ತೋನ್ಸೆ ಗ್ರಾಮದ ಪಡುಕುದ್ರುವಿನಲ್ಲಿ ತೀರಾ ದುಸ್ಥಿತಿಯಲ್ಲಿದ್ದ ಮನೆಯಲ್ಲಿ ವಾಸಿಸುತ್ತಿದ್ದ ಭಾಸ್ಕರ ಎಂಬವರ ಕುಟುಂಬಕ್ಕೆ ಜಮಾಅತೆ ಇಸ್ಲಾಮಿ ಹಿಂದ್, ಹೂಡೆಯ ವತಿಯಿಂದ ಗುಣಮಟ್ಟದ ಮನೆಯನ್ನು ನಿರ್ಮಿಸಿ ಕೊಡಲಾಯಿತು. ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್’ನ ರಾಜ್ಯ ಸಲಹಾ ಸಮಿತಿಯ ಸದಸ್ಯರಾದ ಜನಾಬ್ ಅಕ್ಬರ್ ಅಲಿ ಅವರು ನೂತನ ಮನೆಯ ಕೀಲಿ ಕೈ ಭಾಸ್ಕರ ಅವರಿಗೆ ನೀಡುವ ಮೂಲಕ ಮನೆಯನ್ನು ಅವರ ಸುಪುರ್ದಿಗೆ ನೀಡಿದರು.

5,92,000 ರೂಪಾಯಿ ಮೌಲ್ಯದ ಮನೆಯ ವೆಚ್ಚದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ 4,42,000 ಭರಿಸಿದರೆ ಸರಕಾರದ ವಸತಿ ಯೋಜನೆಯಿಂದ 1,50,000 ರೂಪಾಯಿ ಸಹಾಯಧನವನ್ನು ಪಡೆಯಲಾಗಿತ್ತು. ಮನೆ ಹಸ್ತಾಂತರಿಸಿದ ಮಾತನಾಡಿದ ಅಕ್ಬರ್ ಅಲಿ ಅವರು ಈ ಕೆಲಸ ದೇವ ವಿಶ್ವಾಸದ ಭಾಗವಾಗಿದೆ. ಮನುಷ್ಯನು ಪರಸ್ಪರ ಸಹಕರಿಸಿ ಸಮಾಜದಲ್ಲಿ ವಂಚಿತರಿಗೆ ನೆರವಾಗಿ ಜೀವಿಸುವುದೇ ಮಾನವೀಯತೆ ಎಂದು ಹೇಳಿದರು.

ಈ ಸಂದರ್ಭದ ಸಾಕ್ಷಿಗಳಲ್ಲಿ ಒಬ್ಬರೂ ಹಾಗೂ ಸ್ಥಳಿಯ ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಶ್ರೀ ಜನಾರ್ದನ್ ತೋನ್ಸೆ ಜಮಾಅತೆ ಇಸ್ಲಾಮಿಯ ಸಮಾಜಸೇವಾ ಕಾರ್ಯಗಳನ್ನು ಶ್ಲಾಘಿಸಿ ಹೆಸರಿಗೊಂದು ಮನೆ ಮಾಡದೆ ತಮ್ಮ ಸ್ವಂತ ಮನೆಯಂತೆ ಕಾಳಜಿ ವಹಿಸಿ ಗುಣಮಟ್ಟದ ಮನೆ ನಿರ್ಮಿಸಿ ಕೊಟ್ಟಿದ್ದಾರೆ ಇದು ಮುಖ್ಯ ಮತ್ತು ಅನುಕರಣೀಯ ಎಂದು ಹೇಳಿದರು.

ಉಪಸ್ಥಿತರಿದ್ದ ದಲಿತ ದಮನಿತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ಯಾಮ್’ರಾಜ್ ಬಿರ್ತಿಯವರು ಮಾತನಾಡಿ ಜಮಾಅತೆ ಇಸ್ಲಾಮಿಯವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಕಡೆಗೆ ತಮ್ಮ ಸೇವಾ ಕಾರ್ಯವನ್ನು ಒಯ್ದಿದ್ದಾರೆ ಇದು ನಿಜವಾದ ಆರಾಧನೆಯೇ ಹೋರತು ದೇವಾಲಯಕ್ಕೆ ಚಿನ್ನದ ಕಿರೀಟ ನೀಡುವುದಲ್ಲ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯು ನಿರಂತರವಾಗಿ ಸಮಾಜ ಮುಖಿ ಕಾರ್ಯದಲ್ಲಿ ತನ್ನನ್ನು ತೊಡಗಿಸಕೊಂಡಿದ್ದು , ಈ ಮನೆ ಸೇರಿ ಇಲ್ಲಿಯವರೆಗೆ ಆರು ಮನೆಗಳನ್ನು ಬಡ ಕುಟುಂಬಗಳಿಗೆ ಹಸ್ತಾಂತರಿಸಿದೆ.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಸುಲೋಚನ , ಸ್ಥಳೀಯ ಪಂಚಾಯತ್ ಸದಸ್ಯರಾದ ಶ್ರೀ ಗುರುರಾಜ್ ರಾವ್, ಶುಭಹಾರೈಸಿದರು.SIO ಕರ್ನಾಟಕ ರಾಜ್ಯ ಅಧ್ಯಕ್ಷರಾದ ನಿಹಾಲ್ ಸಾಹೇಬ್ ಕಿದಿಯೂರ್, ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷರಾದ ಕೆ.ಅಬ್ದುಲ್ ಕಾದಿರ್, ಹ್ಯೂಮನೇಟೆರಿಯನ್ ರಿಲೀಫ್ ಸೊಸೈಟಿಯ ಮಹಮ್ಮದ್ ಮರಕಡ, ಪಂಚಾಯತ್ ಸದಸ್ಯರುಗಳಾದ ಜನೆವಿವ್ ಪಿಂಟೊ, ವೆಂಕಟೇಶ್ ಕುಂದರ್, ಅಶ್ಫಾಕ್ ಹೂಡೆ, ಶ್ರೀಧರ, ಮಾಜಿ ಅಧ್ಯಕ್ಷರಾದ ಜ್ಯೋತಿ ಲುವಿಸ್, ಮಾಜಿ ಉಪಾದ್ಯಕ್ಷರಾದ ಸಾದಿಕ್ ಹೂಡೆ ಉಪಸ್ಥಿತರಿದ್ದರು. ಜಮಾಅತ್’ನ ಕಾರ್ಯಕರ್ತರು, ಭಾಸ್ಕರ ಅವರ ಕುಟುಂಬದವರು, ಇತರ ಗಣ್ಯರು ಮತ್ತು ಇನ್ನಿತರ ಸ್ಥಳೀಯರು ಉಪಸ್ಥಿತರಿದ್ದರು.

 

Leave a Reply