ನವದೆಹಲಿ: ಸಿಜೆಐ ರಂಜನ್ ಗೊಗೊಯ್ ಮೇಲಿನ ಲೈಂಗಿಕ ಕಿರುಕುಳ ಆರೋಪ ಸಂಪೂರ್ಣ ನಿರಾಧಾರವೆಂದು ಸುಪ್ರೀಂಕೋರ್ಟ್ ಆಂತರಿಕ ತನಿಖಾ ಸಮಿತಿ ಘೋಷಿಸಿದೆ. ಏತನ್ಮಧ್ಯೆ ತೇಜೋವಧೆ ಪಿತೂರಿಯಲ್ಲಿ ಕೆಲ ಹಿರಿಯ ವಕೀಲರ ಕೈವಾಡವಿದೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದ್ದು ಸಿಬಿಐ ತನಿಖೆಗೆ ಒತ್ತಾಯಿಸಲಾಗಿದೆ. ಸುಪ್ರೀಂಕೋರ್ಟ್ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ರವಾನಿಸಿದ್ದ ದೂರಿನ ಬಗ್ಗೆ ತನಿಖೆ ನಡೆಸಲು ನ್ಯಾ. ಬೊಭ್ಡೆ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿತ್ತು. ನ್ಯಾಯಮೂರ್ತಿಗಳಾದ ಇಂದೂ ಮಲ್ಹೋತ್ರ ಮತ್ತು ಇಂದಿರಾ ಬ್ಯಾನರ್ಜಿ ಇನ್ನಿಬ್ಬರು ಸದಸ್ಯರಾಗಿದ್ದರು. ಫಿರ್ಯಾದುದಾರ ಮಹಿಳೆ ಮೂರು ದಿನ ವಿಚಾರಣೆಗೆ ಹಾಜರಾಗಿ ನಂತರ ತಮಗೆ ಈ ತನಿಖೆಯಿಂದ ನ್ಯಾಯ ಸಿಗುವುದಿಲ್ಲವೆಂದು ಹೇಳಿ ಹಿಂದಕ್ಕೆ ಸರಿದರು. ನ್ಯಾ. ಗೊಗೊಯ್ ಕಳೆದ ಬುಧವಾರ ಸಮಿತಿ ಮುಂದೆ ಹಾಜರಾಗಿದ್ದರು. ಸಿಜೆಐವಿರುದ್ಧ ಆರೋಪದಲ್ಲಿ ಯಾವುದೇ ಹುರುಳಿಲ್ಲವೆಂದು ಸಮಿತಿ ಇದೀಗ ಘೋಷಿಸಿದ್ದು ವರದಿಯನ್ನು ಬಹಿರಂಗ ಮಾಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದೆ.

ಈ ನಡುವೆ ವಕೀಲ ಎಂ.ಎಲ್.ಶರ್ಮಾ ಸಲ್ಲಿಸಿರುವ ಪಿಐಎಲ್ ಅರ್ಜಿಯ ವಿಚಾರಣೆಗೆ ಸೂಕ್ತ ದಿನಾಂಕ ನಿಗದಿಪಡಿಸುವುದಾಗಿ ನ್ಯಾ. ಬೊಭ್ಡೆಯವರ ನೇತೃತ್ವದ ಪೀಠ ಪ್ರಕಟಿಸಿದೆ. ಈಗಾಗಲೇ ಈ ಸಂಬಂಧ ಮತ್ತೊಬ್ಬ ವಕೀಲ ಉತ್ಸವ್ ಸಿಂಗ್ ಬೈನ್ಸ್ ಸಲ್ಲಿಸಿರುವ ದೂರಿನ ವಿಚಾರಣೆ ನಡೆಸುತ್ತಿರುವ ಪೀಠದ ಮುಂದೆಯೇ ತಮ್ಮ ಅರ್ಜಿಯನ್ನೂ ಮಂಡಿಸಬೇಕೆಂದು ಶರ್ಮಾ ಕೋರಿದ್ದಾರೆ,
ಶರ್ಮಾ ಅರ್ಜಿಯಲ್ಲಿ ವಕೀಲ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಹಾಗೂ ಅವರ ತಂದೆ ಮಾಜಿ ಕೇಂದ್ರ ಕಾನೂನು ಸಚಿವ ಶಾಂತಿ ಭೂಷಣ್,ಕಾಮಿನಿ ಜೈಸ್ವಾಲ, ವಿನೋದ್ ಗ್ರೋವರ್, ಇಂದಿರಾ ಜೈಸಿಂಗ್, ನೀನಾಗುಪ್ತ ಬಾಸಿನ್, ದುಶ್ಯಂತ್ ದವೆಯವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಈ ಎಲ್ಲ ವಕೀಲರು ಹಾಗೂ ಅವರು ನಡೆಸುವ ಎನ್‌ಜಿಓಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಲಾಗಿದೆ.

Leave a Reply