ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.  ಗಿರೀಶ್ ಕಾರ್ನಾಡ್ 1938 ಮೇ 19 ರಂದು ಮಹಾರಾಷ್ಟ್ರದ ಮಥೇರಾನ್ ನಲ್ಲಿ ಜನಿಸಿದ್ದರು. ಅವರಿಗೆ 81 ವರ್ಷ ವಯಸಾಗಿತ್ತು.

ತಂದೆ ಡಾ|ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಶೀಲ ಮನೋಭಾವದ ಡಾ|ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದು ಕೊ೦ಡರು. ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ 5 ವರ್ಷದ ಮಗ ವಸಂತನ ತಾಯಿ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾರ್ನಾಡರಲ್ಲಿ ಕಂಡು ಬರುತ್ತದೆ. ಮುಂದೆ ಕಾರ್ನಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಅವರ ಬೆಳವಣಿಗೆಯಲ್ಲಿ ಸಹಾಯಕವಾಯಿತು.

ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ರ್ಹೊಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು.

ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ.

ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು.

ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು.

ಇವರು ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು.

ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ಆಕ್ಸ್ ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ನೌಕರಿಯಲ್ಲಿದ್ದು, ಅದನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.

ಗಿರೀಶ್ ಕರ್ನಾಡ್ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಬೈಯಪ್ಪನಹಳ್ಳಿ ಸಮೀಪ ಇರುವ ಕಲ್ ಪಲ್ಲಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲು ಕುಂಟುಂಬ ನಿರ್ಧರಿಸಿದೆ. ಕಾರ್ನಾಡ್ ಅವರ ಕೋರಿಕೆ ಮೇರೆಗೆ ಯಾವುದೇ ಧರ್ಮದ ಸಂಪ್ರದಾಯ ಇಲ್ಲದೆ ಸರಳವಾಗಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ

Leave a Reply