ಅಯೋಧ್ಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಸುಪ್ರೀಂಕೋರ್ಟ್ ನಿಜಕ್ಕೂ ಸರ್ವೋಚ್ಚ, ನಾವು ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ, ಆದರೆ ಸುಪ್ರೀಂಕೋರ್ಟ್ ಸಂಪೂರ್ಣ ದೋಷಾತೀತವಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನ್ಯಾಯಾಲಯ ಮತ್ತು ಸಂವಿಧಾನದ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೆವು. ನಮಗೆ ದಾನವಾಗಿ 5 ಎಕರೆ ಜಮೀನಿನ ಅಗತ್ಯವಿಲ್ಲ. ಈ ಐದು ಎಕರೆ ಭೂ ಜಮೀನಿನ ಪ್ರಸ್ತಾಪವನ್ನು ನಾವು ತಿರಸ್ಕರಿಸಬೇಕು ಎಂದವರು ಹೇಳಿದ್ದು, ಬಾಬರಿ ಮಸೀದಿಯನ್ನು ನೆಲಸಮ ಮಾಡಿದವರಿಗೆ ರಾಮಮಂದಿರ ನಿರ್ಮಾಣ ಪ್ರಾರಂಭಿಸಲು ಕೇಳಿಕೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಮಾತ್ರವಲ್ಲ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಕೂಡ ಅವರು ತೀವ್ರ ತರಾಟೆಗೆ ತೆಗೆದಿದ್ದು, ಕಾಂಗ್ರೆಸ್ ತನ್ನ ನಿಜವಾದ ಬಣ್ಣವನ್ನು ತೋರಿಸಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಮೋಸ ಮತ್ತು ಬೂಟಾಟಿಕೆ ಬಿಟ್ಟು 1949ರಲ್ಲಿ ವಿಗ್ರಹಗಳನ್ನು ಇಡಲು ಅನುಮತಿ ಕೊಡದಿರುತ್ತಿದ್ದರೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬೀಗಗಳನ್ನು ತೆರೆಯದಿರುತ್ತಿದ್ದರೆ ಮತ್ತು ಮಾಜಿ ಪ್ರಧಾನಿ ನರಸಿಂಹರಾವ್ ತಮ್ಮ ಕರ್ತವ್ಯವನ್ನು ನಿರ್ವಹಿಸಿರುತ್ತಿದ್ದರೆ ಮಸೀದಿ ಇನ್ನು ಬಾಕಿ ಇರುತ್ತಿತ್ತು. ಈ ಕುರಿತು ವಿಮರ್ಶೆ ಮಾಡಲು ನಮಗೆ ಸಂಪೂರ್ಣವಾದ ಹಕ್ಕಿದೆ ಎಂದು ಉವೈಸಿ ಹೇಳಿದರು.

ಅಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಮೌಲಾನಾ ಸಯ್ಯದ್ ಅಥರಲಿ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದು, ತಮ್ಮ ಸಂಘಟನೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ಚಿಂತಿಸುತ್ತಿದೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ನಾವೆಲ್ಲರೂ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ಈ ದೇಶದಲ್ಲಿ ಶಾಂತಿ ಮೇಲುಗೈ ಸಾಧಿಸಬೇಕು. ನಾವೆಲ್ಲರೂ ಸುಪ್ರೀಂಕೋರ್ಟ್ ಆದೇಶವನ್ನು ಒಪ್ಪಿಕೊಳ್ಳಬೇಕು ಎಂದು ಅವರು ಹೇಳಿದರು.

Leave a Reply