ನವದೆಹಲಿ : ಹಿಂಸೆ ಮತ್ತು ಅಕ್ರಮ ಮಾರ್ಗದ ಮೂಲಕ ಗಲಭೆಗಳನ್ನು ಸೃಷ್ಟಿಸಿ, ಸಾರ್ವಜನಿಕ ಸುವ್ಯವಸ್ಥೆಯನ್ನು ಕೆಡಿಸುವುದು ಹಾಗೂ ಅಂತಹ ಮಾರ್ಗವನ್ನು ಬಳಸಿ ಉದ್ದೇಶಪೂರ್ವಕವಾಗಿ ಸರ್ಕಾರವನ್ನು ಉರುಳಿಸುವುದಕ್ಕೆ ದೇಶದ್ರೋಹ ಎನ್ನಬಹುದೇ ಹೊರತು ದೇಶವನ್ನು ಮತ್ತು ನಿರ್ದಿಷ್ಟ ವಿಚಾರವನ್ನು ಮುಂದಿಟ್ಟು ಟೀಕಿಸುವುದು ದೇಶದ್ರೋಹವಲ್ಲ ಎಂದು ಕಾನೂನು ಆಯೋಗ ಸಲಹಾ ಪತ್ರದಲ್ಲಿ ಹೇಳಿದೆ.

ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ದೇಶ ದ್ರೋಹವನ್ನು ಮರು ವ್ಯಾಖ್ಯಾನ ನಡೆಸುವ ಅಗತ್ಯವಿದ್ದು, ಭಾರತೀಯ ದಂಡ ಸಂಹಿತೆಯಲ್ಲಿನ 124ಎ (124 ಎಪಿಸಿ) ಸೆಕ್ಷನನ್ನು ಮರು ಪರಿಶೀಲಿಸುವ ಅಗತ್ಯವಿದೆ ಎಂದು ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ನೇತೃತ್ವದ ಆಯೋಗವು ಅಭಿಪ್ರಾಯ ಪಟ್ಟಿದೆ.

ಕಾನೂನು ರಕ್ಷಕರು, ಶಾಸಕರು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಶೈಕ್ಷಣಿಕ ತಜ್ಞರು, ವಿದ್ಯಾರ್ಥಿಗಳು ಹೀಗೆ ಯಾವುದೇ ವಿಚಾರದಲ್ಲಿ ಆರೋಗ್ಯಕರ ಚರ್ಚೆಗಳು ನಡೆಯಬೇಕು. ಸರಕಾರವನ್ನು ಅಥವಾ ಯಾವುದೇ ವಿಚಾರಧಾರೆಯನ್ನು ಟೀಕಿಸುವುದು ದೇಶ ದ್ರೋಹವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಟೀಕಿಸುವ ಹಕ್ಕನ್ನೂ ಸಂವಿಧಾನ ನೀಡಿದೆ. ಇಲ್ಲದಿದ್ದರೆ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರದ ಕಾಲಘಟ್ಟಕ್ಕೆ ವ್ಯತ್ಯಾಸ ಇರಲಾರದು ಎಂದು ಹೇಳಿದೆ.

“ಪ್ರಜಾಪ್ರಭುತ್ವದಲ್ಲಿ, ಒಂದೇ ದೃಷ್ಟಿಕೋನದಿಂದ ದೇಶಭಕ್ತಿಯನ್ನು ನೋಡಲು ಸಾಧ್ಯವಿಲ್ಲ. ತಮ್ಮದೇ ಆದ ರೀತಿಯಲ್ಲಿ ದೇಶ ಪ್ರೇಮ ತೋರಿಸಲು ಜನರು ಸ್ವತಂತ್ರವಾಗಿರಬೇಕು. ಅದೇ ರೀತಿ ಒಬ್ಬರು ಸಾರ್ವಜನಿಕ ಚರ್ಚೆಗಲ್ಲಿ ಭಾಗವಹಿಸಿ ಸರಕಾರದ ನೀತಿಯನ್ನು ಟೀಕಿಸಿದರೆ, ಸರಕಾರದ ಲೋಪದೋಷಗಳನ್ನು ತೋರಿಸಿದರೆ ಅದು ಕೆಲವರಿಗೆ ಅಹಿತಕರವಾಗಿ ಕಾಣಬಹುದು. ಅಂತಹ ಆಲೋಚನೆಗಳಲ್ಲಿ ಬಳಸಲ್ಪಡುವ ಅಭಿವ್ಯಕ್ತಿಗಳು ಕೆಲವರಿಗೆ ಕಠಿಣ ಮತ್ತು ಅಹಿತಕರವಾಗಬಹುದು, ಆದರೆ ಅದು ಹಿಂಸೆ ಮತ್ತು ಅಕ್ರಮ ಮಾರ್ಗದ ಮೂಲಕ ಗಲಭೆಗಳನ್ನು ಸೃಷ್ಟಿಸಿ, ಸಾರ್ವಜನಿಕ ಸುವ್ಯವಸ್ಥೆಯನ್ನು ಕೆಡಿಸಿ ಉದ್ದೇಶಪೂರ್ವಕವಾಗಿ ಸರ್ಕಾರವನ್ನು ಉರುಳಿಸುವ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ದೇಶದ ಸಮಗ್ರತೆಯನ್ನು ಕಾಪಾಡಲು ಅತ್ಯಗತ್ಯವಾಗಿದ್ದು, ಅದನ್ನು ದುರ್ಬಳಕೆ ಮಾಡಬಾರದು. ಬಿನ್ನಾಭಿಪ್ರಾಯ, ಸಾರ್ವಜನಿಕ ಚರ್ಚೆಗಳು ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸುತ್ತದೆ ಎಂದು ತಿಳಿಸಿದೆ.

Leave a Reply