊತೆ ಬೇಕು. ಅವನಿಗೆ ಅನಾರೋಗ್ಯವಾದ್ರೆ ಗಂಡ ಬೇಡ. ನಾನು ಸೋತು ಹೋಗಿದ್ದೇನೆ. ಶೋಷಣೆ ಮಹಿಳೆಯರ ಮೇಲಾಗುತ್ತಿದೆ ಎಂದು ಪತ್ರಿಕೆ ತುಂಬಾ ಬರೆಯುತ್ತಿರುವ ಲೇಖಕಿಯರಿಗೆ ನನ್ನಂತಹ ಪುರುಷರ ಮೇಲಾಗುವ ಈ ಶೋಷಣೆಗೆ ಧ್ವನಿ ಎಲ್ಲಿದೆ?

ಸಾಂತ್ವನ: ಸಹೋದರಾ… ಕೈಯ ಐದು ಬೆರಳೂ ಒಂದೇ ತರಹ ಇರುವುದಿಲ್ಲ. ನಿಮ್ಮ ಪತ್ನಿಯ ವರ್ತನೆ ಕ್ಷಮಿಸುವಂತಹದ್ದಲ್ಲ. ಆಕೆ ನಿಮ್ಮನ್ನು ಈ ಪರಿಸ್ಥಿತಿಯಲ್ಲಿ ಬಿಟ್ಟು ತವರಿಗೆ ಹೋದದ್ದು ಮಾನ ವೀಯತೆಗೆ ವಿರುದ್ಧ. ಅದರ ಅರ್ಥ ಎಲ್ಲಾ ವಿವಾಹಿತೆಯರೂ ಇವರಾಗೇ ಇರುತ್ತಾರೆಂದು ತಿಳಿಯ ಬೇಕಾಗಿಲ್ಲ. ತನ್ನ ಪತಿಗಾಗಿ ಯಾವ ತ್ಯಾಗಕ್ಕೂ ಸಿದ್ಧರಾಗುವ ಹೆಂಡತಿ ಯರು ಇದ್ದಾರೆ. ಪ್ರವಾದಿ ವರ್ಯರ(ಸ) ಪ್ರಥಮ ಪತ್ನಿ ಹ. ಖತೀಜಾರವರು ಸಿರಿವಂತ ಮಹಿಳೆಯಾಗಿದ್ದು ತನ್ನ ಪತಿಯ ಕಷ್ಟದ ಸಮಯದಲ್ಲಿ ತಮ್ಮ ಎಲ್ಲಾ ಸಂಪತ್ತನ್ನು ಖರ್ಚು ಮಾಡಿದ್ದು ಮಾತ್ರವಲ್ಲ, ಅವರ ಮಾನಸಿಕ, ದೈಹಿಕ ಶಕ್ತಿಯಾಗಿ ಖತೀಜಾ ನೆರಳಾಗಿ ನಿಂತರು. ಪತಿಯು ದೈಹಿಕವಾಗಿ ಬಲಾಢ್ಯನಾಗಿರುವಾಗ ಜೊತೆಗಿದ್ದು ದುರ್ಬಲನಾದಾಗ ಅವರನ್ನು ತೊರೆದು ಹೋಗುವ ಪತ್ನಿಯು ಸ್ವಾರ್ಥಿಯಾಗಿರುತ್ತಾಳೆ. ನನ್ನ ಓರ್ವ ಆತ್ಮೀಯ ಮಹಿಳೆಯ ಕುರಿತು ತಿಳಿಸುತ್ತೇನೆ. ಅವರ ಪತಿಯು ವ್ಯಾಪಾರದಲ್ಲಿ ನಷ್ಟ ಅನುಭವಿಸಿ ದಿವಾಳಿಯಾದಾಗ ಈ ಮಹಿಳೆಯು ತನ್ನಲ್ಲಿದ್ದ ಇನ್ನೂರಕ್ಕೂ ಅಧಿಕ ಪವನಿನ ಬಂಗಾರವನ್ನು ಪತಿಯ ಕೈಯಲ್ಲಿಟ್ಟು “ನನಗೆ ನೀವೇ ಬಂಗಾರ, ನೀವು ನನ್ನ ಜೊತೆ ಇದ್ದರೆ ಸಾಕು, ಬಂಗಾರ ಒಂದು ಕೂಡಾ ನನಗೆ ಬೇಕಾಗಿಲ್ಲ ಎಂದು ನಿರಾಭರಣಳಾಗಿ ಬಾಳಿದರು. ಹಾಗೇ ಪತಿಯು ಶ್ರೀಮಂತಿಕೆಯ ತುತ್ತ ತುದಿಗೆ ಏರಿದಾಗ ಕೆಟ್ಟವರ ಸಹ ವಾಸ ದೋಷದಿಂದ ಅನೈತಿಕ ದಾರಿ ಹಿಡಿದು ಸಮಾಜದಲ್ಲಿ ದಾರಿತಪ್ಪಿದಾಗ ಈ ಮಹಿಳೆಯು ತನ್ನ ಪತಿಯನ್ನು ಬಿಟ್ಟು ಹೋಗಲಿಲ್ಲ. ಅವರ ಕುರಿತು ಯಾರ ಬಾಯಿಂದಲೂ ಕೀಳುಮಾತು ಕೇಳಲೂ ತಯಾರಿಲ್ಲದೇ ಪತಿಯೇ ನನ್ನ ಸರ್ವಸ್ವ, ಅವರು ಏನೇ ಆಗಿರಲಿ ನಾನು ಅವರ ನೆರಳಾಗಿ ಇರುತ್ತೇನೆ ಎಂದು ಆದರ್ಶ ಪತ್ನಿ ಯಾಗಿ ಬಾಳಿದರು. ನಿಮ್ಮ ಪತ್ನಿಯನ್ನು ನೀವು ಯಾವುದೇ ಕಷ್ಟ, ನೋವು ನೀಡದೇ ಪ್ರೀತಿ ಯಿಂದ ನೋಡಿಕೊಂಡರೂ ಆಕೆ ತವರಿಗೆ ಹೊರಟು ಹೋದದ್ದು ವಿಷಾದಕರ. ಕುಡಿದು ಬಂದು ಹೊಡೆದು, ಜಗಳ ಮಾಡುವ ಪತಿಯೊಂದಿಗೆ ಬಾಳಲು ಯಾವ ಹೆಣ್ಣೂ ತಯಾರಿರುವುದಿಲ್ಲ. ಆಗ ಅಂತಹ ದುಃಖಿತ, ಶೋಷಿತ ಹೆಣ್ಣಿಗೆ ತಾಯಿ ಮನೆಯೇ ಆಸರೆ ಆಗುತ್ತದೆ. ಇಲ್ಲಿ ಪರಿಸ್ಥಿತಿ ಬೇರೆ. ನಿಮ್ಮ ಸಂಪಾದನೆಯ ಹಣವನ್ನು ಅವಳು ಏನು ಮಾಡಿದಳು? ಎಂಬ ಪ್ರಶ್ನೆ ಹಾಗೆಯೇ ಉಳಿದು ಬಿಟ್ಟಿದೆ. ಅವಳಿಂದ ಅದು ಖರ್ಚಾಗಿದ್ದರೆ ನಿಮ್ಮೊಂದಿಗೆ ಸತ್ಯವನ್ನು ಹೇಳಿ ಕ್ಷಮೆಯಾಚಿಸಬಹುದಿತ್ತು. ನೀವು ಕ್ಷಮಿಸುವ ವಿಶಾಲತೆ ಉಳ್ಳವರೆಂದು ನಿಮ್ಮ ಪತ್ರದಿಂದ ತಿಳಿಯುತ್ತದೆ. ಮುಖ್ಯವಾಗಿ ವಿವಾಹಿತೆಯ ಹೆತ್ತವರು ಇಂತಹ ಬುದ್ಧಿಕೆಟ್ಟು ಬರುವ ಮಗಳ ಪರ ನಿಲ್ಲಲೇ ಬಾರದು. ಅವಳಿಗೆ ಆಶ್ರಯ ನೀಡಿದಾಗಲೇ ವಿವಾಹಿತೆಗೆ ತನ್ನ ತಪ್ಪಿನ ಆಳದ ಅರಿವು ಮೂಡುವುದಿಲ್ಲ. ತವರಿನವರು ಕುರುಡರಂತೆ ವರ್ತಿಸಿದರೆ ಮಗಳ ಬಾಳನ್ನು ಉದ್ಧಾರ ಮಾಡಿ ದಂತಾಗದು. ತಿಳುವಳಿಕೆ ಇಲ್ಲದೇ ದುಡುಕುವ ಮಗಳಿಗೆ ಅನು ಭವಸ್ಥರಾದ ಹಿರಿಯರು ದಾಂಪತ್ಯದ ಪವಿತ್ರ ಸಂಬಂಧದ ಬುದ್ಧಿಮಾತು ಹೇಳಬೇಕು. ಬಹುಶಃ ಹಲವು ಹೆತ್ತವರಿಗೆ ಈ ರೀತಿ ಬುದ್ಧಿ ಹೇಳು ವುದರಿಂದ ಮಗಳು ಬೇರೆ ಏನಾ ದರೂ ಅನಾಹುತ ಮಾಡಿಕೊಳ್ಳ ಬಹುದೆಂಬ ಭೀತಿಯೂ ಇರುತ್ತದೆ. ಇಲ್ಲಿ ಹೆತ್ತವರೂ ಅಸಹಾಯಕರಾಗಿ ಬಿಡುತ್ತಾರೆ. ನಿಮ್ಮ ಪತ್ನಿಗೆ ದೇವನೇ ಒಳ್ಳೆಯ ಬುದ್ಧಿ ನೀಡಲಿ, ಆಕೆ ಮರಳಿ ನಿಮ್ಮ ಬದುಕಲ್ಲಿ ಬಂದು ಸೇರಲಿ ಎಂದೇ ಪಾರ್ಥಿಸುತ್ತೇನೆ. ಕುಟುಂಬದ ಹಿರಿಯರು ಹಾಗೂ ಅನುಭವಸ್ಥರಿಂದ ಒಂದು ಪಂಚಾ ಯಿತಿ ಮಾಡಿಸಿ ಈ ಸಮಸ್ಯೆಯನ್ನು ಸರಿಯಾಗುವಂತೆ ಪ್ರಯತ್ನಿಸಿ.

Leave a Reply