ಮುಂಬೈ: ಆರ್‌ಬಿಐ ತನ್ನ 2017-18ರ ಸಾಲಿನ ವಾರ್ಷಿಕ ವರದಿಯಲ್ಲಿ ಅಮಾನ್ಯಗೊಳಿಸಲಾದ 500 ಮತ್ತು 1000 ರು. ನೋಟುಗಳು ಶೇ.99.3ರಷ್ಟು ಪ್ರಮಾಣದ ನೋಟುಗಳು ಬ್ಯಾಂಕ್‌ ವ್ಯವಸ್ಥೆಗೆ ಮರಳಿ ಬಂದಿವೆ ಎಂದು ತಿಳಿಸಿದ್ದು, ದೇಶವನ್ನು ಆರ್ಥಿಕ ಅರಾಜಕತೆಗೆ ದೂಡಿದ್ದಕ್ಕೆ ಮೋದಿಗೆ ಯಾವ ಪ್ರಾಯಶ್ಚಿತ್ತವಿದೆ ಎಂದು ಶಿವಸೇನೆ ಕಟುವಾಗಿ ಟೀಕಿಸಿದೆ.

ನೋಟು ಅಮಾನ್ಯೀಕರಣ ವಿಫಲವಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ ಎಂದು ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಶುಕ್ರವಾರ ಪ್ರಶ್ನಿಸಿದೆ.

ನೋಟ್ ಬ್ಯಾನ್ ನಿಂದಾಗಿ ದೇಶಕ್ಕೆ ಭಾರಿ ನಷ್ಟವಾಗಿದೆ. ಉದ್ಯಮದ ಮೇಲೂ ಅಮಾನ್ಯೀಕರಣ ಪರಿಣಾಮ ಬೀರಿದ್ದು, ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ನೋಟ್ ಬ್ಯಾನ್ ವೇಳೆ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ದೇಶದ ಆಡಳಿತಗಾರರೂ ಅಭಿವೃದ್ಧಿ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದು, ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಿಸಿಕೊಳ್ಳುವುದಕ್ಕಾಗಿ ನೋಟ್ ಬ್ಯಾನ್ ಮಾಡಿದ್ದರು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಭ್ರಷ್ಟಾಚಾರ, ಕಪ್ಪು ಹಣ ಮತ್ತು ನಕಲಿ ನೋಟುಗಳನ್ನು ಶಾಶ್ವತವಾಗಿ ಕೊನೆಗೊಳಿಸಲು ನೋಟ್ ಬ್ಯಾನ್ ಮಾಡಿದ್ದಾಗಿ ಮೋದಿ ಹೇಳಿದ್ದರು. ಆದಾಗ್ಯೂ, ಈ ಎರಡು ವಿಷಯಗಳು ಕಳೆದ ಎರಡು ವರ್ಷಗಳಲ್ಲಿ ಹೆಚ್ಚಾಗಿದೆ. ಮಾತ್ರವಲ್ಲ ಕಾಶ್ಮೀರದ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

Leave a Reply