ಮಂಗಳೂರು: ಹಿರಿಯ ಮುತ್ಸದ್ದಿ, ಮಾಜಿ ಸಚಿವ ಬಿ.ಎ.ಮೊಹಿದೀನ್‌ರ ‘ನನ್ನೊಳಗಿನ ನಾನು’ ಆತ್ಮಕಥನದ ಇಂಗ್ಲಿಷ್ ಅನುವಾದ ‘ದಿ ಐ ವಿದಿನ್ ಮಿ’ ಕೃತಿಯ ಬಿಡುಗಡೆ ಸಮಾರಂಭವು ಮೇ 1ರಂದು ಸಂಜೆ 4:30ಕ್ಕೆ ನಗರದ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ನಡೆಯಲಿದೆ.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಬ್ಯಾರೀಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಸೈಯದ್ ಮುಹಮ್ಮದ್ ಬ್ಯಾರಿ, ‘ವಾರ್ತಾಭಾರತಿ’ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಪಿ. ಎ. ಎಜುಕೇಶನ್ ಟ್ರಸ್ಟ್ ನ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲಾ ಇಬ್ರಾಹೀಮ್ , ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪನ್ಯಾಸಕ ಬಿ. ಸುರೇಂದ್ರರಾವ್, ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಿ.ಎ.ಮೊಹಿದೀನ್‌ರ ಆತ್ಮಕಥನ ‘ನನ್ನೊಳಗಿನ ನಾನು’ ಕನ್ನಡ ಕೃತಿಯನ್ನು ಮುಹಮ್ಮದ್ ಕುಳಾಯಿ ಮತ್ತು ಬಿ.ಎ.ಮುಹಮ್ಮದ್ ಅಲಿ ನಿರೂಪಿಸಿದ್ದು, 2018ರ ಜುಲೈಯಲ್ಲಿ ಈ ಕೃತಿ ಬಿಡುಗಡೆಗೊಂಡಿತ್ತು. ಬಿಡುಗಡೆಗೆ 10 ದಿನ ಮೊದಲು ಬಿ.ಎ.ಮೊಹಿದೀನ್ ನಿಧನ ಹೊಂದಿದ್ದರು. ಈ ಕೃತಿಯು ಮೂರು ಮುದ್ರಣ ಕಂಡಿದ್ದು, ಆರು ತಿಂಗಳಲ್ಲಿ ಐದು ಸಾವಿರ ಪ್ರತಿಗಳು ಮಾರಾಟವಾಗಿವೆ. ಇದೀಗ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪನ್ಯಾಸಕ ಬಿ. ಸುರೇಂದ್ರರಾವ್ ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Leave a Reply