ತಂದೆಯೊಬ್ಬರು ತಮ್ಮ ಪುತ್ರ ಮದುವೆಯಾಗುವ ಮಾತು ಕೊಟ್ಟು ನಂತರ ವಂಚಿಸಿದ ಹುಡುಗಿಯನ್ನು ಪುತ್ರನ ಪಾಲಿನ ಅಸ್ತಿಯನ್ನೆಲ್ಲ ಆಕೆಯ ಹೆಸರಿಗೆ ಬರೆದು ಕೊಟ್ಟು ಬೇರೊಬ್ಬ ವರನೊಂದಿಗೆ ಮದುವೆ ಮಾಡಿಸಿದ ಅಪರೂಪದ ಘಟನೆ ನಡೆದಿದೆ. ಕೋಟ್ಟಯಂ ತಿರುನಕ್ಕರ ಎಂಬಲ್ಲಿ ಶಾಜಿ ಮತ್ತು ಪತ್ನಿ ತನ್ನ ಮಗ ಪ್ರೀತಿಸಿ ವಂಚಿಸಿದ ಹುಡುಗಿಯನ್ನು ಮಗಳಂತ ಸಾಕಿ ಅಂತಿಮಮವಾಗಿ ಬೇರೆ ಒಬ್ಬ ಯುವಕನೊಂದಿಗೆ ವಿವಾಹ ಮಾಡಿಸಿದ್ದಾರೆ.
ಆರು ವರ್ಷದ ಹಿಂದೆ ಶಾಜಿ ದಂಪತಿ ಪುತ್ರ ಪಿಯುಸಿಯಲ್ಲಿ ಕಲಿಯುತ್ತಿದ್ದ ಸಹಪಾಠಿ ವಿದ್ಯಾರ್ಥಿನಿಯನ್ನು ಕರೆದು ಕೊಂಡು ಓಡಿ ಹೋಗಿದ್ದ. ಅಪ್ರಾಪ್ತ ವಯಸ್ಕರಾದ್ದರಿಂದ ಕಾನೂನು ಪ್ರಕಾರ ಅಂದು ಅವರಿಬ್ಬರಿಗೆ ಮದುವೆ ಮಾಡಿಸಲು ಆಗಿರಲಿಲ್ಲ. ಪೊಲೀಸ್ ಕೇಸು ಇದ್ದುದರಿಂದ ಇಬ್ಬರೂ ಕೋರ್ಟಿಗೆ ಹಾಜರಾಗಿದ್ದರು. ಇದೇ ವೇಳೆ ಹುಡುಗಿಯ ಮನೆಯವರು ಪುನಃ ಅವಳನ್ನು ಸ್ವೀಕರಿಸಲು ಸಿದ್ದರಾಗಲಿಲ್ಲ. ನಂತರ ಆ ಹುಡುಗಿಯನ್ನು ಹುಡುಗನ ತಂದೆ ತಮ್ಮ ಮನೆಗೆ ಕರೆದುಕೊಂಡು ಬಂದು ವಯಸ್ಕರಾದ ಬಳಿಕ ಮದುವೆ ಮಾಡಿಸುವುದಾಗಿ ತೀರ್ಮಾನಿಸಿದ್ದರು.

ಪುತ್ರನನ್ನು ಬೇರೊಂದು ಸ್ಥಳದಲ್ಲಿ ಹಾಸ್ಟೆಲ್‌ನಲ್ಲಿರಿಸಿ ಕಲಿಸಿದರು. ಆದರೆ ಅಲ್ಲಿಯೂ ಆತ ಇನ್ನೊಂದು ಹುಡುಗಿಯನ್ನು ಪ್ರೀತಿಸಿದ್ದಾನೆ. ಇದನ್ನು ಮನಗಂಡು ಶಾಜಿ ಆತನನ್ನು ಗಲ್ಸ್‌ಗೆ ಕರೆದುಕೊಂಡು ಹೋದರು. ಅಲ್ಲಿಂದ ಮರಳಿದ ಬಳಿಕ ಆತ ಹೆತ್ತವರ ಮಾತಿಗೆ ಮಣಿಯದೆ ಬೇರೊಬ್ಬಳನ್ನು ಮದುವೆಯಾಗಿದ್ದ. ನಂತರ ಶಾಜಿ ದಂಪತಿ ಮಗನಿಂದ ವಂಚಿತಳಾದ ಹುಡುಗಿಯ ಮದುವೆಯ ಜವಾಬ್ದಾರಿಯನ್ನು ವಹಿಸಿಕೊಂಡು ಕರುನಾಪ್ಪಳಿಯ ವರನಿಗೆ ಮದುವೆ ಮಾಡಿಸಿಕೊಟ್ಟರು. ತಿರುನಕ್ಕರ ದೇವಸ್ಥಾನದಲ್ಲಿ ಮದುವೆಯೂ ನಡೆಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಶಾಜಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಅಪ್ರಾಪ್ತ ವಯಸ್ಸಿನಲ್ಲಿ ತಪ್ಪು ಮಾಡಿದ ಹುಡುಗಿಗೆ ಜೀವನ ಕೊಟ್ಟ ಶಾಜಿ ದಂಪತಿಗಳನ್ನು ವ್ಯಾಪಕವಾಗಿ ಶ್ಲಾಘಿಸಲಾಗುತ್ತಿದೆ.

Leave a Reply