ಧ್ವನಿ: ನನಗೆ ವಿವಾಹ ಆಗಿ ಎಂಟು ವರ್ಷವಾಯಿತು. ಎರಡು ಮಕ್ಕಳಿದ್ದಾರೆ. ಅತ್ತೆನಾನು ಬಹಳ ಚೆನ್ನಾಗಿಯೇ ಇದ್ದವು. ಪತಿಯೂ ಒಳ್ಳೆಯ ಮನುಷ್ಯನೇ. ಎರಡು ವರ್ಷದ ಹಿಂದೆ ನನ್ನ ನಾದಿನಿ ಪತಿಯೊಂದಿಗೆ ಮುನಿಸಿಕೊಂಡು ವಿಚ್ಛೇದನ ಪಡೆದು ತವರಿಗೆ ಬಂದಳು. ಆಕೆ ತವರಿಗೆ ಬಂದ ನಂತರ ನನ್ನ ಮನಸ್ಸಿನ ಶಾಂತಿ ಹಾಳಾಗುತ್ತಿದೆ.

ಯಾಕೆಂದರೆ, ಅವಳಿಗೆ ಅತ್ತೆ ನನ್ನೊಂದಿಗೆ ಖುಷಿಯಿಂದ ಇರುವುದು ಇಷ್ಟವಿಲ್ಲ. ತನ್ನ ತಾಯಿಯ ಕಿವಿಗೆ ಇಲ್ಲ ಸಲ್ಲದ್ದನ್ನು ಹೇಳುತ್ತಾ ಅತ್ತೆಯಿಂದ ನನಗೆ ಬೈಗುಳ ಸಿಗುತ್ತಿದೆ. ನನ್ನ ಮಾವನ ಮಗನನ್ನು ನಾದಿನಿ ಮದುವೆ ಆಗಿದ್ದದ್ದು, ಆಕೆಯ ದಾಂಪತ್ಯ ಮುರಿದು ಬಿದ್ದರಿಂದ ಆಕೆಯ ಅಣ್ಣ (ನನ್ನ ಪತಿ)ನೂ ನನ್ನನ್ನು ತಲಾಕ್ ನೀಡಿ ತಾಯಿ ಮನೆಗೆ ಓಡಿಸಬೇಕೆಂದು ಹೇಳುತ್ತಾಳೆ. ಅವಳಿಗೆ ಸಿಕ್ಕಿದ ದುಃಖ ನನಗೂ ಸಿಗಬೇಕೆಂದು ಸೇಡು ತೀರಿಸುವ ಮಾತನ್ನಾಡುತ್ತಿರುತ್ತಾಳೆ. ನಮ್ಮ ಪ್ರೀತಿಯ ದಾಂಪತ್ಯ ಒಡೆಯುವ ಎಲ್ಲಾ ಪ್ರಯತ್ನ ಅವಳದ್ದಾಗಿದೆ. ಒಂದು ವಿಚಿತ್ರ ವರ್ತನೆಯೂ ಅವಳಲ್ಲಿದೆ. ನನ್ನ ಪತಿಯೊಂದಿಗೆ ನಾನು ಏಕಾಂತವಾಗಿ ರೂಮಿನಲ್ಲಿರಬಾರದು. ಅವರು ನನ್ನ ಹತ್ತಿರ ಕುಳಿತಿರಬಾರದು. ನನಗೆ ಹೂವುಗಳನ್ನು ತಂದರೆ ಅದನ್ನು ತೆಗೆದು ಬಿಸಾಡುತ್ತಾಳೆ. ನಾನು ಬೆಳಿಗ್ಗೆ ಎದ್ದು ಸ್ನಾನ ಮಾಡಿದ ದಿನ ಅವಳ ಕೋಪ ಅಧಿಕ ವಾಗುತ್ತದ. “ನೀವೆಲ್ಲಾ ಖುಷಿಯಲ್ಲಿರಿ….. ನಾನು ಯಾರಿಗೂ ಬೇಡಾ…..” ಎಂದು ಮೈಮೇಲೆ ಬಂದಂತೆ ವರ್ತಿಸು ತಾಳೆ, ಇತ್ತೀಚೆಗೆ ನನ್ನ ಪತಿಯೂ ತಾಯಿ ಮತ್ತು ಮಗಳ (ತಂಗಿ) ಒಟ್ಟಿಗೆ ಸೇರಿಕೊಂಡು ನನ್ನನ್ನು ಬೈಯ್ಯಲು ಶುರು ಮಾಡಿರುತ್ತಾರೆ.

ಅವರ ತಂಗಿಗೆ ಅನ್ಯಾಯ ಆಗಿರುವುದರಿಂದ ನನ್ನ ಕುಟುಂಬಕ್ಕೆ ಬುದ್ದಿ ಬರಲು ನನ್ನನ್ನು ವಿಚ್ಛೇದನ ಮಾಡುವುದಾಗಿ ಬೆದರಿಸುತ್ತಿದ್ದಾರೆ.
ನಾನೇನು ಮಾಡಲಿ? ನನ್ನದೇನು ತಪ್ಪು. ನನ್ನ ನಾದಿನಿಯು ನನ್ನ ದಾಂಪತ್ಯ ಮುರಿಯುವ ಸೇಡು ತೀರಿಸುತ್ತಿದ್ದಾಳೆ. ಇದನ್ನು ಹೇಗೆ ಪರಿಹರಿಸುವುದು?

ಸಾಂತ್ವನ: ನಿಮ್ಮ ಪತ್ರದಿಂದ ತಿಳಿಯುವುದೇ ನೆಂದರೆ, ‘ನಾದಿನಿ’ ನಿಮ್ಮ ಸುಖೀ ಜೀವನಕ್ಕೆ ಖಳನಾಯಕಿ ಆಗುತ್ತಿದ್ದಾಳೆಂದು. ನಾದಿನಿಗೆ ಆಕೆಯ ಪತಿ ಬೇಡವಾಗಿದ್ದರಿಂದ ಅವಳು ‘ವಿಚ್ಛೇದನ ‘ ಪಡೆದು ತವರಿಗೆ ಬಂದಳು. ಸಾಮಾನ್ಯ ವಾಗಿ ಯಾವುದೇ ಮನೆಯಲ್ಲಿ ಪತಿಯು ತೀರಿ ಹೋದ ನಾದಿನಿಯರು ಇದ್ದರೆ, ಅಲ್ಲಿ ಇರುವ ಸೊಸೆಯ ಮೇಲೆ ಕಿರುಕುಳ ಅಧಿಕವಾಗುತ್ತದೆ. ಎಲ್ಲರೂ ಈ ರೀತಿ ಮಾಡುವುದಿಲ್ಲ. ಕೆಲವು ಮಹಿಳೆಯರು ಮಾತ್ರ ತಮ್ಮ ಬಾಬಿಯರ ಮೇಲೆ ಶೋಷಣೆ ನಡೆಸುವುದು. ಇದು ಅವರ ಮನಸ್ಸಿನ ಹೊಯ್ದಾಟ, ಕೊರತೆ, ಮತ್ಸರ, ಅಸಹನೆಯ ಪ್ರತಿಫಲನವಾಗಿದೆ. ನೀವು ಗಂಡನ ಜೊತೆ ಸೇರಿದ ದಿನ ನಿಮ್ಮ ನಾದಿನಿಗೆ ಬಹಳಷ್ಟು ಸಂಕಟ ಆಗುತ್ತದೆ. ಸಹಿಸಲಾಗದ ಮಾನಸಿಕ ಯಾತನೆಗೆ ಆಕೆಯ ಮನಸ್ಸು ಚಡಪಡಿಸಿದಾಗ ವಿಚಿತ್ರವಾಗಿ ವರ್ತಿಸುತ್ತಾಳೆ. ಇದು ಸಹಜವೇ.

ತಾನು ಪತಿಯಿಂದ ದೂರ ಇರುವಾಗ, ತನಗೆ ಯಾವುದೇ ದೈಹಿಕ ಸುಖ ಸಿಗದಾಗ, ತನ್ನ ಎದುರು ಇರುವ ದಂಪತಿಗಳ ಸಮಾಗಮವನ್ನು ಆಕೆ ಸಹಿಸಲಾರಳು. ಅದು ಆಕೆಯ ಯೌವನ ಮತ್ತು ಪ್ರಾಯದ ದೋಷ. ಇಂತಹ ವರ್ತನೆ ಕೆಲವು ವೇಳೆ ಗಲ್ಫ್ ನಲ್ಲಿರುವ ಗಂಡಂದಿರ ಪತ್ನಿಯರಿಗೂ ಆಗುತ್ತದೆ. ಎರಡೂರು ವರ್ಷಕ್ಕೆ ಊರಿಗೆ ಬಾರದ ಪತಿಯ ನೆನಪಿನಲ್ಲಿ ಸಹ ವೇದನೆ ಅನುಭವಿಸುವ ಪತ್ನಿಯು ತನ್ನ ಮನೆಯಲ್ಲಿ ಅಕ್ಕ-ತಂಗಿ, ಬಾಬಿ, ತಾಯಿ ಈ ರೀತಿಯ ಸಂಬಂಧಿಗಳ ದಾಂಪತ್ಯ ಸುಖದ ಕ್ಷಣಗಳನ್ನು ಕಂಡಾಗ ಮಾನಸಿಕ ಖಿನ್ನತೆಗೆ ಜಾರಿ ಬಿಡುತ್ತಾಳೆ, ಸಿಡುಕುವುದು, ಕಿರಿಕಿರಿ ಮಾಡುವುದು, ಅಳುವುದು, ಮಕ್ಕಳಿಗೆ ಹೊಡೆಯುವ ಪ್ರಕ್ರಿಯೆ ಕಂಡು ಬರುತ್ತದೆ. ಎಲ್ಲವೂ ಲೈಂಗಿಕ ಅತೃಪ್ತಿಯ ಕಾರಣವಾಗಿದೆ.

ನಿಮ್ಮ ನಾದಿನಿ ಇನ್ನೂ ಚಿಕ್ಕ ಪ್ರಾಯವಾಗಿರುವುದರಿಂದ ಸಹಜವಾಗಿಯೇ ಮಗಳು ಪತಿಯಿಂದ ದೂರ ವಾಗಿ ತವರಿಗೆ ಬಂದು ನೆಲೆಸಿದ್ದು ‘ಚಿಂತೆ’ ಉಂಟು ಮಾಡುತ್ತಿದೆ. ಮಗಳ ಪರ ವಹಿಸುವುದು ಅದೇ ಕಾರಣ, ಮಗಳಿಗೆ ಈಗ ತಾಯಿ ಅವಳೊಂದಿಗೆ ಇದ್ದಾರೆ ಎಂಬ ನಂಬಿಕೆ ಬರಬೇಕಾಗಿತ್ತು. ಆದ್ರೆ…… ನಿಮ್ಮ ಪತಿಯ ಬುದ್ದಿ ಕೆಡಬಾರದು. ತಂಗಿಗೆ, ತಾಯಿಗೆ ಸರಿಯಾದ ಬುದ್ದಿ ಹೇಳಿ, ಅವರಿಗೆ ವಿವೇಕ ಮೂಡಿಸುವುದು ಅವನ ಧರ್ಮ, ನಿಮ್ಮನ್ನು ತೊರೆಯಲು ಇಂತಹ ಕ್ಷುಲ್ಲಕ ಕಾರಣ ನೀಡುವುದು ಮೂರ್ಖತನದ ಮಾತು. ಒಬ್ಬರ ಬಾಳು ಹಾಳು ಮಾಡಿ ಯಾರೂ ಸುಖ ಅನುಭವಿಸಿದ್ದಿಲ್ಲ ಎಂದು ನಿಮ್ಮ ನಾದಿನಿಯೂ ಚಿಂತಿಸಬೇಕು.

ತನ್ನ ಅಣ್ಣನ ಬಾಳಿಗೆ ಬಿರು ಗಾಳಿಯಾಗಬಾರದು. ಒಂದು ಸುಖೀ ಜೀವನ ವನ್ನು ಛಿದ್ರ ಮಾಡಿದ ಶಾಪ(ಪಾಪ) ಆಕೆಯ ಮೇಲೆ ಬರುತ್ತದೆ. ತಾನು ಸುಖಿಯಾಗಿರದಿ ದ್ದರೆ ಇತರರೂ ಸುಖಿಯಾಗಿರಬಾರದು ಎಂಬ ಯೋಚನೆ ಸ್ವಾರ್ಥವಾಗಿದೆ. ನಿಮ್ಮ ಪತಿಯು ನಿಮ್ಮನ್ನು ಅರ್ಥ ಮಾಡಿಕೊಳ್ಳಲಿ. ಅವಳಿಗೆ ಆದಷ್ಟು ಬೇಗ ಬೇರೆ ಮದುವೆ ಮಾಡಿಸಲು ಬೇಕಾದ ಕೆಲಸ ನಡೆಯಲಿ. ಖಾಲಿ ಮನಸ್ಸು ಯಾವಾಗಲೂ ಇಂತಹ ಕೆಟ್ಟ ವಿಷಯಗಳನ್ನೇ ಪ್ರೇರೇಪಿಸುತ್ತದೆ. ಅವಳು ಸೆಟ್ಟಲ್ ಆದರೆ ನಿಮ್ಮ ಜೀವನವೂ ಮುಂದಿನಂತೆ ಆಗಲಿ. ನಿಮ್ಮ ಪತಿಯಿಂದ ಅಂತಹ ಮಾತು ಬರುತ್ತಿರುವುದು ದುಃಖದ ವಿಷಯ. ನೀವಿನ್ನೂ ಪರಸ್ಪರ ಸಂಪೂರ್ಣ ಬಿಟ್ಟಿರಲಾರದ ಪ್ರೀತಿಗೆ ತಲಪಿಲ್ಲ. ಒಂದೋ ಅವರು ಮನೆಯವರನ್ನು ಸಮಾಧಾನಿಸಲು ಹೇಳಿರಬಹುದು. ಯಾವುದಕ್ಕೂ ನಿಮ್ಮ ಪತಿಯ ಮನಸ್ಸು ಗೆಲ್ಲುವುದು ನಿಮ್ಮ ಮೊದಲ ಕೆಲಸ ಆಗಬೇಕು.

Leave a Reply