ಪಾಟ್ನಾ : ಹೆತ್ತವರು ಮಕ್ಕಳನ್ನು ಹೆತ್ತು ಹೊತ್ತು ಸಾಕಿ ಸಲಹಿ ಒಂದು ರೀತಿಯಲ್ಲಿ ಅವರ ಭವಿಷ್ಯ ರೂಪಿಸುತ್ತಾರೆ. ಆದರೆ ಅದೇ ಹೆತ್ತವರು ವೃದ್ಧಾಪ್ಯಕ್ಕೆ ತಲಪಿದಾಗ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳಿಂದಲೇ ಚಿತ್ರಹಿಂಸೆ ಸಹಿಸಬೇಕಾಗುತ್ತದೆ. ವೃದ್ಧಾಶ್ರಮಕ್ಕೆ ಅಟ್ಟಲಾಗುತ್ತದೆ. ಆಸ್ತಿ ಕಬಳಿಸಿ ಬೀದಿ ಪಾಲು ಮಾಡಲಾಗುತ್ತದೆ. ಇದೀಗ ಇಂತಹ ವೃದ್ಧ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳಿಗೆ ಬಿಹಾರ ಸರಕಾರದಿಂದ ಎಚ್ಚರಿಕೆಯ ಸಂದೇಶ ಬಂದಿದೆ.

ತಂದೆ-ತಾಯಿಗಳ ಸೇವೆ ಸಲ್ಲಿಸದೆ ಅವರಿಗೆ ಚಿತ್ರಹಿಂಸೆ ನೀಡುವ ಮಕ್ಕಳಿಗೆ ಜೈಲು ಶಿಕ್ಷೆ ವಿಧಿಸಲು ಬಿಹಾರ್ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಬಿಹಾರದಲ್ಲಿರುವ ಮಕ್ಕಳು ಒಂದು ವೇಳೆ ತಮ್ಮ ತಂದೆ-ತಾಯಿಗಳ ಸೇವೆ ಮಾಡದಿದ್ದರೆ ಅವರಿಗೆ ಜೈಲಾಗುವ ಸಾಧ್ಯತೆ ಇದ್ದು, ತಂದೆ-ತಾಯಿಗಳು ದೂರು ನೀಡಿದ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು.

ಹೆತ್ತವರಿಗೆ ಕಿರುಕುಳ ನೀಡುವವರು ಮತ್ತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೇ ಇರುವ ಮಕ್ಕಳಿಗೆ ಶಿಕ್ಷೆ ಖಚಿತ ಪಡಿಸಿಕೊಳ್ಳಲು ಸರ್ಕಾರವು ಇಂತಹ ಕ್ರಮಗಳನ್ನು ಜಾರಿಗೊಳಿಸಸುವ ತೀರ್ಮಾನ ಕೈಗೊಂಡಿದೆ. ಒಂದು ವೇಳೆ ಮಕ್ಕಳ ಮೇಲೆ ಪ್ರಕರಣ ದಾಖಲಾದರೆ ಜಾಮೀನು ರಹಿತ ಕೇಸು ದಾಖಲಾಗುವುದು.

Leave a Reply