ಕಾಳಿಂಗ ಸರ್ಪದ ಜೀವ ಸಂಕುಲದ ಹೆಸರು ಒಫಿಯೊಫಗಸ್‌ , ಇದರ ಅರ್ಥ “ಹಾವು-ಭಕ್ಷಕ”.
ಯಾವುದೇ ರೀತಿಯ ಹಾವನ್ನು ಅಥವಾ ತನ್ನದೇ ಗುಂಪಿನ ಸಣ್ಣ ಹಾವುಗಳನ್ನು ನಾಗರ ಹಾವುಗಳನ್ನು ತಿಂದು ಜೀವಿಸುವ ಈ ಸಂಕುಲದ ಕಾಳಿಂಗ ಸರ್ಪವು ವಿಶ್ವದ ಅತ್ಯಂತ ಉದ್ದದ ಹಾಗೂ ಅತ್ಯಂತ ವಿಷಕಾರಿ ಹಾವುಗಳಲ್ಲೊಂದು. ಸುಂದರ ಮೈಕಟ್ಟನ್ನು ಹೊಂದಿರುವ ಈ ಹಾವು ಕಪ್ಪು ಬಣ್ಣದ್ದಾಗಿ, ನೋಡಲು ಬಲು ಸುಂದರವಾಗಿರುತ್ತದೆ.

ಸರಿಸುಮಾರು ಐದೂವರೆ ಮೀಟರ್ ಅಥವಾ 18 ಅಡಿ ಉದ್ದ ಬೆಳೆಯುವ ಈ ಹಾವು ಏಷ್ಯಾದ ಹಲವು ಭಾಗಗಳಲ್ಲಿ ಮತ್ತು ಭಾರತದ ಕೆಲ ಪ್ರದೇಶಗಳಲ್ಲಿ ಕಾಣ ಸಿಗುತ್ತದೆ. ದಟ್ಟ ಅರಣ್ಯ ಪ್ರದೇಶಗಳೇ ಇವುಗಳ ಕೇಂದ್ರ ವಾಸಸ್ಥಳ. ಕರ್ನಾಟಕದ ಆಗುಂಬೆ ಪ್ರದೇಶದಲ್ಲಿ ಕಾಳಿಂಗ ಗಳು ಕಾಣಸಿಗುತ್ತವೆ.

ದೇಹದ ಮೂರನೇ ಒಂದು ಭಾಗವನ್ನು ಗಾಳಿಯಲ್ಲಿ ನಿಲ್ಲಿಸಬಲ್ಲ ಶಕ್ತಿಯನ್ನು ಹೊಂದಿರುವ ಕಾಳಿಂಗಸರ್ಪ ಇಂಗ್ಲಿಷ್ನಲ್ಲಿ ಇದನ್ನು ಕಿಂಗ್ ಕೋಬ್ರಾ ಮತ್ತು ಕೇರಳದಲ್ಲಿ ರಾಜವೆಂಬಾಲ ಎಂದು ಕರೆಯುತ್ತಾರೆ.

ಒಮ್ಮೆ ಕಚ್ಚಿದರೆ ಮನುಷ್ಯನನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುವ ಈ ಕಾಳಿಂಗ ಸರ್ಪದಿಂದ ಬದುಕುವುದು ಐದು ಶೇಕಡ ಮಾತ್ರ. ಕೇವಲ 15 ನಿಮಿಷಗಳಲ್ಲಿ ಒಂದು ಮನುಷ್ಯನನ್ನು ಕೊಂದು ಬಿಡುತ್ತದೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ನಂತರ ಉಸಿರುಗಟ್ಟಿ ಮಾನವ ಮರಣಹೊಂದುತ್ತಾನೆ. ಇವುಗಳ ವಿಷದ ಪ್ರಮಾಣ ಎಷ್ಟೆಂದರೆ ಆನೆಯನ್ನು ಕೊಲ್ಲುವ ಸಾಮರ್ಥ್ಯವಿದೆ.
ಇತರೆ ಹಾವುಗಳಂತೆ ಕಣ್ಣಿನ ಹಿಂಭಾಗದಲ್ಲಿ ವಿಷಗಳನ್ನು ಶೇಖರಿಸಿಟ್ಟು, ಯಾರಿಗಾದರೂ ಕಚ್ಚಿದರೆ 1.25 ಸೆಂಟಿಮೀಟರ್ ಗಾತ್ರದ ತನ್ನ ಹಲ್ಲುಗಳಿಂದ ಗಾಯದೊಳಗೆ ವಿಷಗಳನ್ನು ಸಿಂಪಡಿಸುತ್ತದೆ.

ಕಾಳಿಂಗ ಸರ್ಪವು ಒಂದು ಬಾರಿಗೆ 350ರಿಂದ 400 ಎಂಜಿ ಯಷ್ಟು ವಿಷಗಳನ್ನು ಶೇಕರಿಸುತ್ತಿದ್ದು, ಇದು ಸರಿ ಸುಮಾರು 20 ರಿಂದ 40 ರವರೆಗೆ ಮನುಷ್ಯರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ. ಒಮ್ಮೆ ಕಚ್ಚಿದರೆ ಹದಿನೈದು ನಿಮಿಷಗಳಲ್ಲಿ ಸಾವನ್ನಪ್ಪುವ ಮನುಷ್ಯನು ಕೆಲ ಸಂದರ್ಭದಲ್ಲಿ 25 ರಿಂದ 40 ನಿಮಿಷಗಳ ವರೆಗೆ ಬದುಕುಳಿಯುವ ಸಾಧ್ಯತೆಗಳು ಇದೆ.

ಹಾವಿನ ಭಾಗದ ಸೂಕ್ಷ್ಮ ಗ್ರಂಥಿಯ ಮೂಲಕ ವಾಸನೆ ಗ್ರಹಿಸಿ ಬೇಟೆಯಾಡುತ್ತವೆ. ಸುಮಾರು ಮುನ್ನೂರು ಅಡಿ ಅತವಾ ನೂರು ಮೀಟರ್ ದೂರದಿಂದಲೇ ಯಾವುದೇ ಪ್ರಾಣಿ ಅಥವಾ ಹಾವುಗಳು ಚಲಿಸಿದರು ಗ್ರಹಿಸುವ ಶಕ್ತಿ ಇದಕ್ಕಿದೆ. ಭೇಟಿಯನ್ನು ಪತ್ತೆಹಚ್ಚಲು ಸಂವೇದನಾತ್ಮ ಗ್ರಹಿಕಾ ಶಕ್ತಿ ಹೊಂದಿದೆ. ಹಲ್ಲುಗಳಿಂದ ಕಚ್ಚಿ ಸಾಯಿಸಿದ ಬೇಟೆಯನ್ನು ನಂತರ ಕ್ರಮೇಣವಾಗಿ ನುಂಗಲು ಆರಂಭಿಸುತ್ತದೆ. ಟಾಕ್ಸಿನ್ ಎಂಬ ವಿಷಕಾರಿ ಅಂಶವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಕಾಳಿಂಗ ಸರ್ಪಗಳಿಗೆ ದವಡೆ ಗಳಿಲ್ಲ. ವಿಶಾಲವಾಗಿ ಬಾಗುವ ದವಡೆಗಳು ಸುಸ್ಥಿರವಾಗಿದ್ದು, ತಲೆಗಿಂತ ದೊಡ್ಡ ಗಾತ್ರದ ಬೇಟೆಗಳನ್ನು ನುಂಗುವ ಸಾಮರ್ಥ್ಯವನ್ನು ಹೊಂದಿದೆ.

ಕಾಳಿಂಗ ಸರ್ಪ ಕಚ್ಚಿದಲ್ಲಿ ಪಾರಾಗಲು ಈವರೆಗೆ ಎರಡು ಸ್ಥಳಗಳಲ್ಲಿ ಮಾತ್ರ ಔಷಧಿಗಳನ್ನು ತಯಾರಿಸಲಾಗಿದೆ. ಒಂದು ಥೈಲ್ಯಾಂಡ್‌ ರೆಡ್‌ ಕ್ರಾಸ್‌ ಸಂಸ್ಥೆಯು ಸಿದ್ದಪಡಿಸಿದರೆ, ಇನ್ನೊಂದನ್ನು ಭಾರತದ ಸೆಂಟ್ರಲ್‌ ರಿಸರ್ಚ್‌ ಇನ್‌ಸ್ಟಿಟ್ಯುಟ್‌ ತಯಾರಿಸಿಡಲಾಗಿದೆ. ಆದರೆ ಇದು ಲಭ್ಯವಾಗುವುದು ಬಹುತೇಕ ವಿರಳ.

ಸಂತಾನೋತ್ಪತಿಯಲ್ಲಿ ಹೆಣ್ಣು ಹಾವುಗಳು ಒಂದೇ ಪ್ರಮಾಣಕ್ಕೆ 20ರಿಂದ 40ರಷ್ಟು ಮೊಟ್ಟೆಗಳನ್ನಿಡುತ್ತದೆ. ಸುಮಾರು 25 ಡಿಗ್ರಿ ಸೆಲ್ಸಿಯಸ್ ನಲ್ಲಿ ಕಾವುಕೊಟ್ಟು ಮರಿಗಳು ಹೊರ ಬಂದಾಗ ಆಹಾರ ಹುಡುಕಿಕೊಂಡು ಹೋಗುತ್ತದೆ. ಇಲ್ಲದಿದ್ದರೆ ತಾಯಿ ಹಾವು ಮಕ್ಕಳನ್ನು ಕೊಂದು ಭಕ್ಷಿಸಿಬಿಡುತ್ತದೆ. ಮರಿ ಹಾವುಗಳು 55 ಸೆಂಟಿಮೀಟರ್ ನಷ್ಟು ಉದ್ದವಾಗಿದ್ದು, ವಯಸ್ಕ ಹಾವಿನಂತೆ ಅಷ್ಟೇ ಪ್ರಮಾಣದ ವಿಷವನ್ನು ಹೊಂದಿರುತ್ತದೆ.

ಕಾಳಿಂಗ ಸರ್ಪ ಕಡಿದು ಭಾರತದಲ್ಲಿ ಇದುವರೆಗೆ ಇಬ್ಬರು ಮರಣ ಹೊಂದಿರುವುದು ದಾಖಲಾಗಿದೆ. 2015 ರಲ್ಲಿ ಚಿಕ್ಕಮಂಗಳೂರಿನ ಖ್ಯಾತ ಉರಗ ತಜ್ಞ ಪ್ರಫುಲ್ಲದಾಸ್ ಭಟ್ ಹಾವನ್ನು ಹಿಡಿದು ರಕ್ಷಣೆ ಮಾಡುವ ಸಂದರ್ಭದಲ್ಲಿ ಸೊಂಟ ಮತ್ತು ಕೈಗೆ ಕಾಳಿಂಗ ಕಚ್ಚಿದಾಗ, ಕೂಡಲೇ ಅಸ್ವಸ್ಥಗೊಂಡು ಹದಿನೈದು ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ. 2017 ರಲ್ಲಿ ಮಣಿಪಾಲದ ಹನ್ನೊಂದು ವರ್ಷ ಪ್ರಾಯದ ಹರಿಕಾಂತ ಶೇಷ ಎಂಬ ಹುಡುಗಿಯೊಬ್ಬಳು ತಾಯಿಯೊಂದಿಗೆ ತರಕಾರಿ ಕಟಾವು ಮಾಡುವ ವೇಳೆಗೆ ಕಾಳಿಂಗ ಸರ್ಪ ಕಚ್ಚಿ ಮೂರು ದಿನಗಳ ಕಾಲ ಜೀವನ್ಮರಣ ಹೋರಾಟದ ನಂತರ ಸಾವನ್ನಪ್ಪಿದ್ದಾಳೆ.

ಕೇರಳ ಮೂಲದ ವಾವಾ ಸುರೇಶ್, ಇದುವರೆಗೆ ಅರವತ್ತು ಕಾಳಿಂಗ ಸರ್ಪಗಳನ್ನು ಸ್ವತಹಾ ರಕ್ಷಿಸಿ ಅರಣ್ಯಾಧಿಕಾರಿಗಳ ಮೂಲಕ ಕಾಡಿಗೆ ಬಿಟ್ಟಿದ್ದಾರೆ. ವೈಯಕ್ತಿಕವಾಗಿ ಅತ್ಯಧಿಕ ಕಾಳಿಂಗ ಸರ್ಪಗಳನ್ನು ಸಂರಕ್ಷಿಸಿದ ದಾಖಲೆ ಇವರ ಹೆಸರಲ್ಲಿದೆ.

– ನಿಜಾಮುದ್ದೀನ್ ಉಪ್ಪಿನಂಗಡಿ ತಬೂಕ್

LEAVE A REPLY

Please enter your comment!
Please enter your name here