Representational Image

ಮಕ್ಕಳ ಪೋಷಕರು ಎಂದ ಮೇಲೆ ಯಾರೇ ಆಗಲಿ ಬೇಸಗೆ ರಜಾದಲ್ಲೇ ಸಿಗುವುದು ನಿಜವಾದ ನಿರುಮ್ಮಳತೆ.ಹಾಗೆ ಊರು ಬಿಟ್ಟು ಹೊರಟವರು,ಬಲು ಆನಂದದಿಂದ ಊರೂರು ತಿರುಗಿ ನೆನ್ನೆ ರಾತ್ರಿ ಬೆಂಗಳೂರು ಮಹಾನಗರಿ ತಲುಪಿದೆವು.ಪ್ರಯಾಣದ ಪ್ರಯಾಸವ ಕಳೆಯಲು ಬಿ ಟಿ ಎಂ ಲೇಔಟ್ ನಲ್ಲಿರುವ ತಮ್ಮನ ಹೋಟೆಲ್ ಫಾಗ್ ಗೆ ನುಗ್ಗಿದೆವು.ಅಲ್ಲಿನ ಮಬ್ಬುಗತ್ತಲಿನಲ್ಲಿ ತೇಲಿಬರುವ ಹಿತವಾದ ಸಂಗೀತದೊಂದಿಗೆ ವೈವಿಧ್ಯಮಯವಾದ ಇಟಾಲಿಯನ್, ಮೆಕ್ಸಿಕನ್ ಖಾದ್ಯಗಳನ್ನ ಸವಿದು ತಮ್ಮಂದಿರ ಉಪಚಾರದಲ್ಲಿ ಸಮಯ ಸರಿದದ್ದೇ ತಿಳಿಯಲಿಲ್ಲ.ಗಂಟೆಗಳ ನಂತರ ತಿರುಗಿ ಬಂದು ನೋಡುತ್ತೇವೆ.

ಕಾರಿನ ಹಿಂಬಾಗದ ಗ್ಲಾಸು ಒಡೆದು ಪುಡಿಪುಡಿ.ಏನೋ ಕಾರ್ಯಕ್ಕೆಂದು ತೆಗೆದುಕೊಂಡು ಹೋಗಿದ್ದ ನಾಲ್ಕು ಲಕ್ಷ ರೂಪಾಯಿ ನಗದು,ಬೆಲೆಬಾಳುವ ಮೊಬೈಲ್ ಮತ್ತು ವಾಚುಗಳಿದ್ದ ತಮ್ಮಂದಿರ ಬ್ಯಾಗು,ನೀಲುಅಕ್ಕ ದುಬೈನಿಂದ ಪ್ರೀತಿಯಿಂದ ಕಳಿಸಿದ್ದ ದುಬಾರಿ ಬ್ಯಾಗು,ಬಲು ಆಸೆಯಿಂದ ತೆಗೆದುಕೊಂಡಿದ್ದ ನನ್ನ ಬ್ಯಾಗು,ನನ್ನ ಮಗನದು ಎಲ್ಲವೂ ಕಳುವಾಗಿವೆ.

ಇದೇ ತಿಂಗಳು ವಿದೇಶಕ್ಕೆ ಹಾರಬೇಕಿದ್ದ ತಮ್ಮನ ಪಾಸ್ ಪೋರ್ಟ್ ಮತ್ತು ಅಮೂಲ್ಯ ದಾಖಲೆಗಳೂ ಕಳುವಾಗಿದ್ದು ಅವನೂ ಪೆಚ್ಚಾಗಿದ್ದ.ನಾವೆಲ್ಲಾ ಕೆಲವರು ತಲೆ ಮೇಲೆ,ಕೆಲವರು ಬಾಯಿ ಮೇಲೆ,ನಾನು ಗಲ್ಲದ ಮೇಲೆ ಕೊಂಚ ಹೊತ್ತು ಕೈಯಿಟ್ಟು ನಂತರ ಕೈ ಕೆಳಗಿಳಿಸಿ ಪೋಲೀಸರಿಗೆ ವಿಷಯ ತಿಳಿಸಿದೆವು.ಸುತ್ತಲೆಲ್ಲಾ ಜನ ನೆರೆದರು.ತಲೆಗೊಂದರಂತೆ ಮಾತುಗಳು ಬಂದವು. ಬಂಧುವಾದ ಸರ್ಕಲ್ ಇನ್ಸಪೆಕ್ಟರ್ ಸಲೀಂ ವಳಾಲ್ ಅಬ್ಬಾಸ್,ಅಕ್ಕಾ..ಎಂದೇ ಕರೆದು ಪ್ರೀತಿ ತೋರುವ ಇನ್ಸಪೆಕ್ಟರ್ ಗೆಳೆಯ ದತ್ತೂಬಾ ತಕ್ಷಣ ಸಹಾಯಕ್ಕೆ ಧಾವಿಸಿದರು.ಸಿಸಿ ಕ್ಯಾಮೆರಾ ಚೆಕಿಂಗ್ ಗಳೂ ನಡೆದವು.ಇದೀಗ ಗಂಡ ಮತ್ತು ತಮ್ಮಂದಿರು ಇನ್ಸ್‌ಪೆಕ್ಟರ್ ರ ಕರೆಗೆ ಪೋಲೀಸ್ ಸ್ಟೇಷನ್ ಗೆ ತೆರಳಿದ್ದಾರೆ.ನಾನು ಯೋಜನೆಯೆಲ್ಲಾ ತಲೆಕೆಳಗಾಗಿ ಮಕ್ಕಳೊಂದಿಗೆ ಕೋಣೆಯಲ್ಲಿ ಕುಳಿತಿದ್ದೇನೆ.

ಈ ನನ್ನ ಸಣ್ಣಮಗಳು ‘ಜೇನು’ಳದು ಒಂದೇ ಗಲಾಟೆ.ಬ್ಯಾಗಿನ ಬದಿಯಲ್ಲಿ ಅವಳ ಓರಿಯೋ ಡಿಪ್ಡ್ ಬಿಸ್ಕೆಟ್ ಇಟ್ಟಿದ್ದಳಂತೆ.ಎರಡೇ ತಿಂದು ಉಳಿದದ್ದು ಹಾಗೇ ಮುಚ್ಚಿಟ್ಟಿದ್ದಳಂತೆ.ನಾನು ಈಗಲೇ ಫೋನ್ ಮಾಡಿ ಪೋಲೀಸ್ ಇನ್ಸ್‌ಪೆಕ್ಟರ್ ಗೆ ಹೇಳಬೇಕಂತೆ.
ಈ ಮಗು ಹಾಗೆ ತುಟಿಕೊಂಕಿಸಿ ದುಃಖದಿಂದ ಹೇಳುವಾಗ..ಈ ಕೋಣೆಯೊಳಗೆ ಬಿಗುವೆಲ್ಲಾ ಕರಗಿ,ಚಿಂತೆ ಮರೆತು ನಗು ಅಲೆಅಲೆಯಾಗಿ ಹೊಮ್ಮಿದಾಗ ಅವಳ ಕ್ಲೇಷಭರಿತ ಮುಖವನ್ನೊಂದು ಬಾರಿ ನೋಡಬೇಕಿತ್ತು ನೀವು.

ಫರ್ಝಾನ ಯು.ಟಿ ಫೇಸ್ಬುಕ್ ಪುಟದಿಂದ

Leave a Reply