ಬೆಳಿಗ್ಗೆ ಎದ್ದಾಗ ಇನ್ನೂ ಒಂದರ್ಧ ಗಂಟೆ ನಿದ್ರಿಸಲು ಸಾಧ್ಯವಿದ್ದಿದ್ದರೆ ಚೆನ್ನಾಗಿತ್ತು ಎಂದು ಅದೆಷ್ಟು ಬಾರಿ ನಮಗನ್ನಿಸಿಲ್ಲ? ಆದರೂ, ಕಾರ್ಯ ನಿಬಿಡತೆಯ ಕಾರಣದಿಂದ ನಿದ್ದೆಯನ್ನು ತೊರೆದು ನಿತ್ಯ ಕರ್ಮದಲ್ಲಿ ತೊಡಗುತ್ತೇವೆ. ಹಾಗಿದ್ದರೂ, ಶರೀರವು ಆಯಾಸದಿಂದ ಕೂಡಿರುತ್ತದೆ. ಮನಸ್ಸು ಚೈತನ್ಯದಿಂದಿರುವುದಿಲ್ಲ. ಅಗತ್ಯವಿದ್ದಷ್ಟು ನಿದ್ರೆ ನಮಗೆ ಲಭಿಸದಿರುವುದೇ ಇದಕ್ಕೆ ಕಾರಣ. ಹಗಲು ವಿಪರೀತ ನಿದ್ದೆ ಬರುವುದು, ಆಯಾಸ, ಏಕಾಗ್ರತೆಯ ಕೊರತೆಗೂ ನಿದ್ರೆಯ ಅಭಾವವೇ ಕಾರಣ. ಜೀವನ ಶೈಲಿಯಲ್ಲಿ ಬದಲಾವಣೆ, ಖಿನ್ನತೆ, ಕಳವಳ, ಅಪರಾತ್ರಿಯ ಉದ್ಯೋಗ, ಪ್ರಯಾಣ (ವಿಶೇಷತಃ ವಿಮಾನ ಪ್ರಯಾಣ) ಹೃದಯರೋಗ, ಅಸ್ತಮಾ ಮುಂತಾದವುಗಳೂ ನಿದ್ರಾಹೀನತೆಯನ್ನುಂಟು ಮಾಡುತ್ತದೆ.

ದೆಹಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ| ಎಂ.ಎಸ್. ಕನ್ವರ್‍ರ ಅಭಿಪ್ರಾಯದಂತೆ 24×7 ಜೀವನ ಶೈಲಿಯು ಜನರ ನಿಬಿಡತೆಯನ್ನು ಬಹಳಪಟ್ಟು ವೃದ್ಧಿ ಮಾಡಿದೆ. ತನ್ನ ಗುರಿ ತಲುಪಲು, ಉದ್ಯೋಗದಲ್ಲಿನ ಒತ್ತಡ ಮತ್ತು ಮನೆಮಂದಿಯ ನಿರೀಕ್ಷೆಯನ್ನು ಈಡೇರಿಸುವಲ್ಲಿ ಹೆಚ್ಚು ಒತ್ತಡ ಅನುಭವಿಸುತ್ತಾರೆ. ಜೀವನ ಮಟ್ಟವನ್ನು ಉನ್ನತಗೊಳಿಸಲು ಹೆಚ್ಚು ಉತ್ಸುಕರಾಗಿದ್ದಾರೆ. ಇದರ ಪರಿಣಾಮವಾಗಿ ಜನರಲ್ಲಿ ನಿದ್ರಾಹೀನತೆ, ಖಿನ್ನತೆ ಮತ್ತು ನಡವಳಿಕೆಯಲ್ಲಿ ಏರುಪೇರು ಕಂಡು ಬರುತ್ತದೆ. ಜಾಗತೀಕರಣವು ನಮ್ಮನ್ನು ಆರ್ಥಿಕವಾಗಿ ಉತ್ತಮ ಮಟ್ಟ ಕ್ಕೇರಿಸಿರಬಹುದು. ಆದರೆ, ಇದು ಜನಸಾಮಾನ್ಯರ ಆರೋಗ್ಯದ ಮೇಲೆ ಖಂಡಿತವಾಗಿಯೂ ದುಷ್ಪರಿಣಾಮವನ್ನು ಬೀರಿದೆ.

ಓರ್ವ ತಜ್ಞರ ಪ್ರಕಾರ “ನಮ್ಮದು ನಿದ್ರಾ ಖಾಯಿಲೆಯ ಸಮಾಜ”. ಅಧ್ಯಯನಗಳ ವರದಿಯಂತೆ ನಿದ್ದೆಯ ಅಭಾವ ಬಹಳಷ್ಟು ತೊಂದರೆಗಳನ್ನು ತಂದೊಡ್ಡುತ್ತದೆ. ಭಾರತ ದೇಶದಲ್ಲಿ ಬಹಳಷ್ಟು ರಸ್ತೆ ಅಪಘಾತಗಳು, ವಿಶೇಷತಃ ಲಾರಿ ಅಪಘಾತಗಳು ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಿಸಿದ ಕಾರಣದಿಂದಾಗಿರುತ್ತದೆ. ಏಕೆಂದರೆ, ಅವರು ಬಹಳ ದೂರ ನಿದ್ದೆ ಅಥವಾ ವಿಶ್ರಾಂತಿಯೂ ಇಲ್ಲದೇ ನಿರ್ದಿಷ್ಟ ಸಮಯಕ್ಕೆ ನಿರ್ದಿಷ್ಟ ಸ್ಥಳಕ್ಕೆ ತಲುಪಬೇಕಾಗಿರುತ್ತದೆ.

ನಿದ್ರೆಯ ಅಭಾವದಿಂದ ಮನುಷ್ಯ ತನ್ನ ಬುದ್ಧಿಶಕ್ತಿ, ಕಾರ್ಯಕ್ಷಮತೆ, ಸ್ಮರಣಾಶಕ್ತಿ, ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಾನೆ ಮತ್ತು ಆತ ತನ್ನ ಪೂರ್ಣ ಸಾಮಥ್ರ್ಯದಿಂದ ಕಾರ್ಯವೆಸಗಲು ಅಸಮರ್ಥ ನಾಗುತ್ತಾನೆ. ನಿದ್ರಾಹೀನತೆಯು ಶಾರೀರಿಕ ತೊಂದರೆಗಳನ್ನು ತಂದೊಡ್ಡಬಹುದು. ತೀವ್ರತರದ ಗಾಬರಿ, ಗ್ಯಾಸ್ಟ್ರಿಕ್ ತೊಂದರೆಗಳು ಕೂಡಾ ಕಾಣಿಸಿಕೊಳ್ಳುತ್ತದೆ. ಬೊಜ್ಜು, ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಮಧು ಮೇಹದಂತಹ ಮಾರಕ ರೋಗ ಗಳೂ ಬರಬಹುದು. ನಿದ್ದೆ ಬಾರದ ವ್ಯಕ್ತಿ ಸುಮ್ಮನೇ ಮಲಗಲು ಸಾಧ್ಯವಾಗದೇ ಕುರುಕಲು ತಿಂಡಿಗಳನ್ನೋ, ಅಧಿಕ ಕೊಬ್ಬು ಇರುವ ಆಹಾರ ಪದಾರ್ಥಗಳನ್ನೋ ಸೇವಿಸುವುದರಿಂದ, ಮರುದಿನ ನಿದ್ರಾಹೀನತೆಯಿಂದುಂಟಾಗುವ ಉದಾಸೀನತೆಯಿಂದ ವ್ಯಾಯಾಮ ಮಾಡುವ ಮನೋಸ್ಥಿತಿಯಲ್ಲಿರದಿದ್ದರೆ ದೇಹದಲ್ಲಿ ಕೊಬ್ಬು ಶೇಖರಣೆ ಯಾಗಿ ಬೊಜ್ಜು ಮತ್ತಿತರ ರೋಗಗಳಿಗೆ ಆಸ್ಪದ ನೀಡುತ್ತದೆ. ರಾತ್ರಿ 5 ಘಂಟೆಗಳಿಗಿಂತ ಕಡಿಮೆ ನಿದ್ರಿಸುವವರಲ್ಲಿ ಹೃದಯದ ತೊಂದರೆ ಇತರರಿಗಿಂತ 3 ಪಟ್ಟು ಜಾಸ್ತಿ ಎಂಬುದು ತಜ್ಞರ ಅಭಿಪ್ರಾಯ.

ನಿದ್ರೆಯ ಅಭಾವ ವ್ಯಕ್ತಿಯ ವ್ಯಕ್ತಿತ್ವದಲ್ಲೂ ಬಹಳಷ್ಟು ಬದ ಲಾವಣೆಯನ್ನು ತರುತ್ತದೆ. ತನ್ನ ಮನೆ ಮಂದಿ, ಸಹೋದ್ಯೋಗಿಗಳು, ಸ್ನೇಹಿತರೊಂದಿಗೆ ವ್ಯವಹರಿಸುವಾಗ ವಿನಾಃ ಕಾರಣ ಸಿಟ್ಟಿಗೇಳುವುದು, ಜಗಳ ವಾಗ್ಯುದ್ಧಗಳಿಗೂ ಹೇತು ವಾಗುವುದರಿಂದ ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸಬಲ್ಲದು. ಉದ್ಯೋಗ ರಂಗದಲ್ಲಿಯೂ ಕ್ರಿಯಾಶೀಲತೆಯ ಕೊರತೆಯಿಂದಾಗಿ ಅಲ್ಲೂ ತೊಂದರೆಗಳುಂಟಾಗಬಹುದು.

ನಿದ್ರಾಹೀನತೆಯಿಂದ ಬಳಲುವವರು ನಿದ್ದೆಗಾಗಿ ಮದ್ಯ ಅಥವಾ ನಿದ್ರೆಗುಳಿಗೆಗಳನ್ನು ಸೇವಿಸುತ್ತಾರೆ. ಇದರ ಸೇವನೆ ಅನಿಯಮಿತವಾದಲ್ಲಿ ಆರೋಗ್ಯಕ್ಕೆ ಇನ್ನೂ ಹೆಚ್ಚು ತೊಂದರೆ ಕೊಡುತ್ತದೆ. ದೆಹಲಿಯ ಸರ್. ಗಂಗಾಧರ್ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಡಾ| ಮನ್ವೀತ್ ಭಾಟಿಯಾರ ಅಭಿಪ್ರಾಯದಂತೆ “ನಿದ್ರೆಯ ತೊಂದರೆಯಿಂದ ಬಳಲುತ್ತಿರುವವರು ಇದನ್ನು ಗುಣಪಡಿಸಲು ಹಲವು ವಿಧಾನಗಳಿಗೆ ಶರಣು ಹೋಗುತ್ತಾರೆ. ಆದರೆ, ನಿದ್ರಾಹೀನತೆಯು ಒಂದು ಖಾಯಿಲೆಯಲ್ಲ, ಬದಲಾಗಿ ಶರೀರದ ಬೇರೆ ತೊಂದರೆಗಳಿಂದುಂಟಾಗುವ ದುಷ್ಪರಿಣಾಮಗಳ ಪ್ರಭಾವ ಎಂಬುದರ ಅರಿವು ಅವರಿಗಿಲ್ಲ. ಪ್ರಾಯಾಧಿಕ್ಯ, ಜೀವನ ಶೈಲಿ, ಕಾಯಿಲೆಗಳು ನಿದ್ರಾಹೀನತೆಗೆ ಕಾರಣವಾಗಿರಬಹುದು.” ತಜ್ಞ ವೈದ್ಯರು ಮಾತ್ರ ನಿಮ್ಮ ನಿದ್ರಾಹೀನತೆಗೆ ಕಾರಣವನ್ನು ಕಂಡು ಹಿಡಿಯಬಲ್ಲರು. ಔಷಧಿ ಗಳು ತೊಂದರೆಯನ್ನು ಸರಿಪಡಿ ಸುವ ನಿಟ್ಟಿನಲ್ಲಿ ಪ್ರಯೋಜನಕಾರಿ ಯಾಗಬಲ್ಲದು. ಅದರ ಜತೆಗೆ ಆ ವ್ಯಕ್ತಿಯೂ ಆರೋಗ್ಯದಾಯಕ ಜೀವನ ನಡೆಸಲು ಸಿದ್ಧನಿರ ಬೇಕೆಂಬುದೇ ಪ್ರಾಮುಖ್ಯವಾಗಿದೆ. ಆತ ತನ್ನ ಶರೀರದ ಮಾತುಗಳನ್ನು ಕೇಳುವವನಾಗಿರಬೇಕು.

ಮನಶಾಸ್ತ್ರಜ್ಞರಾದ ಡಾ| ಮನೋಜ್ ಭಟವಾಡೇಕರ್‍ರ ಅಭಿಪ್ರಾಯ ದಂತೆ “ಆದಷ್ಟು ಬೇಗ ನಿದ್ರೆ ಮಾಡಲು ಪ್ರಯತ್ನಿಸಿ. ಒಂದು ವೇಳೆ ನಿದ್ರಿಸಲು ವಿಳಂಬವಾದರೂ, ಬೆಳಿಗ್ಗೆ ನಿಗದಿತ ಸಮಯಕ್ಕೇ ಏಳುವ ಪರಿಪಾಠವಿರಿಸಿ. ಕ್ಯಾಫಿನ್ ಯುಕ್ತ ಆಹಾರವಾದ ಚಾ, ಕಾಫಿ, ಚಾಕೊಲೇಟ್‍ಗಳು, ಮದ್ಯ, ತಂಬಾಕು ಸೇವನೆಯನ್ನು ನಿದ್ರಿಸುವ ಸಮಯದಲ್ಲಿ ಸೇವಿಸುವುದನ್ನು ತ್ಯಜಿಸಿ. ದೃಶ್ಯ ಮಾಧ್ಯಮವಾದ ಟಿ.ವಿ.ಯನ್ನು ಮಲಗುವ ಕೋಣೆಯಲ್ಲಿರಿ ಸಲೇ ಬೇಡಿ. ಅದರ ಚಿತ್ರಗಳು ನಮ್ಮ ಮನಸ್ಸನ್ನು ಉತ್ತೇಜಿಸುವುದರೊಂದಿಗೆ ಮಿದುಳನ್ನು ಚುರುಕಾಗಿಸುತ್ತದೆ. ಅದರ ಕಿರಣಗಳು ನಮ್ಮನ್ನು ಎಚ್ಚರವಿರುವಂತೆ ಮಾಡುತ್ತದೆ. ನಿದ್ದೆಯ ಮೊದಲು ಅತೀ ಹೆಚ್ಚು ಆಹಾರ ಸೇವನೆ ಕೂಡಾ ನಿದ್ರೆಗೆ ಭಂಗ ಮಾಡಬಹುದು.

ನಿದ್ರೆ ಬಾರದಿದ್ದಲ್ಲಿ ಮಂಚದಲ್ಲಿ ಹೊರಳಾಡುವ ಬದಲು 15 ನಿಮಿಷ ನಿದ್ರೆಗೆ ಕಾದು ಮತ್ತೂ ಬರದಿದ್ದರೆ, ಇನ್ನೊಂದು ಕೋಣೆಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳಿ. ಯಾವುದಾದರೂ ಪುಸ್ತಕ ತೆಗೆದು ಓದಿ ಮತ್ತೆ ಮಲಗುವ ಜಾಗಕ್ಕೆ ಬನ್ನಿ. ವ್ಯಾಯಾಮ ಲಘು ಸಂಗೀತ ಕೇಳುವಿಕೆಯಿಂದಲೂ ನಿದ್ದೆ ಬರಬಹುದು.

ಮಕ್ಕಳು, ವಿಶೇಷವಾಗಿ ಹದಿಹರೆಯದ ಮಕ್ಕಳಿಗೆ ಕನಿಷ್ಟ 9 ಘಂಟೆಯ ನಿದ್ದೆಯು ಅಗತ್ಯವಾಗಿದೆ. ಬೆಳವಣಿಗೆಯ ಹಾರ್ಮೋನುಗಳು ನಿದ್ರಾವಸ್ಥೆಯಲ್ಲಿ ಸ್ರವಿಸುವುದರಿಂದ ಅದರ ಬೆಳವಣಿಗೆ ನಿದ್ರೆಯ ಸಮಯ ದಲ್ಲಿ ಆಗುತ್ತದೆಂದು ಭಾವಿಸಬಹುದು. ಹಾರ್ಮೋನುಗಳ ವ್ಯತ್ಯಾಸವಾಗುವಿಕೆ ಅವರ ನಿದ್ರಾಹೀನತೆಗೆ ಕಾರಣವಾಗಿರ ಬಹುದು. ಆದರೆ, ಈಗಿನ ಯುವಕ-ಯುವತಿಯರು ನಿದ್ದೆಗೆಡುವಿಕೆ, ಹಾರ್ಮೋನ್ ವ್ಯತ್ಯಾಸಕ್ಕಿಂತಲೂ ಪ್ರಬಲ ವಾದ ಇನ್ನಿತರ ಕಾರಣಗಳೂ ಇವೆ. ಟಿ.ವಿ., ಇಂಟರ್‍ನೆಟ್, ಮೊಬೈಲ್, ವಿಡಿಯೋಗೇಮ್‍ಗಳು ಇಂದಿನ ಯುವ ಜನಾಂಗ ಅಪರಾತ್ರಿಯವರೆಗೂ ನಿದ್ದೆಗೆಡಲು ಕಾರಣವಾಗಿದೆ. ಜಂಕ್‍ಫುಡ್‍ನ ಬಳಿಕ ಅವರ ಆರೋಗ್ಯಕ್ಕೆ ಧಕ್ಕೆ ತರುವುದು ಈ ನಿದ್ದೆಗೆಡುವಿಕೆಯಾಗಿದೆ. ಮನೆಯ ಹಿರಿಯರು ಕರೆದರೂ ಕೇಳಿಸದ ಇವರಿಗೆ ಸೆಲ್‍ಫೋನ್ ಒಂದು ಚಿಕ್ಕ ಶಬ್ದ ಅವರನ್ನು ಬಡಿದೆಬ್ಬಿಸುತ್ತದೆ! ಈ ಅಭ್ಯಾಸವನ್ನು ಮೊಳಕೆಯಲ್ಲೇ ಚಿವುಟಬೇಕೆಂಬುದೇ ತಜ್ಞರ ಅಭಿಪ್ರಾಯ. ಏಕೆಂದರೆ, ನಿದ್ರಾಹೀನತೆಗೂ, ಬೊಜ್ಜಿಗೂ ಅವಿನಾಭಾವ ಸಂಬಂಧವಿದೆ. ಯುವ ಜನಾಂಗದ ಮೇಲೆ ಶಿಕ್ಷಣದಲ್ಲೂ, ಶಿಕ್ಷಣೇತರ ಕ್ಷೇತ್ರಗಳಲ್ಲೂ ಪೈಪೋಟಿ ನಡೆಸಿ ಮುನ್ನುಗ್ಗಬೇಕಾದಂತಹ ಒತ್ತಡವಿರುವುದರಿಂದ ದೇಹಕ್ಕೆ ಅಗತ್ಯವಾದ ವ್ಯಾಯಾಮದ ಕೊರತೆಯೂ ಇರುತ್ತದೆ. ಇದರಿಂದಾಗಿ, ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿರೋಗ, ಟೈಪ್ 2 ಮಧುಮೇಹಕ್ಕೆ ಗುರಿಯಾಗುತ್ತಾರೆ. ಈ ಬಗ್ಗೆ ಹಿರಿಯರು ಅಸಡ್ಡೆ ತೋರದೆ, ವಿಳಂಬ ಮಾಡದೆ ವೈದ್ಯರ ಸಲಹೆಯನ್ನು ಪಡೆದು ಚಿಕಿತ್ಸೆ ಮಾಡಬೇಕು.

Leave a Reply