ಪಟ್ಟಣದ ಯಾವ ಮೂಲೆಗೆ ಹೋದರೂ ಒಂದಲ್ಲ ಒಂದು ರೀತಿಯ ಭಿಕ್ಷುಕರು ಇದ್ದೇ ಇರುತ್ತಾರೆ. ಅದು ಮಕ್ಕಳಿರಬಹುದು, ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಹತ್ತಾರು ಮೈಲಿ ನಡೆಯುವ ಮಹಿಳೆಯರು ಇರಬಹುದು‌. ಇವರೆಲ್ಲರೂ ಹೇಗೆ ಭಿಕ್ಷುಕರಾದರು? ಇವರಿಗೆ ಅಪ್ಪ ಅಮ್ಮ ಅಂತ ಯಾರು ಇಲ್ವೇ? ಇವರ ಬದುಕು ಹೀಗೆಯೇ ಸಾಗುತ್ತದೆಯೇ? ಅಲ್ಲ ಇವರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆಯೆ? ಇದು ಯಾವುದರ ಬಗ್ಗೆ ನಾವು ಆಲೋಚಿಸುವುದಿಲ್ಲ. ಅವರನ್ನು ಕಂಡರೆ ಚಿಲ್ಲರೆ ಹಣವನ್ನು ನೀಡಿ ಕಳುಹಿಸುತ್ತೇವೆ.

ಆದರೆ ಭಯಾನಕ ವಾಸ್ತವ ಬೇರೆಯೇ ಇದೆ. ನೀವು ನಂಬುತ್ತೀರಾ? ಹೌದು ಭಿಕ್ಷಟನೆ ಎಂಬ ಮಹಾಜಾಲವೇ ಇದೆ‌. ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಕ್ಕಳ ಅಪಹರಣದ ಬಗ್ಗೆ ವದಂತಿಗಳು ಹಬ್ಬಿತ್ತು. ಆದರೆ ಅಂದಿನ ಪೋಲಿಸ್ ಕಮಿಷನರ್ ಚಂದ್ರೆಶೇಕರ್ ಅವರು ಅದನ್ನು ತಳ್ಳಿ ಹಾಕಿದ್ದರು ಮತ್ತು ‌ವದಂತಿ ಎಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ಇದು ಅಲ್ಲಿಗೆ ನಿಲ್ಲುವುದಿಲ್ಲ! ಅದಕ್ಕೆ ಬಲವಾದ ಕಾರಣವೂ ಇದೆ. ಕಳೆದ ವರ್ಷ ಕೇರಳದಲ್ಲಿ ಒಂದೇ ತಿಂಗಳಲ್ಲಿ 88 ಮಕ್ಕಳು ಕಾಣೆಯಾಗಿದ್ದರು. ಇದರ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ 2017ರ ಅಗಸ್ಟ್ ತಿಂಗಳಲ್ಲಿ ವರದಿಯನ್ನು ಪ್ರಕಟಗೊಳಿಸಿತ್ತು.

ಹಾಗಾದರೆ ಕಾಣೆಯಾದವರು ಎಲ್ಲಿಗೆ ಹೋದ್ರು? ಯಾರು ಕದ್ದರು? ಇದರ ಬಗ್ಗೆ ಮಾಹಿತಿ ಇಲ್ಲ. ಇತ್ತೀಚೆಗೆ ಕೇರಳದ ಕಾಸರಗೋಡಿನಲ್ಲೂ ಅಂಥದ್ದೆ ಸುದ್ದಿ ಹರಡಿದೆ. ಅದನ್ನು ಅಲ್ಲಗೆಳೆಯುವಂತಿಲ್ಲ. ಸಾಮಾಜಿಕ ಮಾಧ್ಯಮದ ಮೂಲಕ ನಾವು ಹಲವಾರು ಚಿತ್ರಗಳನ್ನು ಕಂಡಿರುತ್ತೇವೆ. ಭಿಕ್ಷುಕಿ ಮಹಿಳೆಯೊಬ್ಬಳ ಶ್ರೀಮಂತರ ಮನೆತನದ ಮಗುವನ್ನು ಎತ್ತಿಕೊಂಡಿದ್ದು. ನಾವು ಎಚ್ಚೆತ್ತುಕೊಳ್ಳುವ ದಿನ ಬಂದಿದೆ. ಹೌದು ಇತ್ತಿಚೆಗೆ ಮಕ್ಕಳನ್ನು ಅಪಹರಣ ನಡೆಸುವ ಜಾಲವೊಂದು ಸಂಚರಿಸುತ್ತಿದೆ. ಕಳೆದ ಭಾನುವಾರ ಬೆಂಗಳೂರಿನ ಮಾಗಡಿ ರಸ್ತೆಯ ಬಳಿ ಆಟವಾಡುತ್ತಿದ್ದ ಬಾಲಕನೊಬ್ಬನನ್ನು ಅಪಹರಿಸಲೆತ್ನಿಸಿದ ಘಟನೆ ನಡೆದಿದೆ‌. ಇದೇ ವಾರದಲ್ಲಿ ಕೇರಳದಲ್ಲಿ ಮಕ್ಕಳನ್ನು ಅಪಹರಿಸಲು ಮುಂದಾದ ಇಬ್ಬರು ಮಹಿಳೆಯರನ್ನು ಸಾರ್ವಜನಿಕರು ಹಿಡಿದಿದ್ದಾರೆ.‌ ಇಂತಹ ಹತ್ತಾರು ಪ್ರಕರಣಗಳು ಪ್ರತಿರಾಜ್ಯಗಳಲ್ಲೂ ನಡೆಯುತ್ತಿದೆ.

ಆಟವಾಡುವ ಮಕ್ಕಳ ಕಾಣೆ, ಶಾಲೆಗೆ ಹೋದ ಮಕ್ಕಳ ಕಾಣೆ, ಸಾಮಾನು ತರಲೆಂದು ಅಂಗಡಿಗೆ ಹೋದ ಮಗು ಕಾಣೆ ಹೀಗೆ ಹಲವಾರು ರೀತಿಯಲ್ಲಿ ಕಾಣೆಯಾದ ಪ್ರಕರಣಗಳು ನಡೆದಿದೆ.

ಭಾರತದಲ್ಲಿ ಪ್ರತಿವರ್ಷ ಅಪಹರಣಕ್ಕೆ ಒಳಗಾದ ಮಕ್ಕಳ ಸಂಖ್ಯೆ 1 ಲಕ್ಷದ ಮೂವತ್ತೈದು ಸಾವಿರದವರೆಗೆ ದಾಟಿದೆ. ಭಾರತದಲ್ಲಿ ಪ್ರತಿ ದಿನ 180 ಮಕ್ಕಳು ಕಾಣೆಯಾಗುತ್ತಾರೆ ಎಂದು ಮಕ್ಕಳ ಹಕ್ಕುಗಳು ಮತ್ತು ನೀವು (ಸಿಆರ್‌ವೈ)ಎಂಬ ಸಂಸ್ಥೆ ವರದಿ ಮಾಡಿತ್ತು. ಕಾಣೆಯಾದ ಇವರು ಯಾರು ಐಷರಾಮಿ ಜೀವನ ನಡೆಸುತ್ತಿಲ್ಲ. ಹೆಣ್ಣು ಮಕ್ಕಳಾದರೆ ಪ್ರಾಯಕ್ಕೆ ಕಾಲಿಡುವ ಮುನ್ನವೆ ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಗಂಡು ಮಕ್ಕಳಾದರೆ ದೈಹಿಕ ಹಿಂಸೆ ನೀಡಿ ಕೈಯಲ್ಲಿ ತಟ್ಟೆ ಕೊಟ್ಟು ಭಿಕ್ಷೆ ಬೇಡಲು ಕಳುಹಿಸಿಕೊಡುತ್ತಾರೆ. ಕೆಲವೊಮ್ಮೆ ಅವರ ಕೈಕಾಲುಗಳನ್ನು ಅಂಗ ವಿಕಲಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಸ್ಲಮ್ ಡಾಗ್ ಮಿಲೇನಿಯರ್ ಎಂಬ ಸಿನಿಮಾ ಕೂಡ ಬಂದಿತ್ತು. ಅದರಲ್ಲೂ ಈ ಬಗ್ಗೆ ಎಚ್ಚರಿಕೆ ಕೊಡಲಾಗಿತ್ತು.

ನಮ್ಮ ಸುತ್ತಲು ಕಾಣ ಸಿಗುವ ಭಿಕ್ಷುಕರು ಯಾರು ಹುಟ್ಟು ಭಿಕ್ಷುಕರಾಗಿರುವುದಿಲ್ಲ. ಬದಲಿಗೆ ಒಂದು ಭಯಾನಕ ತಂಡವೊಂದು ಇದನ್ನು ಮುನ್ನಡೆಸುತ್ತಿದೆ.‌ ಅಮಲು ಪದಾರ್ಥಗಳನ್ನು ನೀಡಿ ಕಳ್ಳತನವನ್ನೂ ಮಾಡಿಸುತ್ತದೆ ಎಂದು ಹೇಳಲಾಗುತ್ತದೆ.

ಅಂಥ ಮಕ್ಕಳಲ್ಲಿ ನಮ್ಮ ಮನೆಯ ಮಕ್ಕಳೂ‌ ಇರಬಹುದು. ಒಂದು ಊರಿನಿಂದ ಮಕ್ಕಳನ್ನು ಕದ್ದು ಇನ್ನೊಂದು ಊರಿನಲ್ಲಿ ಭಿಕ್ಷೆ ಬೇಡಿಸಿದರೆ ಯಾವ ಹೆತ್ತವರಿಗೆ ತಾನೇ ತಿಳಿಯಲು ಸಾಧ್ಯ? ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ ಒಂದು ಹಂತಕ್ಕೆ ತಲುಪಿದಾಗ ಈ ರೀತಿ ಕಾಣೆಯಾಗುತ್ತಾರೆ ಎಂದರೆ ಯಾವ ಹೆತ್ತವರು ಸುಮ್ಮನಿರುತ್ತಾರೆ? ಸಾಧ್ಯವಿಲ್ಲ ತಾನೇ? ಹಾಗಾದರೆ ನಮ್ಮ ಮಕ್ಕಳನ್ನು ಬೀದಿಯಲ್ಲಿ ಒಂಟಿಯಾಗಿ ಆಡಲು ಬಿಡುವುದನ್ನು ನಿಲ್ಲಿಸಬೇಕು. ಯಾಕೆಂದರೆ ಯಾವ ಕ್ಷಣದಲ್ಲಿ ಬೇಕಾದರೂ ಅವರ ಅಪಹರಣ ನಡೆಯಬಹುದು. ನಾವು ಎಚ್ಚೆತ್ತುಕೊಂಡಿಲ್ಲ ಎಂದರೆ ಮಕ್ಕಳು ಕೈ ತಪ್ಪಿ ಹೋಗೋದು ಮಾತ್ರ ಖಚಿತ!!

Leave a Reply