ನ್ಯುಮೋನಿಯಾ ಎಂದರೆ ಶ್ವಾಸಕೋಶದ ಸೋಂಕು. ಇದು ರೋಗಿಯನ್ನು ಬಹಳಷ್ಟು ಕಾಡಿಸುವ ಒಂದು ರೋಗ ಸ್ಥಿತಿ. ಇಂತಹ ರೋಗಿಗಳಲ್ಲಿ ಕೆಮ್ಮು, ಜ್ವರ ಮತ್ತು ಉಸಿರಾಡಲು ಕಷ್ಟವಾಗುವುದು… ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ. ಹೆಚ್ಚಿನ ಜನರು ನ್ಯುಮೋನಿಯಾಕ್ಕೆ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳುತ್ತಾರೆ. ನ್ಯುಮೋನಿಯಾವು ಸಾಮಾನ್ಯವಾಗಿ 2-3 ವಾರಗಳಲ್ಲಿ ಸರಿ ಹೋಗುತ್ತದೆ. ಆದರೆ ವೃದ್ಧರನ್ನು, ಶಿಶುಗಳನ್ನು ಮತ್ತು ಇತರ ಆರೋಗ್ಯ ಸಮಸ್ಯೆಗಳು ಇರುವ ಜನರನ್ನು ಇದು ಬಹಳಷ್ಟು ನಿತ್ರಾಣಗೊಳಿಸುತ್ತದೆ. ಇಂತಹವರಿಗೆ ನ್ಯುಮೋನಿಯಾದಿಂದಾಗಿ ಆಸ್ಪತ್ರೆಗೆ ದಾಖಲಾಗುವ ಪ್ರಸಂಗವೂ ಬರಬಹುದು.

ಹೇಗೆಲ್ಲಾ ನ್ಯುಮೋನಿಯಾ ಸೋಂಕು ಹರಡುತ್ತದೆ?

ಸೋಂಕು ಪೀಡಿತ ಗಾಳಿಯನ್ನು ಉಸಿರಾಡಿದಾಗ.

ನಿಮ್ಮ ಮೂಗು ಮತ್ತು ಬಾಯಿಯ ಉಸಿರಿನ ಮೂಲಕ ಕೆಲವು ಬ್ಯಾಕ್ಟೀರಿಯಾಗಳು ಶ್ವಾಸಕೋಶವನ್ನು ಪ್ರವೇಶಿಸಿದಾಗ. ಸಾಮಾನ್ಯವಾಗಿ ನಿದ್ದೆ ಮಾಡುವಾಗ ಈ ರೀತಿ ಆಗುತ್ತದೆ.

ಮೇಲಿನ ಶ್ವಾಸಮಾರ್ಗಕ್ಕೆ ವೈರಲ್‌ ಸೋಂಕು ತಗಲಿದಾಗ ಅಥವಾ ಆಮೇಲೆ, ಅಂದರೆ ಶೀತ ಅಥವಾ ಫ್ಲೂ ಸಂದರ್ಭದಲ್ಲಿ.

ವೈರಲ್‌ ಸೋಂಕಿನ ಸಂದರ್ಭದಲ್ಲಿ, ಅಂದರೆ ಸೀತಾಳೆ, ಚಿಕನ್‌ಪಾಕ್ಸ್‌ ಇತ್ಯಾದಿಗಳಾದಾಗ.

ದೊಡ್ಡ ಪ್ರಮಾಣದಲ್ಲಿ ಗಡದ್ದಾಗಿ ಆಹಾರ ಸೇವಿಸಿದಾಗ, ಹೊಟ್ಟೆಯಲ್ಲಿರುವ ಜಠರಾಮ್ಲವನ್ನು ವಾಂತಿ ಮಾಡಿಕೊಂಡಾಗ ಅಥವಾ ಅದು ಶ್ವಾಸಕೋಶಕ್ಕೆ ಪ್ರವೇಶಿಸಿದಾಗ ಆಸ್ಪಿರೇಷನ್‌ ನ್ಯುಮೋನಿಯಾ ಉಂಟಾಗುತ್ತದೆ. ನಿಮ್ಮ ಆರೋಗ್ಯ ಪರಿಸ್ಥಿತಿಯಿಂದಾಗಿ ಆಹಾರ ನುಂಗುವಿಕೆಯ ಮೇಲೆ ಪ್ರಭಾವ ಉಂಟಾದಾಗ, ಅಂದರೆ, ಲಕ್ವಾ ಅಥವಾ ಸೆಳವಿನ ಪರಿಸ್ಥಿತಿ ಇದ್ದಾಗ ಹೀಗಾಗುತ್ತದೆ.

ಯಾವ ಕಾರಣದಿಂದ ನ್ಯುಮೋನಿಯಾ ಉಂಟಾಗುತ್ತದೆ?

ನ್ಯುಮೋನಿಯಾ ಉಂಟು ಮಾಡುವ ರೋಗಾಣುಗಳಿಗೆ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳು ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ನೀವು ನಿಮ್ಮ ಶ್ವಾಸಕೋಶದ ಒಳಕ್ಕೆ ರೋಗಾಣುಗಳನ್ನು ಉಸಿರಾಡಿದಾಗ ನ್ಯುಮೋನಿಯಾ ಉಂಟಾಗುತ್ತದೆ. ಶೀತ ಅಥವಾ ಫ್ಲೂ ಆದ ಬಳಿಕ ನ್ಯುಮೋನಿಯಾ ಸೋಂಕು ಆಗುವ ಸಾಧ್ಯತೆ ಹೆಚ್ಚು. ಯಾಕೆಂದರೆ, ಈಗಾಗಲೇ ಇರುವ ಕಾಯಿಲೆಯ ಪರಿಸ್ಥಿತಿಯಿಂದಾಗಿ ನಿಮ್ಮ ಶ್ವಾಸಕೋಶವು ದುರ್ಬಲವಾಗಿದ್ದು, ರೋಗಾಣುಗಳ ವಿರುದ್ಧ ಹೋರಾಡುವ ಸ್ಥಿತಿಯಲ್ಲಿ ಇರುವುದಿಲ್ಲವಾದ ಕಾರಣ ರೋಗಾಣುಗಳು ಸುಲಭವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡಿ ನ್ಯುಮೋನಿಯ ಉಂಟು ಮಾಡುತ್ತವೆ. ಆಸ್ತಮಾ, ಹೃದಯದ ಕಾಯಿಲೆಗಳು, ಕ್ಯಾನ್ಸರ್‌ ಅಥವಾ ಮಧುಮೇಹ… ಇತ್ಯಾದಿ ದೀರ್ಘ‌ಕಾಲಿಕ ಕಾಯಿಲೆಯನ್ನು ಹೊಂದಿರುವುದೂ ಸಹ ನ್ಯುಮೋನಿಯಾ ಉಂಟಾಗಲು ಇರುವ ಕೆಲವು ಕಾರಣಗಳು.

ವೈರಸ್‌ಗಳು, ಬ್ಯಾಕ್ಟೀರಿಯಾ ಅಥವಾ (ಬಹಳ ಅಪರೂಪಕ್ಕೆ) ಪರೋಪಜೀವಿಗಳು ಅಥವಾ ಇತರ ರೋಗಾಣುಗಳು ನ್ಯುಮೋನಿಯಾಕ್ಕೆ ಕಾರಣವಾಗಿರಬಹುದು.

ಕೆಲವು ಸಂದರ್ಭಗಳಲ್ಲಿ, ಪರೀಕ್ಷೆ ಮಾಡಿಯೂ ಸಹ ನಿರ್ದಿಷ್ಟವಾದ ರೋಗಾಣು ವನ್ನು (ಅಂದರೆ ಬ್ಯಾಕ್ಟೀರಿಯಾ ಅಥವಾ ವೈರಸ್‌) ಗುರುತಿಸುವುದು ಅಸಾಧ್ಯವಾಗುತ್ತದೆ. ಪತ್ತೆಯಾಗುವ ರೋಗಾಣುವು ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಸ್ಟ್ರೆಪ್ಟೋಕಾಕ್ಕಸ್‌ ನ್ಯುಮೋನಿಯೆ ಆಗಿರುತ್ತದೆ

ಇನ್ನಿತರ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ನ್ಯುಮೋನಿಯಾ ಉಂಟು ಮಾಡುತ್ತವೆ. ಮೈಕೋಪ್ಲಾಸ್ಮಾ ನ್ಯುಮೋನಿಯೆ ರೋಗಾಣುನಿಂದ ಉಂಟಾಗುವ ನ್ಯುಮೋನಿಯಾವು ಸಾಧಾರಣವಾಗಿ ಸೌಮ್ಯವಾಗಿರುತ್ತದೆ ಮತ್ತು ಇದನ್ನು ವಾಕಿಂಗ್‌ ನ್ಯುಮೋನಿಯಾ ಎಂದು ಕರೆಯುತ್ತಾರೆ.

ಇನ್‌ ಫ್ಲೂಯೆಂಜಾ ಎ (ಫ್ಲೂ ವೈರಸ್‌) ಮತ್ತು ರೆಸ್ಪಿರೇಟರಿ ಸಿನ್ಸಿಟಿಯಲ್‌ ವೈರಸ್‌ಗಳೂ ಸಹ ನ್ಯುಮೋನಿಯಾವನ್ನು ಹರಡುತ್ತವೆ.

ದೇಹದ ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಶಿಲೀಂಧ್ರಗಳಂತಹ ಇನ್ನಿತರ ರೋಗಾಣುಗಳಿಂದಲೂ ಸಹ ನ್ಯುಮೋನಿಯಾ ಕಾಣಿಸಿಕೊಳ್ಳಬಹುದು. ನ್ಯೂಮೋಸಿಸ್ಟಿಸ್‌ ಜಿರೋವೆಸಿ (ಇದನ್ನು ನ್ಯೂಮೋಸಿಸ್ಟಿಸ್‌ ಕ್ಯಾರಿನಿ ಎಂದೂ ಸಹ ಕರೆಯುತ್ತಾರೆ) ಎಂಬ ಶಿಲೀಂಧ್ರವು ಹೆಚ್ಚಾಗಿ ಏಡ್ಸ್‌ ಪೀಡಿತರಲ್ಲಿ ನ್ಯುಮೋನಿಯಾ ಉಂಟು ಮಾಡುತ್ತದೆ. ಯಾರಲ್ಲಾದರೂ ನ್ಯೂಮೋಸಿಸ್ಟಿಸ್‌ ಜಿರೋವೆಸಿ ಕಾರಣದಿಂದ ನ್ಯುಮೋನಿಯಾ ಉಂಟಾಗಿದ್ದರೆ, ಕೆಲವು ವೈದ್ಯರುಗಳು ಅಂತಹವರಿಗೆ ಎಚ್‌ಐವಿ ಪರೀಕ್ಷೆಯನ್ನು ಸೂಚಿಸುತ್ತಾರೆ.

ತಡೆಗಟ್ಟುವುದು ಹೇಗೆ?

1. ರೋಗಿಗಳು ಬಳಸಿದ ಕರವಸ್ತ್ರ ಟವೆಲುಗಳನ್ನು ಬಳಸಬಾರದು.

2. ಕೆಮ್ಮ, ಜೊಲ್ಲುರಸ, ಸಿಂಬಳ, ಸೀನು ಇತ್ಯಾದಿಗಳಿಂದ ಜೀವಕಣಗಳು ಹರಡುವ ಸಾಧ್ಯ್ಯತೆ ಹೆಚ್ಚಾಗಿರುತ್ತದೆ ಇವುಗಳಿಂದ ದೂರವಿರಬೇಕು.

3. ರೋಗಿಗಳು ಬಳಸಿದ ಬಟ್ಟೆ, ತಟ್ಟೆ, ಲೋಟ, ಬಟ್ಟಲು, ಚಮಚ ಇತ್ಯಾದಿಗಳನ್ನು ಬಳಸಬಾರದು. ರೊಗಿಗಳು ಬಳಸಿದ ಈ ಪರಿಕರಗಳನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯತಕ್ಕದ್ದು.ಸಾಮಾನ್ಯವಾಗಿ ವೈರಸ್ ನ್ಯೂಮೋನಿಯ ಅತಿಯಾದ ಸಾಂಕ್ರಾಮಿಕ ರೋಗವಾಗಿದ್ದು ರೋಗಿಯನ್ನು ಬೇರೆಯಾದ ಕೋಣೆಯಲ್ಲಿರಿಸಿ ಇತರರಿಗೆ ರೋಗ ಹರಡದಂತೆ ಮುಂಜಾಗರೂಕತೆ ವಹಿಸಲಾಗುತ್ತದೆ.

ಮುಕ್ತಾಯಕ್ಕೆ ಮುನ್ನನ್ಯೂಮೋನೀಯ ಬಹಳ ಸಾಮಾನ್ಯವಾದ ಖಾಯಿಲೆ ಎಂದು ಮೂಗು ಮುರಿಯುವುದು ತಪ್ಪಾಗುತ್ತದೆ. ರೋಗಿಯ ದೇಹ ಪ್ರಕೃತಿ ರೋಗ ನಿರೋಧಕ ಶಕ್ತಿ ಯಾವ ರೋಗಾಣು ಕಾರಣದಿಂದಾಗಿ ನ್ಯೂಮೊನೀಯ ಉಂಟಾಗಿದೆ ಎಂಬುದನ್ನು ತಿಳಿದು ಕೊಂಡು ಸೂಕ್ತ ಚಿಕ್ಸಿತೆ ನೀಡಬೇಕಾಗುತ್ತದೆ. ಬರೀ ಜ್ವರ, ಶೀತ, ಕೆಮ್ಮು, ನೆಗಡಿ ಎಂದು ನಿರ್ಲಕ್ಷಿದಲ್ಲಿ ರೋಗವನ್ನು ಅಲಕ್ಷಿದಲ್ಲಿ ಅಪಾಯ ಕಟ್ಟಿಟ ಬುತ್ತಿ. ಎಲ್ಲಾ ರೀತಿಯ ನ್ಯೂಮೋನಿಯ ಮಾರಣಾಂತಿಕವಲ್ಲದಿದ್ದರೂ ಕೆಲವೊಮ್ಮೆ ಮಾರಣಾಂತಿಕವಾಗುವ ಸಾಧ್ಯತೆ ಇಲ್ಲವೆಂದಿಲ್ಲ. ಚಿಕಿತ್ಸೆ ಸರಿಯಾಗಿ, ಸರಿಯಾದ ಸಮಯದಲ್ಲಿ ನೀಡದಿದ್ದಲ್ಲಿ ಶ್ವಾಸಕೋಶದೊಳಗೆ ಕೀವು ತುಂಬಿಕೊಂಡು ಘನೀಕರಣಗೊಂಡು ಶ್ವಾಸಕೋಶದ ಆ ಭಾಗ ಜಡಗೊಂಡು ನಿಷ್ಕ್ರಿಯವಾಗಬಹುದು ಮತ್ತು ಶ್ವಾಸಕೋಶದ ಆ ಭಾಗ ಶಾಶ್ವತವಾಗಿ ಶಿಥಿಲವಾಗಬಹುದು ಮತ್ತು ಇದರಿಂದಾಗಿ ಉಸಿರಾಟದ ತೊಂದರೆ ಮತ್ತಷ್ಟು ಉಲ್ಬಣವಾಗಬಹುದು. ಆರಂಭಿಕ ಹಂತದಲ್ಲಿಯೇ ರೋಗದ ಪ್ರಾಥಮಿಕ ಲಕ್ಷಣಗಳನ್ನು ಗುರುತಿಸಿ ಸಕಾಲದಲ್ಲಿ ತಜ್ಞ ವೈದ್ಯರ ಬಳಿ ಸೂಕ್ತಚಿಕ್ಷಿತೆ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡಲ್ಲಿ ನ್ಯೂಮೋನಿಯ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

Leave a Reply