Image credit : PTC News

ಹರ್ಯಾಣ: ಚರಂಡಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಎಸೆದು ಬಿದ್ದಿದ್ದ ಮಗುವನ್ನು ಬೀದಿ ನಾಯಿಗಳ ಗುಂಪು ಹೊರಗೆಳೆದು ಬೊಗಳುವ ಮೂಲಕ ದಾರಿ ಹೋಕರ ಗಮನ ಸೆಳೆದು ಆ ಪುಟ್ಟ ಮಗುವನ್ನು ರಕ್ಷಿಸಿದ ಅಪರೂಪದ ಘಟನೆ ನಡೆದಿದೆ.

ನವಜಾತ ಶಿಶುವನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸುತ್ತಿ ಮಹಿಳೆಯೋರ್ವಳು ಹರ್ಯಾಣದ ಕೈಥಾಲ್ ಪಟ್ಟಣ ಸಮೀಪದ ಚರಂಡಿಗೆ ಎಸೆದಿದ್ದಳು. ಇದನ್ನು ಗಮನಿಸಿದ ಬೀದಿನಾಯಿಗಳು ಮಗುವನ್ನು ಮೇಲಕ್ಕೆ ತಂದು, ಪ್ಲಾಸ್ಟಿಕ್‌ಗಳನ್ನು ಕಚ್ಚಿ ಹರಿದಿದ್ದವು. ಬಳಿಕ ಜನರ ಗಮನ ಸೆಳೆಯಲು ಬೊಗಳಲು ಆರಂಭಿಸಿದ್ದವು.

ವಿದ್ಯಮಾನ ಗಮನಿಸಿದ ದಾರಿಹೋಕ ಜನರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಘಟನೆ ಸಮೀಪದ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿವಿ ಸಂಗ್ರಹ ದೃಶ್ಯದಲ್ಲಿ, ಮಹಿಳೆಯೊಬ್ಬಳು ಮಗುವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಚರಂಡಿಗೆ ಎಸೆದಿದ್ದು, ಬಳಿಕ ನಾಯಿಗಳು ಮಗುವನ್ನು ಚರಂಡಿಯಿಂದ ಮೇಲಕ್ಕೆ ತಂದಿದ್ದು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಹೆಣ್ಣು ಮಗುವಿನ ಸುಮಾರು 1 ಕೆಜಿ ತೂಕದಷ್ಟಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಹೆಣ್ಣು ಮಗುವನ್ನು ಚರಂಡಿಗೆ ಎಸೆದ ಅಪರಿಚಿತ ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Leave a Reply