ತಿರುವನಂತಪುರಂ: ಕೇರಳದ ಇತಿಹಾಸದಲ್ಲೆ ಸಂಭವಿಸಿದ ಜಲ ಪ್ರಳಯದಿಂದ ಸುಮಾರು 20 ಸಾವಿರ ಕೋಟಿ ನಷ್ಟ ಅಂದಾಜಿಸಲಾಗಿತ್ತು. ಈ ನಿಟ್ಟಿನಲ್ಲಿ ಅಲ್ಲಿನ ಸಂತ್ರಸ್ತರಿಗೆ ನೆರವು ನೀಡಲು ಮುಖ್ಯ ಮಂತ್ರಿ ಪರಿಹಾರ ನಿಧಿ ಸ್ಥಾಪಿಸಿ ಅದಕ್ಕೆ ಕೊಡುಗೆ ನೀಡಲು ಮನವಿ ಮಾಡಲಾಗಿತ್ತು. ಈ ಮುಖ್ಯ ಮಂತ್ರಿ ಪರಿಹಾರ ನಿಧಿಗಾಗಿ ಸಾಮಾನ್ಯರಿಂದ ಹಿಡಿದು ದೇಶ ವಿದೇಶಗಳ ದೊಡ್ಡ ದೊಡ್ಡ ಉದ್ಯಮಿಗಳು ಕೊಡುಗೆ ನೀಡಿದ್ದಾರೆ. ಮಾತ್ರವಲ್ಲ ಸಿನೆಮಾ ನಟರೂ ತಮ್ಮ ಕೊಡುಗೆ ನೀಡಿದ್ದಾರೆ.
ಕೇವಲ 14 ದಿನಗಳಲ್ಲಿ ಅಂದರೆ ಸೋಮವಾರ ತನಕ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ (ಸಿಎಮ್ಡಿಆರ್ಎಫ್) 713.92 ಕೋಟಿ ರೂ. ಜಮಾವಣೆಯಾಗಿದೆ. ಪ್ರವಾಹದ ಬಳಿಕ ಕೇರಳಕ್ಕೆ 600 ಕೋಟಿ ಕೇಂದ್ರ ಸರಕಾರದ ನೆರವೂ ಸಿಕ್ಕಿದೆ.
ಸುಮಾರು 3.91 ಲಕ್ಷ ಮಂದಿಯಿಂದ ಸಣ್ಣ ಮತ್ತು ದೊಡ್ಡ ಮಟ್ಟದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಬಂದಿದೆ. 713.92 ಕೋಟಿ ರೂಪಾಯಿಗಳಲ್ಲಿ, 132.62 ಕೋಟಿ ಬ್ಯಾಂಕ್ ಮೂಲಕ ಮತ್ತು ಯುಪಿಐಗಳ ಮೂಲಕ ಠೇವಣಿ ಮಾಡಲಾಗಿದೆ.ಪೇಟಿಎಂ ನಂತಹ ಆನ್ಲೈನ್ ಕೊಡುಗೆ 43 ಕೋಟಿ ರೂ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ CMDRF ಖಾತೆಗೆ 518.24 ಕೋಟಿ ರೂ. ಬಂದಿದೆ. ಈಗಾಗಲೇ ಸರಕಾರವು ವಿವಿಧ ಪರಿಹಾರ ಮತ್ತು ಪುನರ್ನಿರ್ಮಾಣಕಾರ್ಯಗಳಿಗಾಗಿ 65.68 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಜಲಪ್ರಳಯದಲ್ಲಿ ಆಗಿರುವ ನಷ್ಟದ ವ್ಯಾಪ್ತಿ ಬಹಳ ದೊಡ್ಡದು, ಇದುವರೆಗೆ ನಾವು ಲೆಕ್ಕ ಮಾಡಿದಕ್ಕಿಂತ ಎಷ್ಟೊ ಹೆಚ್ಚು ಕೇರಳಕ್ಕೆ ಮಳೆಹಾನಿ ನೆರೆಹಾವಳಿಯಂದ ನಷ್ಟವಾಗಿದೆ. ಆದ್ದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಕೇರಳಕ್ಕೆ ಕೊಡುಗೆ ನೀಡಬೇಕೆಂದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತ್ತೀಚಿಗೆ ಆಶಿಸಿದ್ದಾರೆ.