ಅವಳು ಅನುಪ್ರಿಯಾ… 8 ವರ್ಷದ ಹುಡುಗಿ.. ತಮಿಳುನಾಡಿನ ವಿಲ್ಲುಪುರವೆಂಬ ಪಟ್ಟಣದ ಕೆಕೆ ರಸ್ತೆಯಲ್ಲಿರುವ ಕೆ.ಸಿ.ಷಣ್ಮುಗನಾಥನ್​ ಮತ್ತು ಲಲಿತಾ ದಂಪತಿಯ ಮಗಳು… ಚಿಟ್ಟುಹಲ್ಲಿನ, ಬೊಗಸೆ ಕಂಗಳ, ಕೃಷ್ಣ ಬಣ್ಣದ ಹುಡುಗಿ… ಎರಡನೇ ಕ್ಲಾಸು..

ಅವಳು ಎಲ್​ಕೆಜಿಯಲ್ಲಿದ್ದಾಗಲೇ ತನಗೊಂದು ಸೈಕಲ್​ ಬೇಕೆಂದು ಪುಟ್ಟಪುಟ್ಟ ಡಬ್ಬಗಳಲ್ಲಿ ಪೈಸೆ ಪೈಸೆ ಕೂಡಿಡತೊಡಗಿದ್ದಳು. ಕೂಲಿ ಕೆಲಸಕ್ಕೆ ಹೋಗುವ ಅಪ್ಪ ಪ್ರತಿ ದಿನ ಸಂಜೆ ಮನೆಗೆ ಬಂದಾಗ 1 ರೂ. 2 ರೂ. ಕೊಡತೊಡಗಿದ್ದರು.. ಮನೆಗೆ ಬರುವ ಮಾಮ, ಅಂಕಲ್, ಆಂಟಿಯರು ಕೊಡುತ್ತಿದ್ದ ದುಡ್ಡನ್ನೂ ಅದೇ ಹುಂಡಿಗೆ ಹಾಕುತ್ತಿದ್ದಳು… ಪ್ರತಿದಿನ ಆ ಡಬ್ಬಿಯನ್ನು ಅಲ್ಲಾಡಿಸಿ, ಸೈಕಲ್​ನ ಕನಸು ಕಾಣುತ್ತಿತ್ತು ಈ ಮುದ್ದು ಮಗು..

ಮೊದಲ ಡಬ್ಬ ತುಂಬಿತ್ತು.. ಮತ್ತೊಂದು ಡಬ್ಬ.. ಹೀಗೆ ಚೊಂಬು, ಹಂದಿ, ಮೊಲದಾಕಾರದ 5 ಬಣ್ಣಬಣ್ಣಗಳ ಆಟಿಕೆ ಡಬ್ಬಗಳು…

ಎಲ್​ಕೆಜಿ, ಯುಕೆಜಿ, ಒಂದನೇ ತರಗತಿ ಮುಗಿದು ಈಗ 2ನೇ ಕ್ಲಾಸು ತಲುಪಿದ್ದಳು ಹುಡುಗಿ… ಹುಂಡಿಗಳು ತುಂಬಿದವು…

ಕಳೆದ ವರ್ಷವೇ ಡಬ್ಬ ತುಂಬಿದಾಗ ಅಪ್ಪನ ಬಳಿ ಹೇಳಿದ್ದಳು.. ಸೈಕಲ್​ ತೆಗೆಸಿಕೊಡಪ್ಪಾ ಎಂದು.. ಆದರೆ ಅಪ್ಪನಿಗೆ ಮಗಳು ಸೈಕಲ್ಲೇರಿ ಮನೆ ಎದುರೇ ಇರುವ ರಸ್ತೆಗಳಲ್ಲಿ ಓಡಿದರೆ ಹೇಗೆಂಬ ಭಯ.. ಮುಂದಿನ ವರ್ಷ ಸ್ವಲ್ಪ ದೊಡ್ಡವಳಾಗುತ್ತೀಯಲ್ಲಾ, ಆಗ ತೆಗೆಸಿಕೊಡುತ್ತೇನೆ ಎಂದಿದ್ದ ಅಪ್ಪ…

ಅದೇ ಹೊತ್ತಿಗೆ ಕೇರಳದಲ್ಲಿ ಸುರಿದಿತ್ತು ನೆಲ ಮುಗಿಲು ಒಂದಾಗುವಂಥ ಮಳೆ… ನೆರೆ ನೀರು ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಕೇರಳಿಗರ ಬದುಕನ್ನು ಮುಳುಗಿಸಿತ್ತು…. ನೀರಲ್ಲಿ ಹರಿದುಬಂದಿದ್ದವು ಪುಟ್ಟ ಮಕ್ಕಳ ಚಪ್ಪಲಿ, ಶೂಗಳು, ಟೋಪಿಗಳು… ಆ ಚಪ್ಪಲಿಗಳಲ್ಲಿ ಮುದ್ದು ಮಕ್ಕಳ ಪುಟಾಣಿ ಪಾದದ ಬಿಸುಪು… ಅವೆಲ್ಲವನ್ನೂ ಟಿವಿಯಲ್ಲಿ ನೋಡುತ್ತಿದ್ದ ಅನುಪ್ರಿಯಾ ಮರುಗಿದ್ದಳು..

ಆ ಸಂಜೆ ಅಪ್ಪ ಮನೆಗೆ ಬಂದಾಗ ಹೇಳಿತ್ತು ಮಗು… ಅಪ್ಪಾ ನನಗೆ ಸೈಕಲ್​ ಬೇಡ, ಈ ದುಡ್ಡನ್ನು ಕೇರಳದ ಜನರಿಗೆ ಕೊಡೋಣ… ಮಗಳಿಗೆ ತಕ್ಕ ಅಪ್ಪ… ಓಕೆ ಎಂದು ಎಲ್ಲರೂ ಡಬ್ಬಗಳನ್ನು ಒಡೆದು ದುಡ್ಡು ಎಣಿಸತೊಡಗಿದರು…

ಎಣಿಸಿದಾಗ ಸಿಕ್ಕಿದ್ದು 8,846 ರೂ. ಲೆಕ್ಕ… ಅದಕ್ಕೆ 54 ರೂ. ಅಪ್ಪನೇ ಸೇರಿಸಿ 9 ಸಾವಿರ ರೂ.ವನ್ನು ತನ್ನ ಬ್ಯಾಂಕ್​ ಖಾತೆಗೆ ಹಾಕಿ ಬಂದರು.. ಅದೇ ದಿನ ಅಂದರೆ ಕಳೆದ ಶನಿವಾರ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಡಿಡಿ ಕಳುಹಿಸಿದರು ಶಿವ ಷಣ್ಮುಗನಾಥನ್..

ಈ ಸುದ್ದಿ ತಿಳಿದ ಪರಿಚಯಸ್ಥ ಯತಿರಾಜನ್​ ಶ್ರೀನಿವಾಸನ್​ ಮಗುವಿನ ಫೊಟೋ ಸಮೇತ ಟ್ವೀಟ್​ ಮಾಡಿದ್ದರು… ಆ ಟ್ವೀಟ್​ ಹೀರೋ ಸೈಕಲ್ಸ್​ ಕಂಪನಿಯ ಗಮನ ಸೆಳೆದಿತ್ತು… ಅವರು ಟ್ವಿಟರ್​ನಲ್ಲೇ ಮರುಟ್ವೀಟ್​ ಮಾಡಿದ್ದರು- ‘ಪ್ರಿಯ ಅನುಪ್ರಿಯಾ, ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ ನಿನ್ನ ಮಾನವೀತೆಯನ್ನು ಅಭಿನಂದಿಸುತ್ತೇವೆ… ಜೊತೆಗೆ ನಿನಗೆ ನಮ್ಮ ಕಡೆಯಿಂದ ಹೊಸತೊಂದು ಸೈಕಲನ್ನು ಗಿಫ್ಟ್​ ಕೊಡುತ್ತಿದ್ದೇವೆ… ದಯವಿಟ್ಟು ನಿನ್ನ ವಿಳಾಸವನ್ನು ನಮ್ಮ ಕಸ್ಟಮರ್​ ಕೇರ್​ ಇಮೇಲ್​ ಐಡಿಗೆ ಕಳಿಸು‘ ಎಂದಿದ್ದರು…

ಮಾರನೇ ದಿನವೇ ವಿಲ್ಲುಪುರಂನ ಆನಂದ ಸೈಕಲ್​ ಸ್ಟೋರ್​ಗೆ ಅಪ್ಪ ಅಮ್ಮನ ಜೊತೆ ತೆರಳಿ ಸೈಕಲ್​ ತಂದಿದ್ದಳು ಅನುಪ್ರಿಯಾ…

ಜೊತೆಗೆ ಹೀರೋ ಸೈಕಲ್ಸ್​ ಎಂಡಿ ಪಂಕಜ್​ ಮಂಜಾಲ್​ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅನುಪ್ರಿಯಾಗೆ ಪ್ರತಿ ವರ್ಷ ಒಂದೊಂದು ಬೈಕ್​ ಉಡುಗೊರೆ ಕೊಡುವುದಾಗಿ ಘೋಷಿಸಿದರು… ಅಲ್ಲದೆ ಈಗ ನೀಡಿದ 9 ಸಾವಿರ ರೂ.ವನ್ನೂ ಮರಳಿಸುವುದಾಗಿ ಪಂಕಜ್​ ಘೋಷಿಸಿದರು.. ಆದರೆ ಆ ದುಡ್ಡನ್ನು ಸ್ವೀಕರಿಸಲು ಅನುಪ್ರಿಯಾ ತಂದೆ ಒಪ್ಪಲಿಲ್ಲ…

ಇನ್ನೊಂದು ಆಗಸ್ಟ್​ 14ರಂದು ನಡೆದ ಘಟನೆ…

ಅವರು ಕೊಚ್ಚಿಯ ಸಿದ್ದೀಕ್​ ಮಲಶ್ಶೇರಿ-ಫಾತಿಮಾ ದಂಪತಿಯ ಹರೂನ್​ ಮತ್ತು ದಿಯಾ ಎಂಬಿಬ್ಬರು ಮಕ್ಕಳು… 2 ವರ್ಷಗಳಿಂದ ಒಂದು ಸ್ಟಡಿ ಟೇಬಲ್​ ಕೊಳ್ಳಲೆಂದು ಹಣ ಕೂಡಿಡುತ್ತ ಬಂದಿದ್ದರು.. ಆ ದುಡ್ಡನ್ನು ಯಾರು ಕೇಳಿದರೂ ಕೊಡುತ್ತಲೇ ಇರಲಿಲ್ಲ.. ಎಷ್ಟೆಂದರೆ ಒಮ್ಮೊಮ್ಮೆ ಮೀನು ಕೊಳ್ಳಲು ದುಡ್ಡು ಕಡಿಮೆಯಾದಾಗ ಚಿಲ್ಲರೆ ಕೊಡು ಮಗಾ ಎಂದರೂ ಅವರು ಕೊಡುತ್ತಿರಲಿಲ್ಲ..

ಆದರೆ ಕೇರಳದ ನೆರೆ ಕಂಡು ಆ ಮಕ್ಕಳೇ ಖುದ್ದಾಗಿ ಅಮ್ಮನಲ್ಲಿ ಆ ಎಲ್ಲಾ ದುಡ್ಡು ಕೊಟ್ಟಿದ್ರು… ಆ 2210 ರೂಪಾಯಿಯನ್ನೂ ಸಿದ್ದೀಕ್​ ಸಿಎಂ ಪರಿಹಾರ ನಿಧಿಗೆ ಕಳಿಸಿಕೊಟ್ಟಿದ್ದರು..

ಸಾಮಾಜಿಕ ಮಾಧ್ಯಮಗಳಲ್ಲಿ ನೆರೆಯ ಬಗ್ಗೆ ಏನೇನೋ ಹುಚ್ಚಾಟದ ಕಮೆಂಟ್​ ನೋಡಿದರೆ, ನೆರೆಯಂತೆ ಅವರವರ ಮನದ ಕೊಳೆಯೇ ಕಾಣಿಸುತ್ತಿದೆ… ಅದಕ್ಕೇ ಕವಿಯೊಬ್ಬ ಹೀಗೆ ಕವಿತೆ ಬರೆದ…

ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ… ಗುಣವಿರುವ ಮನುಜರೆಲ್ಲ ಮಕ್ಕಳಂತೆ… ಮಕ್ಕಳಿಗು ದೇವರಿಗೂ ಬೇಧವಿಲ್ಲ ಇಬ್ಬರ ಮನದಲು ಕಪಟವಿಲ್ಲ.

ಲೇಖಕರು : ಚಂದ್ರಶೇಖರ್ ಮಂಡೆಕೋಲು

Leave a Reply