ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಪ್ರೇಮ ಪ್ರಸಂಗ ಇದೀಗ ಕೇರಳದಲ್ಲಿ ವೈರಲ್ ಆಗಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ಕಾರಣಾಂತರಗಳಿಂದ ಪರಸ್ಪರ ಬೇರ್ಪಟ್ಟಿದ್ದ ದಂಪತಿ ಇದೀಗ 72 ವರ್ಷಗಳ ನಂತರ ಒಂದಾಗಿದ್ದಾರೆ. ತನ್ನ ಪತ್ನಿಯಿಂದ ಬೇರ್ಪಟ್ಟಿದ್ದ 90ರ ವೃದ್ದರೊಬ್ಬರು 72 ವರ್ಷಗಳ ನಂತರ ಆಕೆಯನ್ನು ಭೇಟಿ ಮಾಡಿದ ಬಹಳ ಅಪರೂಪದ ಸಮ್ಮಿಲನದ ಸಂಗತಿ ಕೇರಳದಲ್ಲಿ ನಡೆದಿದೆ. ಇ.ಕೆ. ನಾರಾಯಣನ್ ನಂಬಿಯಾರ್ (93) ಮತ್ತು ಶಾರದಾ(89) ಈ ವಾಸ್ತವ ಪ್ರೇಮ ಪ್ರಸಂಗ ಪ್ರೀತಿ-ಪ್ರೇಮ, ಸರಸ-ವಿರಸ, ದುಃಖ-ದುಗುಡ, ದೀರ್ಘ ಅಗಲಿಕೆ ಹೀಗೆ ಹತ್ತು ಹಲವು ವಿದ್ಯಮಾನಗಳನ್ನು ಒಳಗೊಂಡಿದೆ.

ನಾರಾಯಣನ್ ನಂಬಿಯಾರ್ ಮತ್ತು ಶಾರದಾ ಅವರ ಪ್ರೇಮ ಕಥೆ 1946 ರಲ್ಲಿ ಪ್ರಾರಂಭವಾಯಿತು ಮತ್ತು ಅದೇ ವರ್ಷ ಕೊನೆಗೊಂಡಿತು. 1946ರಲ್ಲಿ ನಾರಾಯಣನ್ ಮತ್ತು ಶಾರದಾ ವಿವಾಹ ನಡೆದಿತ್ತು. ಆಗ ನಾರಾಯಣನ್ ಅವರಿಗೆ 18 ವರ್ಷ ಮತ್ತು ಶಾರದಾ ಅವರಿಗೆ 13 ವರ್ಷ. ಸುಮಾರು ಎಂಟು ತಿಂಗಳುಗಳ ಕಾಲ ಇವರು ಪರಸ್ಪರ ಸತಿಪತಿಯಾಗಿ ಪ್ರೀತಿಸಿದ್ದರು. ಆದರೆ ವಿಧಿಯು ಇವರಬ್ಬರನ್ನು ಬೇರ್ಪಡುವಂತೆ ಮಾಡಿತು.

ನಾರಾಯಣನ್ ರವರ ಅಪ್ಪ ತಳಿಯನ್ ರಾಮನ್ ನಂಬಿಯಾರ್ ಕಾವುನ್ಬಾಯಿ ಹೋರಾಟ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಈ ಚಳುವಳಿಯಲ್ಲಿ ಊಳಿಗಮಾನ್ಯರ ಹಿತಾಸಕ್ತಿಗಳನ್ನು ರಕ್ಷಿಸಲು ಬ್ರಿಟಿಷ್ ವಸಾಹತು ಶಾಹಿ ಪೊಲೀಸ್ ವ್ಯವಸ್ಥೆ ಮಲಬಾರ್ ಸ್ಪೆಶಲ್ ಪೋಲಿಸ್ (ಎಂಎಸ್ಪಿ) ಕಾರ್ಯಾಚರಿಸುತ್ತಿತ್ತು. ಒಂದು ಹೋರಾಟದ ವೇಳೆ ಪೋಲೀಸರ ಮತ್ತು ಹೋರಾಟಗಾರ ಮಧ್ಯೆ ಸಂಘರ್ಷ ಏರ್ಪಟ್ಟು ಕೆಲವು ಹೋರಾಟಗಾರರು ಬಲಿಯಾದರೆ ನಾರಾಯಣನ್ ಮತ್ತು ಅವರ ಅಪ್ಪ ಭೂಗತರಾದರು. ಈ ಮಧ್ಯೆ 1946 ರ ಡಿಸೆಂಬರ್ 31 ರಂದು, ಎಂಎಸ್ಪಿ ಪೋಲೀಸರ 60 ಸದಸ್ಯರು ನಾರಾಯಣನ್ ಪತ್ನಿ ಶಾರದಾ ಮನೆಗೆ ಬಂದು ಅವರ ಸುಳಿವು ಪಡೆಯಲು ಹೋಗಿ ಕಿರುಕುಳ ನೀಡುತ್ತಿದ್ದರು. ಒಂದೊಮ್ಮೆ ಮನೆಯ ಸಾಮಾನುಗಳನ್ನು ಹೊರಗೆಸೆದು ಮನೆಗೆ ಬೆಂಕಿಯನ್ನೂ ಕೊಟ್ಟಿದ್ದರು. ನಾರಾಯಣನ್ ಮರಳಿ ಬರುವ ಸುಳಿವು ಇಲ್ಲದಾಗ ಅವರ ತಾಯಿ ಶಾರದಾರನ್ನು ತವರು ಮನೆಗೆ ಕಳುಹಿಸಿದರು. ಅಲ್ಲಿ ಮನೆಯವರು ಶಾರದಾರಿಗೆ ಬೇರೆ ಮದುವೆ ಮಾಡಿಸಿದರು.

ಇತ್ತ ನಾರಾಯಣನ್ ಮತ್ತು ಅವರ ಅಪ್ಪನನ್ನು ಪೊಲೀಸರು ಹಿಡಿದು ಜೈಲಿಗೆ ಹಾಕಿದರು. ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂದು ನಾರಾಯಣನ್ ತಂದೆವನ್ನು ಜೈಲ್ನಲ್ಲಿ ಗುಂಡಿಟ್ಟು ಕೊಲ್ಲಲಾಯಿತು. ಸುಮಾರು ಎಂಟು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರ ಬಂದಾಗ ತನ್ನ ಪತ್ನಿ ಬೇರೊಂದು ಮದುವೆ ಆಗಿರುವುದು ನಾರಾಯಣನ್ ರವರಿಗೆ ತಿಳಿಯುತ್ತದೆ. ನಂತರ ಅವರೂ ಬೇರೊಂದು ಮದುವೆ ಆಗುತ್ತಾರೆ.

ಶಾರದಾರವರ ಮಗ ಭಾರ್ಗವನ್ ಒಮ್ಮೆ ಅಚಾನಕ್ಕಾಗಿ ನಾರಾಯಣನ್ ರವರ ಕುಟುಂಬಿಕರನ್ನು ಭೇಟಿಯಾದಾಗ ಹಿಂದಿನ ವೃತ್ತಾಂತ ಎಲ್ಲವನ್ನೂ ತಿಳಿದು ಕೊಂಡರು. ಅವರು ವಿಧಿಯ ಲೀಲೆಗೆ ಗುರಿಯಾಗಿ ಪರಸ್ಪರ ಬೇರ್ಪಟ್ಟವರನ್ನು ಮತ್ತೆ ಭೇಟಿ ಮಾಡುವ ಅವಕಾಶ ಕಲ್ಪಿಸಿದರು.

ಶಾರದಾರ ಪತಿ ಮೂವತ್ತು ವರ್ಷ ಹಿಂದೆ ತೀರಿ ಹೋಗಿದ್ದಾರೆ. ಶಾರದಾರನ್ನು ನೋಡಲು ನಾರಾಯಣನ್ ಪರಶಿನಿಕಡವ್ ನಲ್ಲಿರುವ ಮನೆಗೆ ಬಂದರು. ಮೊದಲಿಗೆ ಶಾರದಾ ತನ್ನ ಮೊದಲ ಪತಿಯನ್ನು ಭೇಟಿಯಾಗಲು ನಾಚಿದರು. ನಂತರ ಒತ್ತಾಯದ ಮೇರೆಗೆ ತನ್ನ ಮೊದಲ ಪತಿ ನಾರಾಯಣನ್ ರವರ ಬಳಿ ಬಂದು ಕೂತರು. ಇಬ್ಬರೂ ಏನೂ ಮಾತನಾಡದೆ ಸುಮ್ಮನಿದ್ದು ಭಾವುಕರಾಗಿದ್ದರು. ನಾರಾಯಣನ್ ಮುಂದೆ ಅದೇ 13 ವರ್ಷದ ಪುಟ್ಟ ಹೆಣ್ಮಗಳಂತೆ ಶಾರದಾ ನಾಚಿ ಕೂತಿದ್ದರು. ಶಾರದಾರಿಗೆ ಈಗ ಆರು ಮಕ್ಕಳು. ಅದರಲ್ಲಿ ನಾಲ್ವರು ಬದುಕುಳಿದಿದ್ದಾರೆ.

ನೀನು ಯಾಕೆ ಏನೂ ಮಾತನಾಡುತ್ತಿಲ್ಲ ಸುಮ್ಮನಿದ್ದಿ ಎಂದು ನಂಬಿಯಾರ್ ಕೇಳಿದಾಗ ಶಾರದಾ ನನಗೆ ಯಾರ ಮೇಲೂ ಸಿಟ್ಟಿಲ್ಲ ಎಂದು ಭಾವುಕರಾದರು. ಎರಡೂ ಕುಟುಂಬಗಳು ಪರಸ್ಪರ ಸಂಪರ್ಕದಲ್ಲಿರಲು ಬಯಸಿದೆ. ನಂಬಿಯಾರ್ ಶಾರದಾರ ತಲೆಗೆ ಕೈಯಿಟ್ಟು ಸಂತೈಸುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ.

Leave a Reply