ಪತಿಯು ಗುಣವಾಗದ ಖಾಯಿಲೆಯಿಂದ ಬಳಲುತ್ತಿರುವಾಗ ಆಕೆಯನ್ನು ಮದುವೆ ಆಗಿದ್ದು ಈಗ ಪತ್ನಿಗೂ ಈ ರೋಗ ತಗಲಿದೆ. ಇದು ಏಡ್ಸ್ ರೋಗಕ್ಕಿಂತಲೂ ಭೀಕರ ರೋಗವಾದ ಹೆಚ್.ಎಸ್.ವಿ. (ಹರ್ಪೆಸ್ ಸಿಂಪ್ಲೆಕ್ಸ್ ವೈರಸ್) ಪತಿಗೆ ಇದ್ದದ್ದು ಆತನ ಪೋಷಕರು , ಕುಟುಂಬಕ್ಕೂ ಮೊದಲೇ ತಿಳಿದಿದ್ದರೂ ಮುಗ್ಧ ಹೆಣ್ಣಿನ ಬದುಕನ್ನು ವಂಚಿಸುವ ಈ ವಿವಾಹದಿಂದಾಗಿ ಜೀವನ ಪರ್ಯಂತ ಆಕೆ ನರಳುವಂತೆ ಮಾಡಿರುತ್ತಾರೆ ಎಂದು ದೂರು ದಾಖಲಾಗಿದೆ. ರೋಗ ಹರಡುವಿಕೆಯ ವಿಷಯ ತಿಳಿದೂ ಮದುವೆ ಆಗಿರುವ ಈ ಪ್ರಕರಣವನ್ನು `ನರಹತ್ಯೆ’ ಎಂದು ಪರಿಗಣಿಸಬಹುದೇ ಎಂಬ ಪರಿಶೀಲನೆಗೆ ನೀಡಿತ್ತು. ಜೀವಕ್ಕೆ ಅಪಾಯಕಾರಿಯಾದ ರೋಗ ಹರಡಿಸಿದ, ವಂಚಿಸಿದ, ಲೈಂಗಿಕ ಅತ್ಯಾ ಚಾರ ನಡೆಸಿದ್ದಕ್ಕೆ ನ್ಯಾಯಾಲಯ ಗಂಡ ಮತ್ತು ಆತನ ಕುಟುಂಬ ಸದಸ್ಯ ವಿರುದ್ಧ ಸಮನ್ಸ್ ಜಾರಿ ಮಾಡಿತು.

ಈ ಮೇಲಿನ ಘಟನೆಯು ನಮ್ಮ ಕರ್ನಾಟಕದಲ್ಲಿ ನಡೆದಿರುವುದು. ಸುಳ್ಳು, ವಂಚನೆ, ಒತ್ತಡ, ಬೆದರಿಕೆಯೊಂದಿಗೆ ನಡೆಯಲ್ಪಡುವ ವಿವಾಹಗಳು ಇಂದು ಸಮಾಜದಲ್ಲಿ ನಡೆಯುತ್ತಿರುವುದು ಕಂಡು ಬರುತ್ತಿದೆ. ಕೌನ್ಸೆಲಿಂಗ್ ಸೆಂಟರ್‍ನಲ್ಲಿ ದಾಖಲಾಗುವ ದೂರುಗಳಲ್ಲಿ ವಿವಾಹ ದಲ್ಲಿ ನಡೆದ `ವಂಚನೆ’ಗಳೇ ಪ್ರಧಾನ ವಾಗಿದೆ. ಪುರುಷ ಅಥವಾ ಮಹಿಳೆಗೆ ಮಾನಸಿಕ ರೋಗ ಇರುವುದನ್ನು ಬಚ್ಚಿಟ್ಟು ವಿವಾಹ ಮಾಡಿಸುವುದು, ತದನಂತರ ಅವರ ವರ್ತನೆ, ರೀತಿ-ನೀತಿಗಳು ಅವರ ಅಸ್ವಸ್ಥತೆಗೆ ಸಾಕ್ಷಿಯಾಗಿ ಬಹಿರಂಗವಾಗು ವಾಗ ಕುಟುಂಬದಲ್ಲಿ ಜಗಳ, ಟೀಕೆ,ಅಸಹನೆ ಹೆಚ್ಚುತ್ತಾ ದಾಂಪತ್ಯ ಜೀವನವು ವಿಚ್ಛೇದನೆಯಲ್ಲಿ ಕೊನೆಗೊಳ್ಳುತ್ತದೆ. ಗಂಡು ಅಥವಾ ಹೆಣ್ಣು ಹೆತ್ತವರಿಂದ ನಡೆಯುವ ಈ ಆತ್ಮವಂಚನೆಯ ಮೋಸದ ಮದುವೆಯಿಂದಾಗಿ ಹಲವು ಕುಟುಂಬಗಳು ಛಿದ್ರವಾಗುವುದರ ಜೊತೆಗೆ `ಕಳಂಕ’ವನ್ನೂ ಎದುರಿಸಬೇಕಾಗುತ್ತದೆ. ಮಗನ ಅನಾರೋಗ್ಯ ವನ್ನು ಹೆಣ್ಣಿನ ಕಡೆಯವರಿಗೆ ತಿಳಿಸುವ ಗೋಜಿಗೆ ಹೋಗದೇ `ಮದುವೆ’ ಕಾರ್ಯ ಮುಗಿಯಲಿ… ಆ ಮೇಲೆ ಏನಾಗುತ್ತೋ… ನೋಡೋಣ ಎಂಬ ನಿರ್ಲಕ್ಷ್ಯ ಕುಟುಂಬದವರದ್ದು. ಒಂದು ವಿದ್ಯಾವಂತೆ ತರುಣಿಗೆ ಆರು ತಿಂಗಳ ಹಿಂದೆ ವಿವಾಹ ಆಯಿತು. ಕುಟುಂಬದ ಹತ್ತಿರದೇ ಗಂಡು. ಅವನು ವಿದೇಶದಲ್ಲಿ ಇದ್ದ ಕಾರಣ ಆತನ ಬಗ್ಗೆ ಹುಡುಗಿಗೆ ಏನೂ ತಿಳಿದಿರಲಿಲ್ಲ.

ಬಾಲ್ಯದಲ್ಲಿ, ಹದಿ ಹರೆಯದಲ್ಲಿ ಫ್ಯಾಮಿಲಿ ಕಾರ್ಯಕ್ರಮ ದಲ್ಲಿ ಆತನನ್ನು ನೋಡಿದ್ದ  ನೆನಪುಅಷ್ಟೇ. ಒಳ್ಳೆಯ ಉದ್ಯೋಗ, ನೋಡಲು ಸುಂದರಾಂಗ, ಕುಟುಂಬ ಕೂಡಾ ಒಳ್ಳೆಯದೇ… ಮದುವೆಗೆ ಒಪ್ಪಿಕೊಂಡಿ ದ್ದರು.  ಮದುವೆಯ ದಿನ ಹುಡುಗ(ವರ)  ಮಂಟಪದಲ್ಲಿ ಕುಳಿತಲ್ಲಿಂದ ಎದ್ದು ಆಚೀಚೆಗೂ ಹೋಗುತ್ತಿರಲಿಲ್ಲ. ನೆಂಟರಿ ಷ್ಟರು ಆತನು ಕುಳಿತಲ್ಲಿಗೆ  ಬಂದು ಕೈ ಕುಲುಕುತ್ತಿದ್ದರು. `ವಧು’ವಿನ ಪುಟ್ಟ ತಮ್ಮಂದಿರು ಮದುವೆ ಮನೆಯಲ್ಲಿ ಆಚೀಚೆ ಓಡಾಡುತ್ತಾ ಮದುಮಗನ ಬಳಿ ಬಂದು  ನಿಂತರು. ಆಗ ಅವರಿಗೆ `ವರ’ನ ಕೈ ಮತ್ತು ಕಾಲು ನಡುಗು ತ್ತಿರುವುದು ಕಾಣಿಸಿತು. ಅವರು ಬಂದು ಅಕ್ಕನಾದ `ವಧು’ವಿಗೆ ಬಂದು  `ವರ’ನ ಕೈ ಸರಿಯಿಲ್ಲ… ಜೋತು ಬಿದ್ದಿದೆ… ಎಂದರು. ಹುಡುಗಿಗೆ `ಶಾಕ್’ ಆಯಿತು.

ಆಕೆ ತಾಯಿಯನ್ನು ಕರೆದು ವಿಷಯ ತಿಳಿಸುತ್ತಾಳೆ.  ಅವರು ಗಂಡಿನ ಮನೆ ಯವರ ಬಳಿ “ಹುಡುಗನ ಆರೋಗ್ಯ ಸರಿ ಇಲ್ಲವೇ?” ಎಂದು ಪ್ರಶ್ನೆ ಹಾಕುತ್ತಾರೆ. ನಮ್ಮ  ಹುಡ್ಗನಿಗೆ ಏನೂ ಆಗಿಲ್ಲ. ಸರಿ ಇದ್ದಾನೆ… ಸ್ವಲ್ಪ ವೀಕ್‍ನೆಸ್ ಇದೆ.  ಅಷ್ಟೇ ಎಂದು ಬಾಯಿ ಮುಚ್ಚಿಸುತ್ತಾರೆ. ಹೆಣ್ಣಿನ ತಾಯಿ ಮತ್ತು  ಮದುಮಗಳು `ಮೌನ’ವಹಿಸಿ ಬಿಡುತ್ತಾರೆ. ತಂದೆ ಇಲ್ಲದ ಮಗಳ ಮದುವೆ ನಿಂತು ಹೋಗುವುದು ಅವರಿಗೂ ಬೇಡವಾಗಿತ್ತು. ಮದುವೆಯ  ಕಾರ್ಯ ಕ್ರಮವೆಲ್ಲಾ ಮುಗಿದು ಪ್ರಥಮ ರಾತ್ರಿಯ ಸಮಯದಲ್ಲಿ ಮದುಮಗಳಿಗೆ ತನ್ನ ಮುಂದೆ ಕುಳಿತ ಮದುಮಗ(ಪತಿ) ಪಾರ್ಕಿನ್ಸನ್ಸ್ (ನರ  ದೌರ್ಬಲ್ಯ) ಖಾಯಿಲೆ ಯಿಂದ ನರಳುತ್ತಿದ್ದದು ತಿಳಿಯಿತು.

ವಿವಾಹದ ಬಳಿಕ ಖಿನ್ನತೆಗೆ ಜಾರಿದ ಪತ್ನಿಯು ಬದುಕಿನ ಭವಿಷ್ಯವೆಲ್ಲಾ    ಅವಳಿಗೆ ಕತ್ತಲಿನಂತಾಗಿತ್ತು. ತನಗೆ `ತಲಾಕ್’ ಬೇಕೆಂದು ವಿನಂತಿಸಿದರೂ ಅವರು ಅದನ್ನು ನೀಡಲು ತಯಾರಿಲ್ಲ. ಕುಟುಂಬಿಕರು  ಅವಳಿಗೆ ಸಮಾಧಾನ ಮಾಡುತ್ತಿರುತ್ತಾರೆ… ಭವಿಷ್ಯದಲ್ಲಿ ಆತ ಸರಿ ಹೋಗಬಹುದು… ನೀನು ಸಹ£ವಹಿಸು… ಎಂದಾಗಿದೆ. ವಿವಾಹದ ಆರಂಭವೇ ಮೋಸದಿಂದ ಕೂಡಿದ್ದು ಯೌವನವು ನೀರಸವಾಗಿ ಕಳೆದು ಹೋಗುವ ಕಾಲದಲ್ಲಿ ಆಕೆ ಏಕಾಂಗಿ  ಬದುಕುತ್ತಿದ್ದಾಳೆ. ಇನ್ನೊಂದು ಬಡ ಕುಟುಂಬದ ಸುಂದರವಾದ ಯುವತಿ.

ತಂದೆತಾಯಿಗೆ ಆರು ಜನ ಹೆಣ್ಣು ಮಕ್ಕಳು. ಇವಳನ್ನು  ಶ್ರೀಮಂತ ಕುಟುಂಬದ ಯುವಕನಿಗೆ ಮದುವೆ ಮಾಡಿದರು. ಮದುಮಗಳಾಗಿದ್ದ ಈ ಸುಂದರಿ ಯುವತಿಯ ಕಣ್ಣೀರು ಧಾರೆಧಾರೆ ಯಾಗಿ ಹರಿಯುತ್ತಿತ್ತು. ಅಮ್ಮಾ… ನನಗೆ ಈ ಮದುವೆ ಬೇಡ… ಎಂದು ಅಳು ತ್ತಲೇ ಇದ್ದಳು. ಮನೆಯವರು ಆಕೆಗೆ ಬುದ್ಧಿ ಹೇಳಿದ್ದು ಏನೆಂದರೆ…  “ನೀನು ಸಹನೆ ವಹಿಸಿ ಈ ಯುವಕ ನನ್ನು ಮದುವೆ ಆಗಿ ಬಾಳಿದರೆ ನಮ್ಮ ಬಾಕಿ ಇದ್ದ ಹೆಣ್ಣು ಮಕ್ಕಳಿಗೂ ಅವರೇ ಖರ್ಚು ಮಾಡಿ ಮದುವೆ  ಮಾಡಿಸುತ್ತಾರೆ. ನಿನ್ನಸಹೋದರಿಗಾಗಿ ನೀನು ಒಪ್ಪಿಕೊಳ್ಳಲೇ ಬೇಕು!” ಮದುವೆ ಮನೆಯಲ್ಲಿ ಚೆಂದದ ಮದುಮಗಳ ಪಕ್ಕದಲ್ಲಿ ಕುಳಿತ ಮದು ಮಗನನ್ನು ನೋಡಿ ಹಲವರ ಕಣ್ಣಲ್ಲಿ ಹನಿ ತುಂಬಿತ್ತು. ಕಾರಣ… ಮದುಮಗನ ಎರಡೂ ಕೈ ಸೊಟ್ಟಗಾಗಿ ವಿಕಲಾಂಗ ನಾಗಿದ್ದ.  ಬಾಯಿ ಕೂಡಾ ಸೊಟ್ಟಗಾಗಿ…ಆತನಿಗೆ ಮಾತನಾಡಲು ಸರಿಯಾಗುತ್ತಿರಲಿಲ್ಲ. ಕಾಲು, ಕೈ, ಮುಖ ಎಲ್ಲಾ ತಿರುಚಲ್ಪಟ್ಟ ಯುವಕ ಆಕೆಯ ವರ’ನಾಗಿದ್ದ! ಆಕೆಯನ್ನು ಕಂಡು ಎಲ್ಲರಿಗೂ ಮರುಕವಾಗಿತ್ತು. ಮನೆಯವರ ಒತ್ತಾಯಕ್ಕೆ ಆ ಹೆಣ್ಣು ಮಗಳು ಬಲಿಪಶುವಾಗಿದ್ದಳು.

`ಮದುವೆ’  ಎನ್ನುವುದು `ಮನಶ್ಶಾಂತಿ’ ಗಾಗಿ ರಚಿಸಲ್ಪಟ್ಟ ಒಂದು ಸಂಬಂಧ. ಪರಸ್ಪರರಲ್ಲಿ ಪ್ರೀತಿ, ಕಾಳಜಿ, ಗೌರವ ಇದರ ಮುಖ್ಯ ಅಡಿಪಾಯ. ಸುಖೀ ಜೀವನಕ್ಕಾಗಿ ಗಂಡು-ಹೆಣ್ಣು ದಾಂಪತ್ಯಕ್ಕೆ ಕಾಲಿಡುತ್ತಾರೆ. ಈ `ಸಂಬಂಧ’ದಲ್ಲಿ `ಮನಸ್ಸು’ ಮುಖ್ಯವಾದದ್ದು. ಯಾರದೋಸ್ವಾರ್ಥಕ್ಕೆ,  ಯಾರದೋ ಒತ್ತಡಕ್ಕೆ, ಯಾರನ್ನೋ ಉದ್ಧಾರ ಮಾಡಲಿಕ್ಕಾಗಿ `ವಿವಾಹ’ ಆಗುವುದರಲ್ಲಿ ಅರ್ಥವೇ ಇಲ್ಲ. ಅದು  `ಮಾನಸಿಕ ಹತ್ಯೆ’,`ಮಾನವ ಹತ್ಯೆ’ ಎಂದೇ ತಿಳಿಯಬೇಕು. ಪರಸ್ಪರ `ಸಮ್ಮತಿ’ ಇದ್ದಲ್ಲಿ ಅದನ್ನು `ಮೋಸ’ ಎಂದು ಹೇಳಲಾಗದು. `ಆದರ್ಶ ವಿವಾಹ’ ಎಂಬ ಹೆಸರಿನಲ್ಲಿ ಕೆಲವರು ಅಂಗವಿಕಲತೆ ಅಥವಾ ಇನ್ನೇನಾದರೂ ಸಮರ್ಪಕ ಇಲ್ಲದ(ನ್ಯೂನತೆ ಇದ್ದ)ವರನ್ನು ತಮ್ಮ ಸಂಗಾತಿ ಮಾಡಿ ಕೊಳ್ಳುವುದು ಉತ್ತಮ ಹೆಜ್ಜೆ. ಮನ ಪೂರ್ವಕವಾಗಿ ಒಪ್ಪಿ ಹೆಣ್ಣು ಅಥವಾ ಗಂಡು  ಆದರ್ಶ ವಿವಾಹ ಆಗುವುದು ಸ್ವಾಗತಾರ್ಹವೇ.

ಆದ್ರೆ… “ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು” ಎಂಬ ಗಾದೆಮಾತಿನಂತೆ  ಸುಳ್ಳಿನ ಅಡಿಪಾಯ ದಡಿ ನಡೆಯುವ ವಿವಾಹ ಹೆಚ್ಚು ದಿವಸ ಬಾಳದು ಎಂದು ನೆನೆಯಬೇಕು. ಚಿಕ್ಕ, ಪುಟ್ಟ ನ್ಯೂನತೆ, ಅನಾರೋಗ್ಯಇದ್ದರೆ  ವಿವಾಹ ನಂತರ ಅದರ ಬಗ್ಗೆ ಸಂಗಾತಿಯು ಅರಿತಾಗ ಮನಸ್ಸು ಮುರಿ ಯದೇ `ವಿಶಾಲತೆ’ಯಿಂದ `ಸಂಬಂಧ’ ವನ್ನು ಕಾಣಬೇಕು. ಉದಾ: ಓರ್ವ ಹೆಣ್ಣು ಮಗಳಿಗೆ ದೃಷ್ಟಿ ದೋಷವಿದೆ. ಆಕೆಯು ಲೆನ್ಸ್ ಅಥವಾ ಕನ್ನಡ ಹಾಕುತ್ತಾಳೆ… ಗಂಡಿನ ಮನೆಯವರಿಗೆ ಇದು ತಿಳಿಯದು. ವಿವಾಹ ನಂತರ ಸೊಸೆಗೆ ದೃಷ್ಟಿದೋಷ ಇದೆ… ಕನ್ನಡಕ ಹಾಕದಿದ್ದರೆ ಸ್ಪಷ್ಟವಾಗಿ ಕಾಣಿಸದು ಎಂಬ ಸತ್ಯ ತಿಳಿಯುತ್ತದೆ. ಆದ್ರೆ… ಹುಡುಗನ ಮನೆಯವರು ಈ ವಿಷಯಕ್ಕೆ ತಲೆಕೆಡಿಸಿಕೊಳ್ಳದೇ ಸೊಸೆ ಯನ್ನು ಪ್ರೀತಿಯಿಂದ ಕಾಣುತ್ತಾರೆ.

ಕ್ಷಮೆ ಮತ್ತು  ಕರುಣೆ ಸಂಬಂಧದ ಎರಡು ರೆಕ್ಕೆಗಳಾಗಿವೆ. ಆದ್ದರಿಂದ `ವಿವಾಹ’ದಲ್ಲಿ ಸತ್ಯ, ಪಾರದರ್ಶಕತೆ, ನ್ಯಾಯ ಇರಲಿ. ಆತ್ಮ ವಂಚನೆಯ ತೆರೆ ಎಳೆದು ನಿರ್ಮಾಣವಾಗುವ ಸಂಬಂಧ ಗೆದ್ದಲು ಹಿಡಿದ ಮರದಂತೆ `ಶಿಥಿಲ’ ಆಗುತ್ತಾ ಹೋಗುತ್ತದೆ.

ಲೇಖಕಿ : ಶಮು

Leave a Reply