ಫೆಬ್ರವರಿ 14 ಬಂದಾಕ್ಷಣ ಸ್ಮೃತಿ ಪಟಲದಲ್ಲಿ ಸುಳಿಯುವುದು ವ್ಯಾಲೆಂಟೈನ್ ಡೇ. ಅದಕ್ಕೆ ಬೇಕಾದ ವಾತಾವರಣವನ್ನು ನಮ್ಮ ಇಂದಿನ ಮಾಧ್ಯಮಗಳು ರೂಪಿಸುತ್ತಿವೆ. ಅದರಲ್ಲೂ ದೃಶ್ಯ ಮಾಧ್ಯಮಗಳು ಒಂದು ಹೆಜ್ಜೆ ಮುಂದೆಯೇ. ಅದಕ್ಕೆ ಪೂರಕವಾದ ಸಿನೆಮಾಗಳೂ, ಧಾರವಾಹಿಗಳೂ ರಚಿಸಲ್ಪಡುತ್ತವೆ.

ಮೂರನೇ ಶತಮಾನದಲ್ಲಿ ರೋಮ್‍ನಲ್ಲಿದ್ದ ಓರ್ವ ಸಂತ ಈ ವ್ಯಾಲೆಂಟೈನ್. ಅಂದು ರೋಮನ್ನರನ್ನು ಆಳುತ್ತಿದ್ದ ಕ್ಲಾಡಿಯಸ್ ಅಧಿಕಾರ ಮತ್ತು ಯುದ್ಧದ ಲಾಲಸೆಯಿಂದಾಗಿ ಯುವಕರನ್ನು ತನ್ನ ವ್ಯವಸ್ಥೆ ತೊಡಗಿಸಿ ಕೊಳ್ಳಲಿಕ್ಕಾಗಿ ಹೊಸ ಕಾನೂನೊಂದನ್ನು ಜಾರಿಗೆ ತಂದ. ಅಂದರೆ ಈ ಕಾನೂನಿನ ಪ್ರಕಾರ ಇನ್ನು ಮುಂದೆ ಯಾರೂ ಮದುವೆಯಾಗಬಾರದು. ಯುವಕರಿಗೆ ಮದುವೆಯನ್ನು ನಿರಾಕರಿಸಲಾಗಿತ್ತು. ಯಾವ ಮದುವೆಯಿಂದ ಕುಟುಂಬ ಬೆಳೆದು ಭದ್ರ ಸಮಾಜ ರೂಪು ತಾಳುತ್ತದೋ ಅದೇ ಮದುವೆಯೆಂಬ ಪ್ರಾಕೃತಿಕ ಮತ್ತು ನೈಸರ್ಗಿಕ ವ್ಯವಸ್ಥೆಗೆ ಕ್ಲಾಡಿಯಸ್ ಸಮಾಧಿ ಕಟ್ಟಲು ತೀರ್ಮಾನಿಸಿದ್ದನು. ಆದರೆ ಸಂತ ವ್ಯಾಲೆಂಟೈನ್ ಇದನ್ನು ವಿರೋಧಿಸಿದ. ಮದುವೆಯಾಗ ಬಯಸುವವರನ್ನು ಗುಪ್ತವಾಗಿ ಮದುವೆ ಮಾಡಿಸಲು ಪ್ರಾರಂಭಿಸಿದ. ರಾಜನಿಗೆ ಈ ವಿಷಯ ತಿಳಿದು ವ್ಯಾಲೆಂಟೈನ್‍ನನ್ನು ಸೆರೆಮನೆಗೆ ತಳ್ಳಿ ಶಿರಚ್ಛೇದನ ಮಾಡಿಸಿದ. ವಿವಾಹವೆಂಬ ಪವಿತ್ರ ಸಂಬಂಧದಿಂದಲೇ ನೈತಿಕತೆಯು ಜನ್ಮ ಪಡೆಯುತ್ತದೆ ಮತ್ತು ಅದುವೇ ಅದರ ಅಡಿಪಾಯ ಎಂಬ ಧ್ಯೇಯದ ಪ್ರಚಾರಕ್ಕಾಗಿ ವ್ಯಾಲೆಂಟೈನ್ ಬೆಲೆ ತೆರಬೇಕಾಯಿತು.

ಆದರೆ ದುರದೃಷ್ಟವಶಾತ್ ಇಂದು ಅದರ ಪರಿಕಲ್ಪನೆಯನ್ನು ಮರೆಮಾಚಿ ವ್ಯಾಲೆಂಟೈನ್ ಡೇಯನ್ನು ಒಂದು ಫ್ಯಾಶನ್ ಆಗಿ ಬದಲಾಯಿಸಲಾಗಿದೆ. ಪ್ರೀತಿಗಳು ಬತ್ತಿ ಸ್ವಾರ್ಥ ಹೃದಯಗಳು ಬೆಳೆದು ಬಂದಾಗ ಅದಕ್ಕಾಗಿ ಒಂದು ದಿನವನ್ನು ವಿೂಸಲಿಡುವುದು ಮೂರ್ಖತನವಾಗಿದೆ.

ಪ್ರೀತಿಯು ನೈತಿಕ ಬುನಾದಿಯ ಮೇಲೆ ಮತ್ತು ನಿಸ್ವಾರ್ಥವಾಗಿದ್ದರೆ ಮಾತ್ರ ಅದು ದಡಸೇರುತ್ತದೆ. ಅನೈತಿಕ ಪ್ರೀತಿ ಸಂಬಂಧಗಳು ಭಾವನಾತ್ಮಕವಾಗಿ ಮೇಲ್ನೋಟಕ್ಕೆ ಮುದ ನೀಡುತ್ತದಾದರೂ ಪ್ರಾಯೋಗಿಕ ಜೀವನಕ್ಕೆ ಬರುವಾಗ ಅದು ಹೆಚ್ಚು ದುರಂತವನ್ನೇ ತಂದು ಕೊಡುತ್ತದೆ. ಅಂಕಿ ಅಂಶಗಳು ಇದನ್ನೇ ಸೂಚಿಸುತ್ತವೆ. ಹುಟ್ಟಿಸಿ, ಸಾಕಿ ಸಲಹಿದ ತಂದೆ, ತಾಯಿ, ಒಡಹುಟ್ಟಿದವರು, ಕುಟುಂಬಿಕರು ಕೆಲವೊಮ್ಮೆ ಕೆಲವು ದಿನಗಳ ಹುಚ್ಚು ಪ್ರೀತಿಯು ಮುಂದೆ ನಗಣ್ಯವಾಗುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಇಂಥ ಪ್ರೀತಿಯ ಎಲ್ಲ ಸಂಬಂಧಗಳನ್ನು ಮುರಿದ ಓರ್ವ ಕಲ್ಲು ಹೃದಯಿ ಹುಡುಗಿ/ಹುಡುಗ ಕೆಲ ಸಮಯದ ನಂತರ ಈಕೆ/ಈತನನ್ನು ತ್ಯಾಗ ಮಾಡದಿರಲಾರರು ಎಂಬುದಕ್ಕೆ ಯಾವ ಗ್ಯಾರಂಟಿ? ಆದರೆ ಸಮಾಜದಲ್ಲಿ ಆಗುತ್ತಿರುವುದು ಇದುವೇ. ತಂದೆ ತಾಯಿಗೆ ಸುಳ್ಳು ಹೇಳಿ ಅನೈತಿಕ ಸಂಬಂಧವನ್ನು ಕಲ್ಪಿಸಿದ ಜೋಡಿಯ ಸಂಬಂಧವೂ ಸುಳ್ಳಿನ ಮತ್ತು ಕಲ್ಪನೆಯ ಬುನಾದಿಯ ಮೇಲೆ ಕಟ್ಟಲ್ಪಟ್ಟಿರುತ್ತದೆ. ಈ ಸುಳ್ಳಿನ ಬುನಾದಿಯು ಸಂಶಯವೆಂಬ ಪೆಡಂಭೂತವಾಗಿ ಪರಿಣಮಿಸಿ ನಂತರ ಜೋಡಿಯನ್ನೇ ಛಿದ್ರಿಸುವಲ್ಲಿ ಯಶಸ್ವಿಯಾಗುತ್ತದೆ.

ಪ್ರೀತಿಯು ಹೃದಯಕ್ಕೆ ಮತ್ತು ನೈತಿಕತೆಗೆ ಸಂಬಂಧಿಸಿದ್ದೇ ಹೊರತು ಧೂಳು ಹಿಡಿಯುವ, ಹರಿದು ಹೋಗು ಕಾರ್ಡ್‍ಗೆ ತಾಳೆಯಾಗುವಂತಹದ್ದಲ್ಲ. ಉಡುಗೊರೆಯ ಮಹತ್ವ ಇಲ್ಲಿ ಕಡೆಗಣಿಸುತ್ತಿಲ್ಲ ಆದರೂ ತಾಜ್ ಮಹಲ್ ಅರ್ಪಿಸಲ್ಪಟ್ಟದ್ದು ಪತ್ನಿಗಾಗಿದೆಯೆಂಬುದನ್ನು ಅರ್ಥೈಸಬೇಕು.  ಪ್ರತಿ ಶಾಹಜಹಾನ್ ತಾಜ್‍ಮಹಲ್ ಕಟ್ಟದಿದ್ದರೂ ಪ್ರತಿ ಹೃದಯದಲ್ಲಿ ಒಬ್ಬಳು ಮುಮ್ತಾಝ್ ಇರುತ್ತಾಳೆ. ಆದ್ದರಿಂದ ವ್ಯಾಲೆಂಟೈನ್‍ನನ್ನು ಪ್ರೀತಿಸುತ್ತೀರಿ ಎಂದಾದರೆ ಪ್ರೀತಿ ಪ್ರೇಮ ನೈತಿಕ ಚೌಕಟ್ಟಿನಲ್ಲಿ ಇರಬೇಕು.

 

Leave a Reply