ಸೆ.10 ವಿಶ್ವ ಆತ್ಮಹತ್ಯೆ ತಡೆ ದಿನ. ಒಂದು ಆತ್ಮಹತ್ಯೆ ಇಡೀ ಕುಟುಂಬವನ್ನು ಸ್ವಯಂ ಕಗ್ಗೊಲೆ ಮಾಡಿದಂತೆ. ಆತ್ಮಹತ್ಯೆ ಮಹಾ ಪಾಪ ಎಂದು ಎಲ್ಲಾ ಧರ್ಮಗಳಲ್ಲಿ ಭೋದಿಸಲಾಗಿದೆ. ಜೀವನದ ಸುತ್ತ ಹಲವು ಸಮಸ್ಯೆಗಳು ಹಲವು ಬಾರಿ ಪುನರಾವರ್ತಿಸುತ್ತದೆ. ಶ್ರೀಮಂತರಿಂದ ಹಿಡಿದು ಸಾಮಾನ್ಯ ಜನರಿಗೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಅದನ್ನು ಎದುರಿಸುವುದೇ ಜೀವನ. ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಬದಲಾಗಿ ಹಲವು ಸಮಸ್ಯೆಗಳು ಅಂದರೆ ಮಾನಸಿಕ, ಸಾಮಾಜಿಕ, ಆರ್ಥಿಕ, ಕೌಟುಂಬಿಕ ಸಮಸ್ಯೆಗಳು ಇನ್ನೂ ಹೆಚ್ಚಾಗುತ್ತದೆ. ಇತ್ತೀಚೆಗೆ ​​ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಇತ್ತೀಚಿನ ಸಾವಿನ ಪ್ರಕರಣದಿಂದಾಗಿ ಸದ್ಯ ದೇಶದಲ್ಲಿ ಆತ್ಮಹತ್ಯೆ ತಡೆ, ಅದರ ಕುರಿತು ಜಾಗೃತಿ ಬಗ್ಗೆ ದೊಡ್ಡ ಚರ್ಚೆ ಎದ್ದಿದೆ.

ಆದರೆ ಆತ್ಮಹತ್ಯೆ ದೇಶದಲ್ಲಿ ಇದೇ ಮೊದಲ ಬಾರಿ ನಡೆದದ್ದೇ. ದೇಶದಲ್ಲಿ ಸಾಲದ ಕಾರಣದಿಂದ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಲಿಲ್ಲವೇ? ಒತ್ತಡ, ಪರೀಕ್ಷೆ ಮುಂತಾದ ಕಾರಣದಿಂದ ಅದೆಷ್ಟೋ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಲ್ಲವೇ? ಕೊರೋನೋತ್ತರ ಬದುಕಿನಿಂದ ಆತ್ಮಹತ್ಯೆ ಮಾಡಿದವರೆಷ್ಟು? ಯಾಕೆ ಇವು ರಾಷ್ಟ್ರೀಯ ಚರ್ಚೆಯ ವಿಷಯವಾಗುವುದಿಲ್ಲ. ಯಾಕೆ ಅವು ಬ್ರೇಕಿಂಗ್ ನ್ಯೂಸ್ ಗಳಲ್ಲಿ ವಿಷಯವಾಗುವುದಿಲ್ಲ. ಯಾಕೆ ಚರ್ಚೆ ವಿಮರ್ಶೆಗಳು ನಡೆಯುವುದಿಲ್ಲ?

ಅಂಕಿ ಅಂಶಗಳ ಪ್ರಕಾರ, 2019 ರಲ್ಲಿ ಕರ್ನಾಟಕದಲ್ಲಿ 1432 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲ/ಇತರ ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡವರು 566, ವೈವಾಹಿಕ ಸಮಸ್ಯೆಗಳಿಂದ ಸಾವಿಗೆ ಶರಣಾದವರು 300 ಮಂದಿ. 2019ರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರು, ಮಹಾರಾಷ್ಟ್ರದಲ್ಲಿ 18916, ತಮಿಳುನಾಡು 13493, ಪಶ್ಚಿಮ ಬಂಗಾಳ 12665, ಮಧ್ಯಪ್ರದೇಶ 12457, ಕರ್ನಾಟಕ 11288, ಕೇರಳ 8556. ಇಷ್ಟೊಂದು ದೊಡ್ಡ ಸಂಖ್ಯೆ ಕಳೆದ ವರ್ಷದಲ್ಲೇ ಆತ್ಮಹತ್ಯೆಗೆ ಶರಣಾಗಿರುವುದು ಕಳವಳಕಾರಿಯಾಗಿದೆ.

ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ಸೂಸೈಡ್‌ ಪ್ರಿವೆನ್ಷನ್‌ (ಐಎಎಸ್‌ಪಿ) ಸಂಸ್ಥೆಯು 2003ರಿಂದ ಸೆ.10ರಂದು ವಿಶ್ವ ಆತ್ಮಹತ್ಯೆ ತಡೆ ದಿನವಾಗಿ ಆಚರಿಸುತ್ತಿದೆ. ‘ಒಟ್ಟಾಗಿ ಶ್ರಮಿಸಿ ಆತ್ಮಹತ್ಯೆ ತಡೆಯಿರಿ’ ಎನ್ನುವುದು ಸಂಸ್ಥೆಯ ಘೋಷವಾಕ್ಯವಾಗಿದೆ. ಆತ್ಮಹತ್ಯೆ ಬರೀ ಭಾರತಕ್ಕೆ ಸೀಮಿತವಾಗಿಲ್ಲ.

ದೇಶದಲ್ಲಿ ಆತ್ಮಹತ್ಯೆಗಳಿಗೆ ಹಲವು ಕಾರಣಗಳಿವೆ. ರೋಗ ರುಜಿನ, ಆಲ್ಕೊಹಾಲ್ ಮತ್ತು ಮಾದಕ ದ್ರವ್ಯ , ಬಡ್ಡಿಯ ಸಾಲ ಇತರ ಪ್ರಮುಖ ಕಾರಣಗಳಿಗೆ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಡಿಪ್ರೆಶನ್ ಮತ್ತು ಹಲವು ಮನೋರೋಗಗಳೂ ಆತ್ಮಹತ್ಯೆಗೆ ಪ್ರಮುಖ ಕಾರಣಗಳು. ಅಂಕಿಅಂಶಗಳು ವರ್ಷದಿಂದ ವರ್ಷಕ್ಕೆ ಚಾಲನೆಯಲ್ಲಿವೆ. ಆತ್ಮಹತ್ಯೆಯ ಕಾರಣಗಳಲ್ಲಿ ಗಮನಾರ್ಹ ಬದಲಾವಣೆಗಳು ಗೋಚರಿಸುವುದಿಲ್ಲ. ಮಗುವಿಗೆ ವಯಸ್ಸಾದಂತೆ ಆತ್ಮಹತ್ಯೆಯ ಅಂಕಿ ಅಂಶಗಳೂ ಹೆಚ್ಚುತ್ತಿವೆ. ಸರಕಾರವು ಇಂತಹ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕು. ಜನರು ಭಾವನಾತ್ಮಕ, ಮುಖ್ಯ ಸಮಸ್ಯೆಗಳಲ್ಲದ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಮುನ್ನ ಈ ಬಗ್ಗೆ ಚಿಂತಿಸಬೇಕಾಗಿದೆ. ಪರಿಸ್ಥಿತಿ ವಾತಾವರಣ, ಸಂಕಷ್ಟ ಯಾರಿಗೂ ಬರಬಹುದು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಆತ್ಮಹತ್ಯೆಗೆ ವಾತಾವರಣ ಸೃಷ್ಠಿಯಾಗುವದು ದೊಡ್ಡ ಅಪಾಯಕಾರಿ.

Leave a Reply