ಉತ್ತರ ಪ್ರದೇಶದ ಮಿರ್ಜಾಪುರದ ಪುಟ್ಟ ಹಳ್ಳಿಯ 49 ವರ್ಷದ ಗೋಪಾಲ್ ಖಂಡೇಲ್ ವಾಲ್ ಕಳೆದ 20 ವರ್ಷಗಳಿಂದ ಗ್ರಾಮದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದಾರೆ. ನಿಜವಾಗಿ ಗೋಪಾಲ್, ವೈದ್ಯರಾಗ ಬಯಸಿದ್ದರು.

ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಗ್ರಾದ ಎಸ್.ಎನ್ ,ಮೆಡಿಕಲ್ ಕಾಲೇಜ್ ನಲ್ಲಿ ದಾಖಲಾತಿ ಆಗಿತ್ತು . ಆದರೆ 22 ವರ್ಷಗಳ ಹಿಂದೆ ಬೈಕ್ ನಲ್ಲಿ ಹೋಗುತ್ತಿದ್ದ ಗೋಪಾಲ್ ರಿಗೆ ಕಾರು ಡಿಕ್ಕಿ ಹೊಡೆದು ಅವರು ಶಾಶ್ವತವಾಗಿ ನಡೆಯದಂತಾದರು. ಅದರಿಂದ ಚೇತರಿಸಿ ಕೊಳ್ಳುವ ಮಧ್ಯೆ ತಾಯಿ ನಿಧನರಾದರು. ಮರಣದ ವೇಳೆ ತಾಯಿ ಹೇಳಿದ ಮಾತು ಅವರ ಮುಂದಿನ ಜೀವನವೇ ಬದಲಾಯಿಸಿತು.
“ನಿನ್ನ ಬಳಿ ಶಿಕ್ಷಣ ಎಂಬ ದೊಡ್ಡ ಆಸ್ತಿ ಇದೆ. ನೀನು ದೊಡ್ಡ ಕೆಲಸ ಮಾಡಿದರೆ ಒಂದು ದಿನ ಜನ ನಿನ್ನ ಕಾಲು ನೋಡದೆ ನಿನ್ನ ಮುಖ ನೋಡುತ್ತಾರೆ” ಎಂದು ಅವರ ತಾಯಿ ಧೈರ್ಯ ತುಂಬಿದ್ದರು. ಈ ಘಟನೆಯ ಬಳಿಕ ನನ್ನ ಜೀವನ ಕಠಿಣ ಆಗಿತ್ತು. ಎಲ್ಲರಿಗೂ ನಾನು ಭಾರವಾಗಿದ್ದೆ. ನನ್ನ ಬದುಕು ಮುಗಿಯಿತು ಎಂದು ಎಲ್ಲರೂ ಭಾವಿಸಿದ್ದರು. ಬಳಿಕ ಅವರ ಸ್ನೇಹಿತ ಡಾ. ಅಮಿತ್ ದತ್ತಾ ಆವರಿಗೆ ಧೈರ್ಯ ತುಂಬಿ ಅವರನ್ನು ತನ್ನ ಗ್ರಾಮ ಪತ್ತಿ ಕಾ ಪುರ್ ಕರೆದು ಕೊಂಡು ಹೋದರು. 1999ರಿಂದ ಗೋಪಾಲ್ ಅಲ್ಲೇ ನೆಲೆಸಿದ್ದಾರೆ. ಅಲ್ಲಿ ಅವರಿಗೆ ಒಂದು ಕೋಣೆಯನ್ನು ಮಾಡಿ ಕೊಟ್ಟರು.

ಕೆಲವು ಸಮಯದ ಬಳಿಕ ಆ ಗ್ರಾಮದ ಮಕ್ಕಳಿಗೆ ಕಲಿಯಲು ಸರಿಯಾದ ವ್ಯವಸ್ಥೆ ಇಲ್ಲ ಎಂದು ಗೋಪಾಲ್ ಮನಗಂಡರು. ತನ್ನ ಅಂಗ ವೈಕಲ್ಯದ ಹೊರತಾಗಿಯೂ ಅಲ್ಲಿನ ಬಡ ಮಕ್ಕಳಿಗೆ ಹಾಸಿಗೆಯಲ್ಲಿ ಮಲಗಿ ಕಲಿಸಲು ತೊಡಗಿದರು. ಅವರು ತನ್ನ ಗುರುಕುಲ ನೋಬಲ್ ಸಂಸ್ಥಾನವನ್ನು ಕೇವಲ ಐದು ವರ್ಷದ ಬಡ ಹುಡುಗಿಯಿಂದ ಶುರು ಮಾಡಿದರು.

ಮೊದಮೊದಲು ಯಾರೂ ಕಲಿಯಲು ಬರುತ್ತಿರಲಿಲ್ಲ. ಬಳಿಕ ಗೋಪಾಲ್ ಅಲ್ಲಿನ ಹೆತ್ತವರಿಗೆ ಶಿಕ್ಷಣದ ಮಹತ್ವವನ್ನು ಮನಗಾಣಿಸಿದರು. ನಂತರ ಗೋಪಾಲ್ ರವರು ಮಾಸ್ಟರ್ ಜೀ ಆಗಿ ಬದಲಾದರು. ಇದುವರೆಗೆ ಅವರು 2, 500 ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಈಗಲೂ ಅದು ಜಾರಿಯಲ್ಲಿದೆ. ಈ ಮಕ್ಕಳೇ ಅವರ ಪರಿವಾರ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಬೇರೆ ಶಿಕ್ಷಣ ಸಂಸ್ಥೆಗೆ ಸೇರಿಸುವ ಕೆಲಸವನ್ನು ಇವರೇ ಮಾಡುತ್ತಾರೆ. ಕೆಲವು ಮಕ್ಕಳಿಗೆ ಫೀಸು ಕಟ್ಟಲು ಕಷ್ಟವಾದರೆ ಸೋಶಿಯಲ್ ಮೀಡಿಯ ಮೂಲಕ ಅವರಿಗೆ ಹಣ ಸಂಗ್ರಹಿಸುತ್ತಾರೆ. ಹೀಗೆ ಈ ವರೆಗೆ ಹಲವಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ತನ್ನಿಂದ ಶಿಕ್ಷಣ ಗಳಿಸಿದ ಮಕ್ಕಳು ಇಂದು ದೇಶದಾದ್ಯಂತ ವಿವಿಧ ಉನ್ನತ ಕೆಲಸಗಳಲ್ಲಿ ಸೇರಿಕೊಂಡಿದ್ದಾರೆ ಎಂದು ಗೋಪಾಲ್ ಹೆಮ್ಮೆಯಿಂದ ಹೇಳುತ್ತಾರೆ.

Leave a Reply