ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ. ಮಹಿಳೆಯರು ಅದರಲ್ಲೂ ವಿವಾಹಿತ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಡುವುದು ಮುತ್ತೈದೆತನದ ಸಂಕೇತವಾಗಿದೆ. ಕುಂಕುಮ ಹಣೆಯ ಮೇಲೆ ಇಡದ ಹಿಂದೂ ಮಹಿಳೆಯರು ಬಹಳ ವಿರಳ.

ದಕ್ಷಿಣ ಭಾರತದಲ್ಲಿ ವಿವಾಹಿತ ಸ್ತ್ರೀಯರು, ಅವಿವಾಹಿತ ಸ್ತ್ರೀಯರು ಕುಂಕುಮ ಇಡುತ್ತಾರೆ. ಬಾಂಗ್ಲಾದೇಶದ ಕಡೆ ಹೋದರೆ ಕೆಲ‌ ಮುಸ್ಲಿಂ ಸ್ತ್ರೀಯರು ಕೂಡ ಕುಂಕುಮ ಇಡುವುದನ್ನು ಕಾಣಬಹುದು. ಉತ್ತರ ಭಾರತದಲ್ಲಿ ಕೂದಲಿನ ಬೈತಲೆಯ ಭಾಗದಲ್ಲಿ ಕುಂಕುಮ ನೀಳವಾಗಿ ಹಚ್ಚಿಕೊಳ್ಳುತ್ತಾರೆ. ಉತ್ತರ ಭಾರತದಲ್ಲಿ ಇದು ಮದುವೆಯಾದ ಸ್ತ್ರೀಯರು ಮಾತ್ರ ಹಚ್ಚುವ ಸಂಪ್ರದಾಯ.  ಭ್ರೂಮಧ್ಯೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿ ಒಪ್ಪಲಾಗಿದೆ ಎನ್ನುತ್ತಾರೆ ಜನ. ಭ್ರೂಮಧ್ಯೆ ಕುಂಕುಮವಿರಿಸುವ ಭಾಗದಲ್ಲಿ ನಿರ್ನಾಳಗ್ರಂಥಿಗಳಲ್ಲಿಯೇ ಮುಖ್ಯವಾಗಿರುವ ಪಿಟ್ಯುಟರಿ ಗ್ರಂಥಿಯಿದೆ. ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಆದ್ದರಿಂದ ಭ್ರೂಮಧ್ಯೆ ಧರಿಸಿದ ಕುಂಕುಮ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಹಾರ್ಮೋನ್‌ ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ.

ಇನ್ನು ಕುಂಕುಮ ಹಚ್ಚುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. “ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ. ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ , ಹಬ್ಬ ಹರಿದಿನಗಳಲ್ಲಿ ಅರಶಿನ ಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ. ಅದು ಮಂಗಲಪ್ರದವೆಂದು ನಂಬಿಕೆ. ಕುಂಕುಮ ಹಚ್ಚುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ.

ಕುಂಕುಮ ಇಡುವುದು ಬಹಳ ಹಿಂದಿನ ಕಾಲದಿಂದಲೂ ರೂಢಿಯಾಗಿರುವ ಪದ್ಧತಿಯಾಗಿದ್ದು, ಇಂದಿಗೂ ಅದು ಮುಂದುವರಿದುಕೊಂಡು ಬಂದಿದೆ. ಕೇವಲ ವಿವಾಹಿತ ಮಹಿಳೆಯರು ಮಾತ್ರವಲ್ಲದೇ ಎಲ್ಲಾ ಹೆಣ್ಣು ಮಕ್ಕಳು ಹಣೆಯ ಮೇಲೆ ಕುಂಕುಮ ಇಡುವುದು ಶುಭ ಸೂಚಕವಾಗಿದೆ.

 

Leave a Reply