ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸಿಟಿ ರೈಲ್ವೇ ನಿಲ್ದಾಣವನ್ನು ಸ್ಫೋಟಿಸುವುದಾಗಿ ಕರೆ ಮಾಡಿದ್ದ ಉಡುಪಿ ಮೂಲದ ಇಂಜಿನಿಯರ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಉಡುಪಿಯ ಮಣಿಪಾಲ ಮೂಲದ ಆದಿತ್ಯ ರಾವ್ (34) ಎಂದು ಗುರುತಿಸಲಾಗಿದ್ದು, ಈತ ಕಳೆದ ಎರಡು ವಾರಗಳಲ್ಲಿ ಎರಡು ಬಾರಿ ಟರ್ಮಿನಲ್ ಮ್ಯಾನೇಜರ್‌ಗೆ ಕರೆ ಮಾಡಿ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದನು ಎನ್ನಲಾಗಿದೆ. . ಎರಡು ದಿನಗಳಿಂದಷ್ಟೆ ಪಾರ್ಕಿಂಗ್ ಜಾಗ ಸ್ಪೋಟಿಸುವುದಾಗಿ ಇ-ಮೇಲ್ ಕೂಡ ಈತ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದಿತ್ಯ ರಾವ್ ನನ್ನ ವಿಚಾರಣೆಗೆ ಒಳಪಡಿಸಿದಾಗ, ಆತ ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್ ಗೂ ಬೆದರಿಕೆ ಕರೆ ಮಾಡಿದ್ದು ನಾನೇ ಅಂತಾ ತಪ್ಪೊಪ್ಪಿಕೊಂಡಿದ್ದಾನೆ. ಬಿ.ಇ., ಎಂಬಿಎ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಆದಿತ್ಯ ರಾವ್, ಕೆಲ ತಿಂಗಳ ಹಿಂದೆ ಕೆಐಎಎಲ್ ನಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಆತ ಸಿಬ್ಬಂದಿಗಳ ಜೊತೆ ಉಗ್ರವಾಗಿ ವರ್ತಿಸಿ ಕೆಲಸ ಬಿಟ್ಟಿದ್ದ ಎನ್ನಲಾಗಿದೆ.
ಇದೇ ಕೋಪಕ್ಕೆ ಬೆದರಿಕೆ ಕರೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಕೆಐಎಎಲ್ ಪೊಲೀಸರು ಆದಿತ್ಯ ರಾವ್‍ನ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈತನ ಮೇಲೆ ಬೆಂಗಳೂರಿನಲ್ಲೆ ಹಲವಾರು ಕೇಸ್‍ಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
ಉದ್ಯೋಗ ಅರಸಿ ಬಂದಿದ್ದ: ಬಿಇ,ಎಂಬಿಎ ಪದವಿ ಪಡೆದು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ರೈಲ್ವೆ ಇಲಾಖೆ ಹಾಗೂ ದೇವನಹಳ್ಳಿ ಇಂಟರ್‍ನ್ಯಾಷನಲ್ ಏರ್ ಪೋರ್ಟ್ನಲ್ಲಿ ಕೆಲಸಕ್ಕೆ ಪ್ರಯತ್ನಿಸಿದ್ದ.ಆದರೆ ಎರಡೂ ಕಡೆ ಉದ್ಯೋಗ ದೊರೆಯದೆ ಹತಾಶೆಗೆ ಒಳಗಾಗಿದ್ದ. ಇಂತಹ ವರ್ತನೆಯ ಹಿಂದಿನ ಉದ್ದೇಶ ಏನು ಎಂಬುವುದು ಇನ್ನಷ್ಟೆ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬರಬೇಕಾಗಿದೆ.