ಇತ್ತ ಇಡೀ ದೇಶದ ಜನ, ಬ್ರಿಟಿಷರನ್ನು ದೇಶದಿಂದ ಹೊರಟ್ಹೋಗಿ ಎಂದು ಬೀದಿಗಿಳಿದು ಹೋರಾಡುತ್ತಿದ್ದರೆ, ಅತ್ತ ಅದೇ ಬ್ರಿಟಿಷರ ನೆಲದಲ್ಲಿ, 2ನೇ ಮಹಾಯುದ್ಧದ ರಕ್ತಪಾತದ ಹೊತ್ತಲ್ಲಿ, ನರರಕ್ಕಸ ಹಿಟ್ಲರನ ವಿರುದ್ಧ ಸೆಣಸಲು ನಮ್ಮ ಮೈಸೂರಿನ ಹುಡುಗಿ ಬ್ರಿಟಿಷ್ ಸೇನೆ ಸೇರಲು ಲಂಡನ್ನ ವೆಸ್ಟ್ಮಿನ್ಸ್ಟರ್ ರೋಡ್ನಲ್ಲಿದ್ದ ವಾರ್ ಆಫೀಸ್ನ ಬಿಳಿಯ ಅಧಿಕಾರಿ ಎದುರು ಕುಳಿತಿದ್ದಳು..!
ಹೌದು, ಇಪ್ಪತ್ತರ ಆಸುಪಾಸಿನ, ಹರೆಯ ತುಳುಕುತ್ತಿದ್ದ, ಅತಿಸುಂದರ ಹುಡುಗಿ, ನಮ್ಮವಳು…
ಎದುರು ಕುಳಿತಿದ್ದವನು ಬ್ರಿಟಿಷ್ ಸೇನಾಧಿಕಾರಿ, ಈ ಹುಡುಗಿ ಸೇರಬಯಸಿದ್ದು ಬ್ರಿಟಿಷ್ ಸೇನೆಯನ್ನು.. ಇಡೀ ಜಗತ್ತು ಎರಡು ಪಕ್ಷವಾಗಿ, ಕದನಕ್ಕೆ ನಿಂತ ಮನುಕುಲದ ಮಹಾ ವಿಪತ್ತಿನ ಹೊತ್ತು… ಅವಳೊಳಗೆ ಜಗತ್ತನ್ನು ದುಸ್ವಪ್ನದಂತೆ ಕಾಡುತ್ತಿರುವ ಸರ್ವಾಧಿಕಾರಿ ಹಿಟ್ಲರನ ಹೆಡೆಮುರಿ ಕಟ್ಟುವ ಕನಸು..
ಆದರೆ ಸಂದರ್ಶನ ನಡೆಸಿದ್ದ ಆ ಅಧಿಕಾರಿ ಈ ಹುಡುಗಿಯ ಹಿನ್ನೆಲೆ ತಿಳಿದು ನೇರವಾಗಿ ಕೇಳಿದ್ದ.. ‘ನೀನು ಭಾರತದವಳು.. ಈಗ ಬ್ರಿಟಿಷ್ ಸೇನೆಯ ಬೇಹುಗಾರಿಕಾ ಪಡೆ ಸೇರಲು ಬಂದಿದ್ದೀಯೆ.. ಆದರೆ ಅಲ್ಲಿ ಭಾರತದಲ್ಲಿ ಇಡೀ ದೇಶ ನಮ್ಮ ವಿರುದ್ಧ ಎದ್ದುನಿಂತಿದೆ.. ನೀನು ನಮ್ಮ ಪರ ನಿಲ್ಲುತ್ತೀಯೋ ಅಥವಾ ನಮ್ಮ ವಿರುದ್ಧ ಹೋರಾಡುತ್ತಿರುವ ಭಾರತದ ನಾಯಕರ ಪರ ನಿಲ್ಲುತ್ತೀಯೋ..?’
ಇಂಥ ಪ್ರಶ್ನೆಯನ್ನು ಆಕೆ ನಿರೀಕ್ಷಿಸಿರಲಿಲ್ಲ… ಆದರೆ ಉತ್ತರಿಸಿದಳು..-‘ಹೌದು, ನಾನು ಭಾರತೀಯಳು.. ನನಗೆ ನನ್ನ ದೇಶ ಹೊರಗಿನವರಿಂದ ಮುಕ್ತಿ ಪಡೆಯುವುದು ಮುಖ್ಯ.. ಆದರೆ ಈ ಹೊತ್ತಲ್ಲಿ ನಾನು ಇಡೀ ಜಗತ್ತನ್ನು ಕಾಡುತ್ತಿರುವ ನರರಾಕ್ಷಸರ ವಿರುದ್ಧ ಬ್ರಿಟಿಷರ ಪರ ಹೋರಾಡುತ್ತೇನೆ.. ಈ ಮಹಾ ಯುದ್ಧದಲ್ಲಿ ಸತ್ಯ ಗೆಲ್ಲುತ್ತದೆಂಬ ವಿಶ್ವಾಸವಿದೆ.. ಆ ಬಳಿಕ ನಿಜಕ್ಕೂ ನಾನು ಭಾರತಕ್ಕೆ ತೆರಳುತ್ತೇನೆ. ಬ್ರಿಟಿಷರ ವಿರುದ್ಧ ಭಾರತದ ಪರ ಹೋರಾಡುತ್ತೇನೆ..’
ಕೆಲಸ ಕೇಳಿ ಹೋದವಳು ಆ ದೇಶದ ವಿರುದ್ಧವೇ ಮಾತನಾಡಿದ್ದಳು… ನಮ್ಮ ಮೈಸೂರಿನ ಹುಡುಗಿ…
ಸಂದರ್ಶನ ಮುಗಿಸಿ ಆ ಮಧ್ಯಾಹ್ನ ನೇರ ಆಕ್ಸ್ಫರ್ಡ್ನಲ್ಲಿದ್ದ ತನ್ನ ಮನೆಯ ಸಮೀಪದ ಪಾರ್ಕ್ಗೆ ಬಂದಿದ್ದಳು.. ಅಲ್ಲಿ ಜೇನಿನಂಥ ಮನಸ್ಸಿನ ಗೆಳತಿ ಜೇನ್ ಓವರ್ಟನ್ ಫುಲ್ಲರ್ಗೆ ಎಲ್ಲವನ್ನೂ ವಿವರಿಸಿದ್ದಳು.. ತನಗೆ ಈ ಕೆಲಸ ಸಿಗಲಾರದು ಎಂದೂ ಹೇಳಿದ್ದಳು…
ಆದರೆ ಕೆಲಸ ಸಿಕ್ಕಿತ್ತು… 2ನೇ ಮಹಾಯುದ್ಧದಲ್ಲಿ ಅವಳು ಬ್ರಿಟಿಷ್ ಸೇನೆಯ ಫ್ರೆಂಚ್ ಸೆಕ್ಷನ್ನ ಮೊತ್ತ ಮೊದಲ ಮಹಿಳಾ ಬೇಹುಗಾರ್ತಿಯಾಗಿ ಜರ್ಮನ್ ಆಕ್ರಮಿತ ಫ್ರಾನ್ಸ್ನಲ್ಲಿ ಹಿಟ್ಲರನ ಪಡೆಗಳ ವಿರುದ್ಧ ರಹಸ್ಯವಾಗಿ ಕಾರ್ಯಾಚರಣೆಗಿಳಿದು, ತನ್ನದಲ್ಲದ ತಪ್ಪಿಗೆ ಸೆರೆ ಸಿಕ್ಕು ಹಲವು ತಿಂಗಳ ಕರಾಳ ಜೈಲುವಾಸದ ಬಳಿಕ ಡಕಾವೋದ ಯಾತನಾ ಶಿಬಿರದಲ್ಲಿ ಅತ್ಯಂತ ಕ್ರೂರ ರೀತಿಯಲ್ಲಿ ಹುತಾತ್ಮಳಾದಳು…
ಅವಳಿಗೆ ಬ್ರಿಟನ್ ಸರ್ಕಾರ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇದನ್ನೆಲ್ಲಾ ಅಂದು ಅವಳನ್ನೇ ಖುದ್ದು ಭೇಟಿಯಾಗಿದ್ದ ಗೆಳತಿ ಜೇನ್ ದೊಡ್ಡ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.(ಅಮೆಜಾನ್ನಲ್ಲಿ ಆ ಪುಸ್ತಕಕ್ಕೆ 75 ಸಾವಿರ ರೂ.!)
ಅವಳ ತಂದೆ ಲಂಡನ್ನಲ್ಲಿ ದುಂಡು ಮೇಜಿನ ಸಭೆಗೆ ಬಂದಿದ್ದ ಗಾಂಧಿಯನ್ನು ಭೇಟಿಯಾಗಿದ್ದರು.. ಲಂಡನ್ನಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ವರದಿಗಳಿದ್ದ, ಗುಪ್ತವಾಗಿ ಪ್ರಕಟವಾಗುತ್ತಿದ್ದ ಪತ್ರಿಕೆಯನ್ನು ಈಕೆ ಓದುತ್ತಿದ್ದಳು.. ನೆಹರೂ ಜೀವನಚರಿತ್ರೆ ಪುಸ್ತಕವನ್ನು ಪೂರ್ತಿಯಾಗಿ ಓದಿಕೊಂಡಿದ್ದಳು.. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆಂದೇ ತಂದೆಯ ಜೊತೆ ತಾನು ಲಂಡನ್ನಲ್ಲಿ ಹಿಂದೂಸ್ತಾನಿ, ಕರ್ನಾಟಕೀ ಶಾಸ್ತ್ರೀಯ ಸಂಗೀತ ಕಚೇರಿ ಏರ್ಪಡಿಸಿ ದುಡ್ಡು ಸಂಗ್ರಹಿಸಿ ಕೊಟ್ಟಿದ್ರು…
ಈ ಹುಡುಗಿ ನೂರ್ ಇನಾಯತ್ ಖಾನ್.. ಬುದ್ಧನ ಜಾತಕ ಕತೆಗಳ ದೊಡ್ಡ ಪ್ರೇಮಿ.. ಸೀರೆಯುಟ್ಟು, ತಲೆ ಮೇಲೆ ಮೆಲ್ಲನೆ ಪರದೆ ಇಳಿಬಿಟ್ಟು ಕುಳಿತು ವೀಣೆ ಹಿಡಿದರೆ ಥೇಟ್ ವೀಣಾಪಾಣಿ ಶಾರದೆಯಂತೆಯೇ ಕಾಣುವಳು.. ಅವಳ ತಾಯಿಗೆ ತಂದೆಯಿಟ್ಟ ಹೆಸರೂ ಶಾರದೆಯೆಂದು… ತಂದೆ ಸೂಫಿ ಸಂತ ಹಝ್ರತ್ ಇನಾಯತ್ ಖಾನ್ಗೆ ರಾಮಕೃಷ್ಣ ಪರಮಹಂಸರ ಮೇಲೆ ವಿಶೇಷ ಗೌರವ.. ಅದೇ ಕಾರಣಕ್ಕೆ ಪರಮಹಂಸರ ಪತ್ನಿ ಶಾರದಾ ಮಾತೆಯ ನೆನಪಿಗೆ ಪತ್ನಿಗೆ ಶಾರದಾ ಅಮೀನಾ ಬೇಗಂ ಎಂದೇ ಹೆಸರಿಟ್ಟಿದ್ದರು.. ಅಮೀನಾ ಬೇಗಂ ಅಮೆರಿಕ ಮೂಲದವಳು.. ಇನಾಯತ್ ಖಾನ್ ಪ್ಯಾರಿಸ್ನಲ್ಲಿ ಜಗತ್ತಿನ ಎಲ್ಲಾ ಧರ್ಮಗಳ ಪ್ರಾರ್ಥನಾ ಪದ್ಧತಿಯನ್ನು ಒಳಗೊಂಡ ಯೂನಿವರ್ಸಲ್ ವರ್ಶಿಪ್ -ವಿಶ್ವದೇಗುಲವನ್ನು ಕಟ್ಟಿದ್ದರು! ಇನಾಯತ್ ಖಾನ್ ತಂದೆ ದೊಡ್ಡ ಗಾಯಕ ಅಲ್ಲಾ ಭಕ್ಷ್.. ಅವರ ಅಜ್ಜ ಟಿಪ್ಪು ಸುಲ್ತಾನ್…!
ಚರಿತ್ರೆಯ ನೋಟವಿದೆ, ನೋಡುವ ಕಣ್ಣುಗಳಲ್ಲಿ, ಇಣುಕುವ ಏದೆಯ ಕಿಂಡಿಗಳಲ್ಲಿ…!!
ಲೇಖಕರು : ಚಂದ್ರಶೇಖರ್ ಮಂಡೆಕೋಲು