ಬೆಂಗಳೂರು: ರಾಜ್ಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಪ್ರಗತಿಯಲ್ಲಿದ್ದು ನಮ್ಮ ರಾಜ್ಯ ದೇಶದಲ್ಲಿಯೇ ಆರನೇ ಸ್ಥಾನದಲ್ಲಿದೆ. ಈ ಯೋಜನೆಯನ್ನು ಚುರುಕುಗೊಳಿಸಲು ನಗರಾಭಿವೃದ್ಧಿ ಇಲಾಖೆ ಮುಂದಾಗಿದ್ದು ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯ ರಾಜ್ಯಮಟ್ಟದ ಸಮಿತಿ ಪ್ರತಿ ತಿಂಗಳು ಪ್ರಗತಿಯ ಪರಾಮರ್ಶೆ ನಡೆಸುತ್ತಿದೆ ಎಂದು ನಗರಾಭಿವೃದ್ದಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.

ಯೋಜನೆಗೆ ಪ್ರತಿವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 100 ಕೋಟಿ ರೂ.ವೆಚ್ಚ ಮಾಡುತ್ತಿದೆ. ಇದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಒಟ್ಟು 6448 ಕೋಟಿ ರೂ. ಯೋಜನೆ ಇದಾಗಿದ್ದು 2500 ಕೋಟಿ ರೂ.ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು ಅಷ್ಟೇ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದರು.
ಬಿಬಿಎಂಪಿ, ಶಿವಮೊಗ್ಗ, ಮಂಗಳೂರು, ಬೆಳಗಾವಿ, ದಾವಣಗೆರೆ, ತುಮಕೂರು, ಹುಬ್ಬಳ್ಳಿ ಧಾರವಾಡಗಳಲ್ಲಿ ಯೋಜನೆ ಜಾರಿಗೆ ಬರುತ್ತಿದೆ. ದಾವಣಗೆರೆಯಲ್ಲಿ ಪುರಿಭಟ್ಟಿಯನ್ನು ಆಧುನೀಕರಣ ಮಾಡಲಾಗುತ್ತಿದೆ. ಯೋಜನೆ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಲು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ತಂಡ ಇದೇ ತಿಂಗಳು 10ರಿಂದ ಪ್ರವಾಸ ಮಾಡಲಿದೆ ಎಂದು ತಿಳಿಸಿದರು. ಯೋಜನೆ ಜಾರಿ ಸಂಬಂಧ ಜಿಲ್ಲಾಮಟ್ಟದಲ್ಲಿ ಅಸ್ತಿತ್ವದಲ್ಲಿರುವ ಸಮಿತಿಗಳಿಗೆ ಸಂಸದರು, ಶಾಸಕರನ್ನು ಸೇರಿಸಿಕೊಳ್ಳಬೇಕು ಎಂಬ ಬೇಡಿಕೆ ಬಂದಿತ್ತು.

ಆದರೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಯಲ್ಲಿ ಅದಕ್ಕೆ ಅವಕಾಶ ಇಲ್ಲದಿರುವುದರಿಂದ ಸೇರಿಸಿಕೊಂಡಿಲ್ಲ ಎಂದು ಹೇಳಿದರು. ಆನ್‌ಲೈನ್ ಅನುಮತಿ ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಆನ್ ಲೈನ್ ಮೂಲಕ ಅನುಮತಿ ನೀಡುವ ನೂತನ ಯೋಜನೆಯನ್ನು ಇದೇ ತಿಂಗಳು 11ರಂದು ಮುಖ್ಯಮಂತ್ರಿಗಳು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಉದ್ಘಾಟನೆ ಮಾಡಲಿದ್ದಾರೆ.

ಈ ಯೋಜನೆಯಲ್ಲಿ ಸಣ್ಣ ಅಳತೆ ನಿವೇಶನದಾರರು ತಾವೇ ಯೋಜನಾ ನಕ್ಷೆ ರೂಪಿಸಿಕೊಂಡು ಅದನ್ನು ತಾವು ನಿರ್ಮಾಣ ಮಾಡಿದ ಮನೆ ಮುಂದೆ ಪ್ರದರ್ಶನ ಮಾಡಬಹುದು. ಯೋಜನಾ ನಕ್ಷೆಗಾಗಿ ಅವರು ಅನುಮತಿ ಪಡೆಯಬೇಕಾಗಿಲ್ಲ. ಈ ಯೋಜನೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಕಟ್ಟಿ ಆನ್‌ಲೈನ್ ಮೂಲಕ ಅನುಮತಿ ಪಡೆಯಬಹುದು ಎಂದರು.

Leave a Reply