ನವದೆಹಲಿ: ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಎರಡು ದಿನದ ಒಳಗೆ ಬೆಲೊನಿಯಾ ಪ್ರದೇಶದಲ್ಲಿದ್ದ ಲೆನಿನ್ ಪ್ರತಿಮೆಯನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೈದಿದ್ದು ನಂತರ ಅದರ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಲೆನಿನ್ ಪ್ರತಿಮೆಯನ್ನು ಕೆಡವಿದ್ದಕ್ಕಾಗಿ ಬಿಜೆಪಿ ವಿರುದ್ಧ ಇತರ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ಹಿಂದಿನ ಮುಖ್ಯಮಂತ್ರಿ ಮಣಿಕ್ ಸರ್ಕಾರ ರಾಜೀನಾಮೆ ನೀಡಿ ಬಿಜೆಪಿ ಅಧಿಕಾರಕ್ಕೇರಿದ ಹೊತ್ತಲ್ಲಿ ಬೆಲೊನಿಯಾ ಕಾಲೇಜು ವೃತ್ತದಲ್ಲಿದ್ದ ಕಮ್ಯುನಿಸ್ಟ್‌ ನಾಯಕ ಲೆನಿನ್‌ ಪ್ರತಿಮೆಯನ್ನು ಬುಲ್ಡೊಝರ್‌ ಮುಖಾಂತರ ತೆರವುಗೊಳಿಸಿತ್ತು. ಈ ಘಟನೆಯ ಕುರಿತು ಮಾತಾಡಿದ ಬಿಜೆಪಿ ನಾಯಕ ರಾಮ್ ಮಾಧವ್, ಲೆನಿನ್ ಪ್ರತಿಮೆ ಧ್ವಂಸ ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.

ತ್ರಿಪುರಾದಲ್ಲಿ ಯಾವುದೇ ಪ್ರತಿಮೆಯನ್ನು ಹಾನಿಗೊಳಿಸಿಲ್ಲ. ಇದೊಂದು ತಪ್ಪು ಮಾಹಿತಿ. ಕೆಲವು ಜನರು ಖಾಸಗಿ ಸ್ಥಳವೊಂದರಲ್ಲಿ ಆ ಪ್ರತಿಮೆಯನ್ನು ಸ್ಥಾಪಿಸಿ ಆಮೇಲೆ ಅದನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ, ಅದು ಧ್ವಂಸಗೊಳಿಸಿದ್ದಲ್ಲ ಎಂದು ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

Leave a Reply